ಮುಂಬಯಿ: ಹಾರ್ದಿಕ್ ಪಾಂಡ್ಯ(Hardik Pandya) ಅವರನ್ನು ಮುಂಬೈ ಇಂಡಿಯನ್ಸ್(Mumbai Indians) ತಂಡದ ನಾಯಕರನ್ನಾಗಿ ಮಾಡಿದ ವೇಳೆ ರೋಹಿತ್ ಶರ್ಮ(Rohit Sharma) ಅಭಿಮಾನಿಗಳು ಪಾಂಡ್ಯ ಮತ್ತು ಫ್ರಾಂಚೈಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ತಂಡದ ಕೆಲವು ಆಟಗಾರರು ಕೂಡ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ರೋಹಿತ್ ಮತ್ತು ಪಾಂಡ್ಯ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದೀಗ ಪಾಂಡ್ಯ ಅವರು ಅಭ್ಯಾಸ ವೇಳೆ ರೋಹಿತ್ ಅವರನ್ನು ಅಪ್ಪಿಕೊಂಡಿದ್ದಾರೆ. ಈ ಮೂಲಕ ತಮ್ಮ ಮಧ್ಯೆ ಎಲ್ಲವೂ ಸರಿ ಇದೆ ಎನ್ನುವ ಸ್ಪಷ್ಟ ಸಂದೇಶ ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ಪಾಂಡ್ಯ ಐದು ಬಾರಿ ಐಪಿಎಲ್(IPL 2024) ವಿಜೇತ ನಾಯಕ ರೋಹಿತ್ ಶರ್ಮ ಕಡೆಗೆ ಒಂದು ಅಪ್ಪುಗೆಯನ್ನು ಹಂಚಿಕೊಳ್ಳಲು ನಡೆದುಕೊಂಡು ಹೋಗುತ್ತಿರುವುದು ಕಾಣಬಹುದು. ಅಪ್ಪುಗೆ ಬಳಿಕ ಉಭಯ ಆಟಗಾರರು ಕೂಡ ನಗುವಿನ ಮೂಲಕವೇ ಸಂಭಾಷಣೆ ನಡೆಸಿದರು. ಜತೆಗೆ ರೋಹಿತ್ ಅವರಿಂದ ಹಲವು ಸಲಹೆಯನ್ನು ಕೂಡ ಪಡೆದರು. ಈ ವಿಡಿಯೊ ವೈರಲ್ ಆಗಿದೆ. ಮುಂಬೈ ಇಂಡಿಯನ್ಸ್ ಈ ವಿಡಿಯೊಗೆ ‘ಒಂದು ಕುಟುಂಬ’ ಎನ್ನುವ ಟ್ಯಾಗ್ ಬಳಸಿದೆ.
ಮಂಗಳವಾರ ಮುಂಬೈ ಇಂಡಿಯನ್ಸ್(Mumbai Indians) ತಂಡದ ಮಾಜಿ ನಾಯಕ ರೋಹಿತ್ ಶರ್ಮ(Rohit Sharma) 17ನೇ ಆವೃತ್ತಿಯ ಐಪಿಎಲ್ಗಾಗಿ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿ ವಿಡಿಯೊವನ್ನು ಮುಂಬೈ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು.
🙂 ➡️ 😊 ➡️ 😃 ➡️ 😁#OneFamily #MumbaiIndians @ImRo45 pic.twitter.com/PtPtYBGsfc
— Mumbai Indians (@mipaltan) March 19, 2024
3 ದಿನಗಳ ಹಿಂದಷ್ಟೇ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ರೋಹಿತ್ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿರುವ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಲು ಹಾರ್ದಿಕ್ ಪಾಂಡ್ಯ ಮತ್ತು ಮುಂಬೈ ಮುಖ್ಯ ಕೋಚ್ ಮಾರ್ಕ್ ಬೌಷರ್ ನಿರಾಕರಿಸಿದ್ದರು. ನಾಯಕತ್ವ ಬದಲಾವಣೆಗೆ ಸಂಬಂಧಿಸಿ ಕೇಳಲಾದ ಯಾವ ಪ್ರಶ್ನೆಗೂ ಪಾಂಡ್ಯ ಮತ್ತು ಬೌಷರ್ ಉತ್ತರಿಸದೆ ಮೌನಕ್ಕೆ ಶರಣಾಗಿದ್ದರು. ಇದೀಗ ರೋಹಿತ್ ಅವರನ್ನು ಪಾಂಡ್ಯ ಅಪ್ಪಿಕೊಳ್ಳುವ ಮೂಲಕ ನಮ್ಮ ಮಧ್ಯೆ ಯಾವುದೇ ಬಿನ್ನಮತವಿಲ್ಲ. ತಂಡಕ್ಕಾಗಿ ಆಡಲು ನಾವು ಸದಾ ಸಿದ್ಧ ಎನ್ನುವ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ IPL 2024: ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್; ಕರ್ನಾಟಕ ಇದೆಯೇ?
ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್(Mumbai Indians) ತಂಡ ಟ್ರೇಡಿಂಗ್ ಮೂಲಕ ಖರೀದಿಸಿ ತಂಡದ ನಾಯಕನನ್ನಾಗಿ ನೇಮಿಸಿದಾಗಿನಿಂದ ರೋಹಿತ್ ಶರ್ಮ(Rohit Sharma) ಅವರು ಮುಂಬೈ ತಂಡ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ, ರೋಹಿತ್ ತಂಡ ತೊರೆಯದೆ ಮುಂಬೈ ಪರವೇ ಕಣಕ್ಕಿಳಿಯುತ್ತಿದ್ದಾರೆ. ಮುಂದಿನ ಆವೃತ್ತಿಯಲ್ಲಿಯಲ್ಲಿಯೂ ಮುಂಬೈ ಪರವೇ ಆಡಲಿದ್ದಾರೆ ಎನ್ನುವುದು ಫ್ರಾಂಚೈಸಿಯ ಬಲವಾದ ನಂಬಿಕೆಯಾಗಿದೆ.
5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಟೂರ್ನಿಯಲ್ಲಿ ಕಳೆದ ಬಾರಿಯ ರನ್ನರ್-ಅಪ್ ಗುಜರಾತ್ ಟೈಟಾನ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಮಾರ್ಚ್ 24ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ದ್ವಿತೀಯ ಪಂದ್ಯವನ್ನು ಮಾರ್ಚ್ 27ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.