Site icon Vistara News

ಐಪಿಎಲ್ ಪ್ರೋಮೊ ಬಿಡುಗಡೆ; ರಗಡ್​ ಲುಕ್​ನಲ್ಲಿ ಪಂತ್, ರೆಬೆಲ್​ ಅವತಾರದಲ್ಲಿ ರಾಹುಲ್​​

Rishabh Pant, KL Rahul

ಬೆಂಗಳೂರು: ಕ್ರಿಕೆಟ್​ ಪ್ರಿಯರ 17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಮಾರ್ಚ್​ 22ರಿಂದ ಟೂರ್ನಿಗೆ ಚಾಲನೆ ಸಿಗಲಿದೆ. ಈ ಬಾರಿ ಲೋಕಸಭಾ ಚುನಾವಣೆ ಇರುವುದರಿಂದ ಟೂರ್ನಿಯಲ್ಲಿ 2 ಹಂತದಲ್ಲಿ ನಡೆಸಲಾಗುತ್ತದೆ. ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(CSK)​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB) ಮುಖಾಮುಖಿಯಾಗಲಿದೆ. ಇದೀಗ ಟೂರ್ನಿಯ ಪ್ರಸಾರಕರಾದ ಸ್ಟಾರ್​ ಸ್ಪೋರ್ಟ್(Star Sports) ಪ್ರೋಮೊವನ್ನು ಬಿಡುಗಡೆ ಮಾಡಿದೆ.

ಸ್ಟಾರ್ ಸ್ಪೋರ್ಟ್ಸ್​ ನೆಟ್​ವರ್ಕ್ ಬಿಡುಗಡೆ ಮಾಡಿರುವ ಐಪಿಎಲ್​ 17ನೇ ಆವೃತ್ತಿಯ ಪ್ರೋಮೊದಲ್ಲಿ​ ರಿಷಭ್​ ಪಂತ್​(Rishabh Pant) ಶ್ರೇಯಸ್​ ಅಯ್ಯರ್​(Shreyas Iyer), ಕೆ.ಎಲ್​ ರಾಹುಲ್​(KL Rahul) ಮತ್ತು ಹಾರ್ದಿಕ್​ ಪಾಂಡ್ಯ(Hardik Pandya) ಕಾಣಿಸಿಕೊಂಡಿದ್ದಾರೆ. ಆದರೆ, ಸ್ಟಾರ್​ ಆಟಗಾರರಾದ ವಿರಾಟ್​ ಕೊಹ್ಲಿ, ಮಹೇಂದ್ರ ಸಿಂಗ್​ ಧೋನಿ, ರೋಹಿತ್​ ಶರ್ಮ ಅವರಂತಹ ಆಟಗಾರರನ್ನು ಆಯ್ಕೆ ಮಾಡದ್ದು ಅಚ್ಚರಿ ಉಂಟುಮಾಡಿದೆ.

ಅಂಪೈರ್​ಗೆ ಬೈದ ರಾಹುಲ್​

ಲಕ್ನೋ ತಂಡದ ನಾಯಕ, ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರು ಈ ಪ್ರೋಮೊದಲ್ಲಿ ಅತ್ಯಂತ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿಯೇ ರಗಡ್ ಆಗಿ ಮಾತನಾಡಿದ್ದು, ಅಂಪೈರ್ ವಿರುದ್ಧ ಸಿಡಿದಿದ್ದಾರೆ. ರಾಹುಲ್​ ಗೆಳೆಯರೊಂದಿಗೆ ಆರ್​ಸಿಬಿ ಮ್ಯಾಚ್ ನೋಡುತ್ತಿರುತ್ತಾರೆ. ಈ ವೇಳೆ ಆರ್​ಸಿಬಿ ಬ್ಯಾಟರ್ ಸಿಕ್ಸರ್​ ಬಾರಿಸಿದರೂ ಫೀಲ್ಡ್​ ಅಂಪೈರ್​ ಔಟೆಂದು ತೀರ್ಪು ನೀಡುತ್ತಾರೆ. ಇದನ್ನು ಗಮನಿಸಿದ ರಾಹುಲ್, ‘ಯಾರೋ ಇವ್ನು, ಅಂಪೈರ್ ಅಂತೆ ಅಂಪೈರ್, ಅದು ಔಟಿಲ್ಲ ಮಾರಾಯ, ಹುಚ್ಚಾನಾ ನೀನು, ಇವನನ್ನು ಹಿಡ್ಕೊಂಡು ಯಾರಾದರೂ ಚಚ್ಚಿಹಾಕಿ’ ಎಂದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ IPL 2024: ಅಭ್ಯಾಸ ಆರಂಭಿಸಿದ ಹಾಲಿ ಚಾಂಪಿಯನ್ ಸಿಎಸ್​ಕೆ​; ಆರ್​ಸಿಬಿ ಮೊದಲ ಎದುರಾಳಿ

ಕಾರು ಅಪಘಾತದಿಂದ ಚೇತರಿಕೆ ಕಂಡು ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡಲು ಸಿದ್ಧರಾಗಿರುವ ರಿಷಭ್​ ಪಂತ್​ ಅವರು ಪ್ರೋಮೊದ ಆರಂಭದಲ್ಲಿ ಕಾಣಿಸುತ್ತಾರೆ. ಪಂಜಾಬಿ ಶೈಲಿಯಲ್ಲಿ ಕಾಣಿಸಿಕೊಂಡ ಅವರು ಡಾಬಾವೊಂದಕ್ಕೆ ಡಾನ್​ಗಳ ರೀತಿಯಲ್ಲಿ ಪಂದ್ಯ ನೋಡಲು ಬರುತ್ತಾರೆ. ಈ ವೇಳೆ ಡಾಬಾದಲ್ಲಿದ್ದವರು ಪಂತ್ ಕಂಡು ಓಡಿ ಪಕ್ಕಕ್ಕೆ ಸರಿಯುತ್ತಾರೆ. ಟಿವಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಚಾಂಪಿಯನ್​ ಆದಾಗ ಧೋನಿ ಅವರು ಜಡೇಜಾ ಅವರನ್ನು ಹೆಗಲ ಮೇಲೆ ಹೊತ್ತುಕೊಂಡ ದೃಶ್ಯವನ್ನು ತೋರಿಸಲಾಗುತ್ತದೆ. ಈ ವೇಳೆ ಪಂತ್​ ಕಣ್ಣೀರು ಹಾಕುತ್ತಾರೆ. ಪ್ರಾದೇಶಿಕ ಭಾಷೆಗಳಿಗೆ ಅನುಗುಣವಾಗಿ 4 ಮಂದಿ ಆಟಗಾರರನ್ನು ನಾಲ್ಕು ಬಾಷೆಗಳಿಗೆ ಅನ್ವಯವಾಗುವಂತೆ ಈ ಪ್ರೋಮೊದಲ್ಲಿ ತೋರಿಸಲಾಗಿದೆ.

Exit mobile version