Site icon Vistara News

IPL 2024 : ಸಿಎಸ್​ಕೆ ವಿರುದ್ಧ 6 ವಿಕೆಟ್​ ಸುಲಭ ವಿಜಯ ದಾಖಲಿಸಿದ ಎಸ್​ಆರ್​ಎಚ್​

IPL 2024

ಹೈದಬಾರಾಬಾದ್​: ಏಡೆನ್​ ಮಾರ್ಕ್ರಮ್​ (36 ಎಸೆತಕ್ಕೆ 50 ರನ್​) ಅವರ ಅರ್ಧ ಶತಕ ಹಾಗೂ ಅಭಿಷೇಕ್ ಶರ್ಮಾ (12 ಎಸೆತಕ್ಕೆ 37 ರನ್​) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಸನ್​ ರೈಸರ್ಸ್​ ಹೈದರಾಬಾದ್ ತಂಡ ಐಪಿಎಲ್​ನ 2024ನೇ (IPL 2024) ಆವೃತ್ತಿಯ 18ನೇ ಪಂದ್ಯದಲ್ಲಿ ಬಲಿಷ್ಠ ಸಿಎಸ್​ಕೆ ತಂಡವನ್ನು ಸೋಲಿಸಿದೆ. ಇದರೊಂದಿಗೆ ಹೈದರಾಬಾದ್ ಮೂಲದ ತಂಡ ಹಾಲಿ ಆವೃತ್ತಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದೆ. ಹೈದರಾಬಾದ್​ ತಂಡ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿತು. ಅದೇ ರೀತಿ ತವರಿನ ಪ್ರೇಕ್ಷಕರಿಗೆ ಗೆಲುವಿನ ಸಂಭ್ರಮವನ್ನು ಉಣಬಡಿಸಿದೆ.

ಇಲ್ಲಿನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಸನ್​​ ರೈಸರ್ಸ್​ ಹೈದರಾಬಾದ್​ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಋತುರಾಜ್ ಗಾಯಕ್ವಾಡ್​ ನೇತೃತ್ವದ ಬಳಗ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 165 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಹೈದರಾಬಾದ್ ತಂಡ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ ನಷ್ಟ ಮಾಡಿಕೊಂಡು 166 ರನ್ ಬಾರಿಸಿ ಗೆಲುವು ಸಾಧಿಸಿತು. ಈ ಸೋಲಿನ ಹೊರತಾಗಿಯೂ ಸಿಎಸ್​ಕೆ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಕಾಪಾಡಿಕೊಂಡಿತು. ಚೆನ್ನೈಗೂ ಹಾಲಿ ಆವೃತ್ತಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಸೋಲು ಹಾಗೂ ಅಷ್ಟೇ ಸಂಖ್ಯೆಗೆ ಗೆಲುವು ಲಭಿಸಿದೆ.

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಹೈದಾರಾಬಾದ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 2.3 ಓವರ್​ಗಳಲ್ಲಿ 46 ರನ್ ಬಾರಿಸಿತು. ಆದರೆ, ಅಬ್ಬರಿಸುತ್ತಿದ್ದ ಅಭಿಷೇಕ್​ ಚಾಹರ್ ಎಸೆತಕ್ಕೆ ಜಡೇಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅದಕ್ಕೂ ಮೊದಲು ಅವರು 4 ಸಿಕ್ಸರ್ ಹಾಗೂ 3 ಫೋರ್​ ಸಮೇತ 37 ರನ್ ಕೊಡುಗೆ ಕೊಟ್ಟರು. ಬಳಿಕ ಜತೆಯಾದ ಏಡೆನ್​ ಮಾರ್ಕ್ರಮ್​ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 4 ಫೋರ್ ಹಾಗೂ 1 ಸಿಕ್ಸರ್​ ಸಮೇತ 50 ರನ್ ಬಾರಿಸಿ ಔಟಾದರು. ಅದಕ್ಕೂ ಮೊದಲು ಮತ್ತೊಬ್ಬ ಆರಂಭಿಕ ಬ್ಯಾಟರ್​ ಟ್ರಾವಿಡ್​ ಹೆಡ್​ 24 ಎಸೆತಕ್ಕೆ 31 ರನ್ ಬಾರಿಸಿದರು.

ಇದನ್ನೂ ಓದಿ: IPL 2024 : ಐಪಿಎಲ್​ ಪಂದ್ಯಕ್ಕೆ ನೀರು ಎಲ್ಲಿಂದ? ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನೋಟಿಸ್​

ವಿಕೆಟ್ ನಷ್ಟ ಮಾಡಿಕೊಂಡ ಹೊರತಾಗಿಯೂ ಎಸ್​ಆರ್​ಎಚ್​ ತಂಡದ ಗೆಲುವಿನ ಕಡೆಗಿನ ಅಭಿಯಾನ ಉತ್ತಮವಾಗಿತ್ತು. ಬಳಿಕ ಶಹಬಾಬ್ ಅಹಮದ್​ ತಿಣುಕಾಡಿ 18 ರನ್ ಬಾರಿಸಿ ಔಟಾದರು. ಆ ಬಳಿಕ ಹೆನ್ರಿಚ್ ಕ್ಲಾಸೆನ್​ 10 ರನ್ ಬಾರಿಸಿದರೆ ನಿತಿಶ್​ ಕುಮಾರ್​ ರೆಡ್ಡಿ 1 ಸಿಕ್ಸರ್ ಹಾಗೂ 1 ಫೋರ್​ ಸಮೇತ 14 ರನ್ ಬಾರಿಸಿ ಗೆಲುವು ತಂದುಕೊಟ್ಟರು.

ದುಬೆ ನೆರವು

ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡ ಸ್ವಲ್ಪ ಅಳುಕಿನಿಂದಲೇ ಆಡಿತು. ರಚಿನ್ ರವೀಂದ್ರ 12 ರನ್​ಗೆ ಔಟಾದರೆ ಋತುರಾಜ್ ಗಾಯಕ್ವಾಡ್​ 26 ರನ್ ಬಾರಿಸಿದರು. ಅಜಿಂಕ್ಯ ರಹಾನೆ 35 ರನ್ ಕೊಡುಗೆ ಕೊಟ್ಟರು. ಇವರ ಬ್ಯಾಟಿಂಗ್​ನಲ್ಲಿ ಹೆಚ್ಚು ಸ್ಟ್ರೈಕ್​ ರೇಟ್ ಮೂಡಿ ಬರದ ಕಾರಣ ಸಿಎಸ್​ಕೆ ರನ್​ ಹಿಗ್ಗಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ 24 ಎಸೆತಕ್ಕೆ 45 ರನ್ ಬಾರಿಸಿ ತಂಡದ ಮೊತ್ತ ಬೆಳೆಯಲು ಕಾರಣರಾದರು. ರವೀಂದ್ರ ಜಡೇಜಾ ಕೂಡ 13 ರನ್​ ಕೊಡುಗೆ ಕೊಟ್ಟರು. ಭುವನೇಶ್ವರ್ ಕುಮಾರ್​, ಟಿ ನಟರಾಜನ್​, ಶಹಬಾಜ್ ಅಹಮದ್, ಜಯದೇವ್​ ಉನಾದ್ಕಟ್​ ತಲಾ ಒಂದು ವಿಕೆಟ್​ ಉರುಳಿಸಿದರು.

Exit mobile version