Site icon Vistara News

IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

IPL 2024

ಬೆಂಗಳೂರು: ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಆರ್​ಸಿಬಿಯ (RCB) ಭರವಸೆಗಳು ಮೇ 22 ರ ಬುಧವಾರ ಕೊನೆಗೊಂಡವು. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ವಿರುದ್ಧ ಸೋತ ನಂತರ ಐಪಿಎಲ್ 2024 ರ (IPL 2024) ಎಲಿಮಿನೇಟರ್​ ಹಂತದಲ್ಲಿಯೇ ರೆಡ್​ಆರ್ಮಿ ಹೊರಕ್ಕೆ ಬಿತ್ತು. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಪಂದ್ಯಾವಳಿಯ ನಾಕೌಟ್ ಹಂತದಲ್ಲಿ ತನ್ನ ಆವೇಗ ಉಳಿಸಿಕೊಳ್ಳಲಿಲ್ಲ. ಆರು ಪಂದ್ಯಗಳ ಗೆಲುವಿನ ನಂಬಲಾಗದ ಓಟವನ್ನು ಮುಂದುವರಿಸಲಿಲ್ಲ. ಮತ್ತದೇ ಹಳೆ ರಾಗವೆಂಬಂತೆ ಸೋಲಿನ ಸುಳಿಗೆ ಸಿಲುಕಿ ಕೋಟ್ಯಂತರ ಅಭಿಮಾನಿಗಳಿಗೆ ಬೇಸರ ಮೂಡಿಸಿದರು.

ನಾಕೌಟ್ ಹಂತದಲ್ಲಿ ಒತ್ತಡಕ್ಕೆ ಒಳಗಾಗುವ ಆರ್​​ಸಿಬಿ ಚಾಳಿ ಇಲ್ಲಿಯೂ ಮುಂದುವರಿಯಿತು. ಆರ್​ಆರ್​ ತಂಡದ ಹಿಂದೆ ಈ ಹಿಂದೆ ನಾಕೌಟ್​ ಹಂತದಲ್ಲಿ ಸೋತಂತೆ ಇಂದೂ ಸೋತಿತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಇಬ್ಬನಿ ಪರಿಣಾಮ ಸೇರಿದಂತೆ ರನ್​ ಚೇಸ್ ಮಾಡುವ ತಂಡಕ್ಕೆ ಅನುಕೂಲವಾಗಿದ್ದ ಪರಿಸ್ಥಿತಿಯಲ್ಲಿ ಕಡಿಮೆ ಸ್ಕೋರ್ ಆಗಿತ್ತು. ಹೀಗಾಗಿ ಸೋಲು ಸಹಜವಾಗಿಯೇ ಬಂದಿದೆ. ಇದೇ 17 ಆವೃತ್ತಿಗಳು ಮುಗಿದರೂ ಆರ್​ಸಿಬಿಯ ಕಪ್​ ಬರ ನೀಗಲಿಲ್ಲ. ಕಪ್​ಗಾಗಿ ಕಾಯುವ ದಿನಗಳು ಮತ್ತಷ್ಟು ಮುಂದೂಡಿಕೆಯಾದವು.

ವಿಶೇಷ ಎಂದರೆ ಎಲಿಮಿನೇಟರ್​​ನಲ್ಲಿ ಲಕ್ನೋವನ್ನು ಸೋಲಿಸಿದ ನಂತರ ಆರ್​ಸಿಬಿ ತಂಡವು 2022 ರ ಋತುವಿನಲ್ಲಿ ಕ್ವಾಲಿಫೈಯರ್ 2 ಹಂತದಲ್ಲಿ ರಾಲ್ಸ್​​ನಿಂದಲೇ ಹೊಡೆತ ತಿಂದು ಹೊರಕ್ಕೆ ಬಿದ್ದಿತ್ತು. 2020 ಮತ್ತು 2021ರಲ್ಲಿಯೂ ಆರ್​ಸಿಬಿ ಎಲಿಮಿನೇಟರ್​ನಲ್ಲಿ ಸೋಲು ಕಂಡಿತ್ತು. 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​​ಸಿಬಿ ಕೊನೆಯ ಬಾರಿ ಫೈನಲ್ ತಲುಪಿತ್ತು.

ಪಂದ್ಯದಲ್ಲಿ ಏನಾಯಿತು?

ಬೌಲರ್​ಗಳ ಸಂಘಟಿತ ಹೋರಾಟ ಹಾಗೂ ಯಶಸ್ವಿ ಜೈಸ್ವಾಲ್ (45 ರನ್​) ಹಾಗೂ ರಿಯಾನ್ ಪರಾಗ್​ (36 ರನ್​) ಬ್ಯಾಟಿಂಗ್ ಬಲದಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ 2024ರ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಲೀಗ್ ಹಂತದಲ್ಲಿ ಸತತ ನಾಲ್ಕು ಸೋಲು ಹಾಗೂ ಮಳೆಯಿಂದಾಗಿ ಒಂದು ಪಂದ್ಯ ರದ್ದುಗೊಂಡ ಕಾರಣ ಬೇಸರಕ್ಕೆ ಒಳಗಾಗಿದ್ದ ರಾಜಸ್ಥಾನ್ ಬಳಗ ಈ ಗೆಲುವಿನೊಂದಿಗೆ ಖುಷಿ ಕಂಡು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ಅಲ್ಲಿ ಸಂಜು ಬಳಗ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

ಈ ಸೋಲಿನೊಂದಿಗೆ ಆರ್​ಸಿಬಿ ತಂಡದ 2024ರ ಐಪಿಎಲ್​ ಅಭಿಯಾನ ಮುಕ್ತಾಯಗೊಂಡಿತು. ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿರುವುದೇ ರೆಡ್​ ಆರ್ಮಿಯ ದೊಡ್ಡ ಸಾಧನೆ ಎನಿಸಿಕೊಂಡಿತು. ಜತೆಗೆ ಆರ್​​ಸಿಬಿಯ ಅಪಾರ ಅಭಿಮಾನಿಗಳ ಹೃದಯ ಛಿದ್ರಗೊಂಡಿತು. ಈ ಬಾರಿಯಾದರೂ ಕಪ್​ ಗೆಲ್ಲಬೇಕೆಂಬ ಆಸೆ ಕಮರಿತು. ಕಷ್ಟದಲ್ಲಿ ಪ್ಲೇಆಫ್​ ಹಂತಕ್ಕೇರಿದ ಹೊರತಾಗಿಯೂ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಚೆನ್ನೈ ವಿರುದ್ಧದ ಲೀಗ್ ಪಂದ್ಯದಲ್ಲಿ ಹೆಚ್ಚು ನಿಖರವಾಗಿ ಆಡಿದ್ದ ಆರ್​ಸಿಬಿ ಈ ಪಂದ್ಯದಲ್ಲಿ ನಿರ್ಲಕ್ಷ್ಯ ತೋರಿತು. ಬ್ಯಾಟಿಂಗ್​ನಲ್ಲಿ ಅನಗತ್ಯವಾಗಿ ವಿಕೆಟ್​ ಒಪ್ಪಿಸಿದರೆ ಬೌಲಿಂಗ್ ವೇಳೆಯೂ ಕ್ಯಾಚ್​ ಕೈಚೆಲ್ಲಿ, ಕಳಪೆ ಫೀಲ್ಡಿಂಗ್ ಮಾಡಿ, ರನ್​ಔಟ್​ ಚಾನ್ಸ್​ ಕಳೆದುಕೊಂಡಿತು. ಇದು ಸೋಲಿಗೆ ಕಾರಣವಾಯಿತು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 172 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

Exit mobile version