Site icon Vistara News

IPL 2024: ಐಪಿಎಲ್​ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಗುಜರಾತ್​ ತಂಡ ಸೇರಿದ ಕನ್ನಡಿಗ

BR Sharath

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್(IPL 2024)​ ಆರಂಭಕ್ಕೆ ಒಂದೆಡೆ ಕ್ಷಣಗಣನೆ ಶುರುವಾಗಿದೆ. ಇದೇ ವೇಳೆ ಕರ್ನಾಟಕದ ಯುವ, ಪ್ರತಿಭಾನ್ವಿತ ಕ್ರಿಕೆಟಿಗ ಬಿ ಆರ್ ಶರತ್‌(BR Sharath) ಅವರನ್ನು ಗುಜರಾತ್ ಟೈಟಾನ್ಸ್(Gujarat Titans) ಫ್ರಾಂಚೈಸಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಬೈಕ್​ ಅಪಘಾತದಲ್ಲಿ ಮೊಣಕಾಲಿಗೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ರಾಬಿನ್ ಮಿನ್ಜ್(Robin Minz ) ಸ್ಥಾನಕ್ಕೆ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ನಡೆದಿದ್ದ ಆಟಗಾರರ ಹರಾಜಿನಲ್ಲಿ ರಾಬಿನ್ ಮಿನ್ಜ್ ಅವರನ್ನು 3.60 ಕೋಟಿ ರೂ. ನೀಡಿ ಗುಜರಾತ್​ ತಂಡ ಖರೀದಿಸಿದ್ದು.

ಚೊಚ್ಚಲ ಐಪಿಎಲ್​ ಟೂರ್ನಿಯನ್ನಾಡಲು ಸಿದ್ಧತೆಯಲ್ಲಿದ್ದ ಮಿನ್ಜು ಇದೇ ತಿಂಗಳ ಮೊದಲ ವಾರದಲ್ಲಿ ತಮ್ಮ ಕವಾಸಕಿ ಸೂಪರ್‌ಬೈಕ್ ಓಡಿಸುವಾಗ ನಿಯಂತ್ರಣ ತಪ್ಪಿ ಇನ್ನೊಂದು ಬೈಕ್‌ಗೆ ಡಿಕ್ಕಿ ಹೊಡೆದು ಬಿದ್ದು ಗಾಯಗೊಂಡಿದ್ದರು. ಇದೀಗ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ 2024ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಯಾರು ಈ ಶರತ್?


27 ವರ್ಷದ ಕರ್ನಾಟಕದ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಬಿ ಆರ್ ಶರತ್ 2018ರಲ್ಲಿ ಕರ್ನಾಟಕ ತಂಡದ ಪರ ಪದಾರ್ಪಣೆ ಮಾಡಿದ್ದರು. ಇದುವರೆಗೂ ಕರ್ನಾಟಕ ಪರ 28 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಶರತ್, 15.61 ರ ಸರಾಸರಿ ಮತ್ತು 118.84 ರ ಸ್ಟ್ರೈಕ್ ರೇಟ್‌ನಲ್ಲಿ 328 ರನ್ ಬಾರಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 20, ಲಿಸ್ಟ್ ‘ಎ’ನಲ್ಲಿ 43 ಪಂದ್ಯಗಳನ್ನಾಡಿ ಕ್ರಮವಾಗಿ 616 ಹಾಗೂ 732 ರನ್ ಬಾರಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 7 ಅರ್ಧಶತಕಗಳು ಸೇರಿವೆ. ವಿಕೆಟ್​ ಕೀಪಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಇವರು 19 ಕ್ಯಾಚ್ ಹಾಗೂ 9 ಸ್ಟಂಪಿಂಗ್ ಮಾಡಿದ್ದಾರೆ. 2023 ರಲ್ಲಿ ವಿಜಯ್ ಹಜಾರೆ ಟ್ರೋಫಿ ಅವರ ಕೊನೆಯ ಪಂದ್ಯಾವಳಿಯಾಗಿದೆ. ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಮಾರ್ಚ್ 24ರಂದು ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಇದನ್ನೂ ಓದಿ IPL Match Preview : ಮೊದಲ ಹಣಾಹಣಿ ಗೆದ್ದು ಟ್ರೋಫಿಯೆಡೆಗೆ ದಾಪುಗಾಲು ಇಡುವುದೇ ಆರ್​ಸಿಬಿ?

ಶಮಿ ಬದಲಿಗೆ ಸಂದೀಪ್ ವಾರಿಯರ್


ಮೊಹಮ್ಮದ್ ಶಮಿ(Mohammed Shami) ಬದಲಿಗೆ ಕೇರಳ ಮೂಲಕ ವೇಗದ ಬೌಲರ್ ಸಂದೀಪ್ ವಾರಿಯರ್(Sandeep Warrier) ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ. ದೇಶೀಯ ಕ್ರಿಕೆಟ್​ನಲ್ಲಿ ಪ್ರಸ್ತುತ ತಮಿಳುನಾಡನ್ನು ಪ್ರತಿನಿಧಿಸುವ ಕೇರಳ ಮೂಲದ ಸಂದೀಪ್​ ವಾರಿಯರ್ ಕಳೆದ ವರ್ಷ ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಐಪಿಎಲ್​ನಿಂದ(IPL 2024) ಹೊರಬಿದ್ದಿದ್ದ ಜಸ್​ಪ್ರೀತ್​ ಬುಮ್ರಾ ಸ್ಥಾನಕ್ಕೆ  ಮುಂಬೈ ಇಂಡಿಯನ್ಸ್​ ತಂಡಕ್ಕೆ ಆಯ್ಕೆಯಾಗಿದ್ದರು. ಈ ಬಾರಿ ಕೂಡ ಅವರು ಬದಲಿ ಆಟಗಾರನಾಗಿ ಗುಜರಾತ್ ಟೈಟಾನ್ಸ್ ಸೇರಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ನಡೆದಿದ್ದ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದರೂ ಮತ್ತೆ ಅದೃಷ್ಟ ಖುಲಾಯಿಸಿದೆ. ಶಮಿ ಬದಲಿಗೆ ಆಯ್ಕೆಯಾದ ವಿಚಾರವನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸ್‌ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ತಿಳಿಸಿದೆ. 32 ವರ್ಷದ ಸಂದೀಪ್​ ವಾರಿಯರ್‌ ಅವರು ಇದುವರೆಗೆ ಐದು ಐಪಿಎಲ್ ಪಂದ್ಯಗಳನ್ನು ಆಡಿ ಕೇವಲ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ. 

Exit mobile version