Site icon Vistara News

IPL 2024: ಪಾಂಡ್ಯ, ರೋಹಿತ್​ ಬೆಂಬಲಿಗರ ಜಟಾಪಟಿ; ಕೈ ಮಿಲಾಯಿಸಿ ಘರ್ಷಣೆ

Rohit -Hardik Fans Fight

ಅಹಮದಾಬಾದ್​: ರೋಹಿತ್​ ಶರ್ಮ(Rohit Sharma) ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ(Hardik Pandya) ಈ ಸ್ಥಾನಕ್ಕೆ ಆಯ್ಕೆಯಾದಾಗಲೇ ಉಭಯ ಆಟಗಾರರ ಅಭಿಮಾನಿಗಳ ಮಧ್ಯೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಜಟಾಪಟಿ ನಡೆದಿತ್ತು. ಇದೀಗ ಇಬ್ಬರೂ ಆಟಗಾರರ ಬೆಂಬಲಿಗರು ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ(Rohit -Hardik Fans Fight). ಈ ವಿಡಿಯೊ ವೈರಲ್(viral video)​ ಆಗಿದೆ.

ಭಾನುವಾರ ನಡೆದ ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಫೀಲ್ಡಿಂಗ್​ ವೇಳೆ ರೋಹಿತ್​ ಅವರನ್ನು ಹಲವು ಬಾರಿ ಸತಾಯಿಸಿದರು. ಒಮ್ಮೆ ಸ್ಲಿಪ್, ಮತ್ತೊಮ್ಮೆ ಲಾಂಗ್ ಆನ್​, ಇನ್ನೊಮ್ಮೆ ಲೆಗ್​ ಸೈಡ್, ಮಿಡ್ ವಿಕೆಟ್​ನತ್ತ ಹೀಗೆ ಮೈದಾನದ ಮೂಲೆ ಮೂಲೆಗೂ ಓಡಿಸಿದರು. ಇದು ರೋಹಿತ್​ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿತು. ಪಂದ್ಯ ಸೋತ ಬಳಿಕ ಸೋಲಿಗೆ ಹಾರ್ದಿಕ್​ ಅವರೇ ಕಾರಣ ಎಂದು ಮುಂಬೈ ಮತ್ತು ರೋಹಿತ್​ ಅಭಿಮಾನಿಗಳು ಸೇರಿಕೊಂಡು ಪಾಂಡ್ಯ ಅಭಿಮಾನಿಗಳಿಗೆ ಸರಿಯಾಗಿ ಎರಡು ಬಾರಿಸಿದರು. ಪ್ರತಿಯಾಗಿ ಪಾಂಡ್ಯ ಅಭಿಮಾನಿಗಳು ಕೂಡ ರೋಹಿತ್​ ಅಭಿಮಾನಿಗಳ ಮೇಲೆ ಹಲ್ಲೆ ನಡೆಸಿದರು. ಕೆಲ ಕಾಲ ಉಭಯ ಆಟಗಾರರ ಅಭಿಮಾನಿಗಳು ಸ್ಟೇಡಿಯಂನಲ್ಲೇ ಹೊಡೆದಾಟ ನಡೆಸಿದರು. ಈ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ IPL 2024: ಐಪಿಎಲ್​ನ 2 ಗುಂಪು ಪ್ರಕಟ; ಒಂದೇ ಗುಂಪಿನಲ್ಲಿ ಆರ್​ಸಿಬಿ-ಚೆನ್ನೈ

ರೋಹಿತ್‌ ಶರ್ಮ ಅವರನ್ನು ನಾಯಕತ್ವ ಸ್ಥಾನದಿಂದ ಕೈಬಿಟ್ಟು ಪಾಂಡ್ಯ ಅವರಿಗೆ ಪಟ್ಟ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಮಂಬೈ ಇಂಡಿಯನ್ಸ್‌ ಫ್ರಾಂಚೈಸಿಯು ಟ್ವಿಟರ್‌ನಲ್ಲಿ (ಎಕ್ಸ್‌) ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಕೂಡ ಕಳೆದುಕೊಂಡಿತ್ತು. ಪಾಂಡ್ಯ ಅವರು ಮುಂಬೈ ತಂಡದ ನಾಯಕನಾದಾಗ ತಂಡದ ಸಹ ಆಟಗಾರರಾದ ಸೂರ್ಯಕುಮಾರ್​ ಯಾದವ್​ ಮತ್ತು ಜಸ್​ಪ್ರೀತ್​ ಬುಮ್ರಾ ಕೂಡ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೇ ಪಂದ್ಯದಲ್ಲಿ ನಾಯಿಯೊಂದು ಮೈದಾನಕ್ಕೆ ನುಗ್ಗಿತು. ಈ ವೇಳೆ ಗ್ಯಾಲರಿಯಲ್ಲಿದ್ದ ರೋಹಿತ್​ ಅಭಿಮಾನಿಗಳು ನಾಯಿ ಓಡುತ್ತಿರುವುದನ್ನು ಕಂಡು ಹಾರ್ದಿಕ್​…ಹಾರ್ದಿಕ್​ ಎಂದು ಜೋರಾಗಿ ಕೂಗುವ ಮೂಲಕ ಪಾಂಡ್ಯ ಅವರನ್ನು ನಾಯಿಗೆ ಹೋಲಿಸಿದ್ದಾರೆ. ಈ ವಿಡಿಯೊ ಕೂಡ ವೈರಲ್​ ಆಗಿದೆ.

ಗುಜರಾತ್​ಗೆ 6 ರನ್​ ಗೆಲುವು


ಭಾನುವಾರ ನಡೆದ ದ್ವಿತೀಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧ ಗುಜರಾತ್​ ಟೈಟಾನ್ಸ್(Gujarat Titans)​ 6 ರನ್​ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್, ಜಸ್​ಪ್ರೀತ್​ ಬುಮ್ರಾ ಘಾತಕದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ 6 ವಿಕೆಟ್​ಗೆ 168 ರನ್​ಗಳ ಸಾಧಾರಣ ಮೊತ್ತ ಬಾರಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್(MI vs GT) ಭರ್ತಿ 20 ಓವರ್​ ಆಡಿ​ 9 ವಿಕೆಟ್​ ಕಳೆದುಕೊಂಡು 162 ರನ್​ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು. ಗುಜರಾತ್​ ಗೆಲುವಿನೊಂದಿಗೆ ಹಾಲಿ ಆವೃತ್ತಿಯಲ್ಲಿ ನಡೆದ ಎಲ್ಲ 5 ಪಂದ್ಯಗಳಲ್ಲಿಯೂ ತವರಿನ ತಂಡವೇ ಗೆಲುವು ಸಾಧಿಸಿದಂತಾಯಿತು.

Exit mobile version