Site icon Vistara News

ಇಂದು ಐಪಿಎಲ್​ ವೇಳಾಪಟ್ಟಿ ಪ್ರಕಟ; ಆರ್​ಸಿಬಿಗೆ ಮೊದಲ ಪಂದ್ಯ, ಎದುರಾಳಿ ಯಾರು?

IPL 2024

ಮುಂಬಯಿ: ಕ್ರಿಕೆಟ್​ ಅಭಿಮಾನಿಗಳು ಕಾದು ಕುಳಿತಿರುವ 17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿಯ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ(IPL 2024 Schedule Announcement) ಇಂದು ಸಂಜೆ 5 ಗಂಟೆಗೆ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂದು ಬಿಸಿಸಿಐ(BCCI) ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(CSK)​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು(CSK vs RCB) ಮುಖಾಮುಖಿಯಾಗಲಿದೆ ಎಂದು ಹೇಳಲಾಗಿದೆ.

ಏತನ್ಮಧ್ಯೆ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರ್ಚ್ 22 ರಂದು M. A ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಆಡಲಿದೆ ಎಂದು ಸುದ್ದಿ ಸಂಸ್ಥೆ IANS ವರದಿ ಮಾಡಿದೆ. ಆದರೆ ಬಿಸಿಸಿಐ ಕಡೆಯಿಂದ ಅಧಿಕೃತ ಮುದ್ರೆಯೊಂದು ಬೀಳಬೇಕಿದೆ.

ಈಗಾಗಲೇ ಐಪಿಎಲ್​ ಅಧ್ಯಕ್ಷ ಅರುಣ್​ ಧುಮಾಲ್​ ಸಾರ್ವತ್ರಿಕ ಚುನಾವಣೆ ಇರುವ ಕಾರಣ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಮಂಗಳವಾರ ಪಿಟಿಐ ಜತೆ ಮಾತನಾಡುವ ವೇಳೆ ಈ ವಿಚಾರವನ್ನು ತಿಳಿಸಿದ್ದರು.

“ನಾವು ಮಾರ್ಚ್ 22 ರಂದು ಪಂದ್ಯಾವಳಿಯನ್ನು ಪ್ರಾರಂಭಿಸಲು ನೋಡುತ್ತಿದ್ದೇವೆ. ನಾವು ಸರ್ಕಾರಿ ಏಜೆನ್ಸಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ನಾವು ಮೊದಲು ಆರಂಭಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಸಂಪೂರ್ಣ ಪಂದ್ಯಾವಳಿಯು ಭಾರತದಲ್ಲಿ ನಡೆಯಲಿದೆ. ಮೇ 26 ರಂದು ಫೈನಲ್​ ಪಂದ್ಯ ನಡೆಸಲು ನೋಡುತ್ತಿದ್ದೇವೆ, 2023 ರ ಆವೃತ್ತಿಯಂತೆ ಈ ವರ್ಷ ಕೂಡ 74 ಪಂದ್ಯಗಳನ್ನು ಆಡಲಾಗುವುದು ಎಂದು ತಿಳಿಸಿದ್ದರು.

ಇದನ್ನೂ ಓದಿ IPL 2024: ಮಾರ್ಚ್​ 22ರಿಂದ ಐಪಿಎಲ್​ ಆರಂಭ; ಭಾರತದಲ್ಲೇ ಟೂರ್ನಿ

2009ರಲ್ಲಿ ಮಹಾಚುನಾವಣೆಯ ಕಾರಣದಿಂದ ಇಡೀ ಕೂಟವನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಹಾಗೆಯೇ 2014ರಲ್ಲಿಯೂ ಒಂದು ಹಂತದ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಇದೇ ಕಾರಣದಿಂದ ಈ ಬಾರಿಯ ಆವೃತ್ತಿಯೂ ಕೂಡ ಭಾರತದ ಬದಲಾಗಿ ವಿದೇಶಕ್ಕೆ ಸ್ಥಳಾಂತರವಾಗಲಿದೆ ಎಂಬ ಊಹಾಪೋಹಗಳು ಹಬ್ಬಿದ್ದವು ಇದೀಗ ಐಪಿಎಲ್​ ಅಧ್ಯಕ್ಷರು ಭಾರತದಲ್ಲಿಯೇ ಟೂರ್ನಿ ನಡೆಯಲಿದೆ ಎಂದು ಹೇಳುವ ಮೂಲಕ ಎಲ್ಲ ಗೊಂದಲಕ್ಕೆ ತೆರೆ ಎಳೆದಿದ್ದರು. ಇದೀಗ ವೇಳಾಪಟ್ಟಿ ಪ್ರಕಟ ಮಾತ್ರ ಬಾಕಿ ಇದೆ.

ಈ ಬಾರಿಯ ವಿಶೇಷತೆ ಏನು?


ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ಇಬ್ಬರು ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ 20 ಕೋಟಿ ರೂ.ಗಳ ಗಡಿ ದಾಟಿದ್ದಾರೆ. ಕಮಿನ್ಸ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ 20.50 ಕೋಟಿ ರೂ.ಗೆ ಖರೀದಿಸಿತು, ಈ ದಾಖಲೆಯು ಕೇವಲ 30 ನಿಮಿಷಗಳ ಕಾಲ ಉಳಿಯಿತು, ಕೋಲ್ಕತಾ ನೈಟ್ ರೈಡರ್ಸ್ ಮಿಚೆಲ್ ಸ್ಟಾರ್ಕ್​ಗೆ 24.75 ಕೋಟಿ ರೂ.ಗಳನ್ನು ಪಾವತಿಸಿತು. ಇದೇ ವೇಳೆ ಅನ್​ಕ್ಯಾಪ್ಡ್​ ಭಾರತೀಯರಾದ ಶುಭಂ ದುಬೆ ಮತ್ತು ಸಮೀರ್ ರಿಜ್ವಿ ಕೂಡ ಗಮನ ಸೆಳೆದರು. ಈ ಬಾರಿ 30 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 72 ಆಟಗಾರರನ್ನು ಒಟ್ಟು 230.45 ಕೋಟಿ ರೂ.ಗೆ 10 ಫ್ರಾಂಚೈಸಿಗಳು ತಮ್ಮ ತಮ್ಮ ತೆಕ್ಕೆಗೆ ತೆಗೆದುಕಂಡಿದ್ದವು. ಮಿನಿ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆದಿತ್ತು.

Exit mobile version