Site icon Vistara News

IPL 2024: ಹಾರ್ದಿಕ್​ ಪಾಂಡ್ಯ ಮೇಲೆ ಬೌಲಿಂಗ್​ ಕೋಚ್​ ಮುನಿಸು; ವಿಡಿಯೊ ವೈರಲ್​​

IPL 2024

ಮುಂಬಯಿ: 5 ಬಾರಿಯ ಐಪಿಎಲ್‌(IPL 2024) ಚಾಂಪಿಯನ್‌ ಮುಂಬೈ ಇಂಡಿಯನ್ಸ್‌(Mumbai Indians) ತಂಡದೊಳಗೆ ಎಲ್ಲವೂ ಸರಿ ಇದ್ದಂತೆ ಕಾಣುತ್ತಿಲ್ಲ. ಹಾರ್ದಿಕ್​ ಪಾಂಡ್ಯ(Hardik Pandya) ನಾಯಕನಾದ ಬಳಿಕ ಈ ತಂಡದಲ್ಲಿ ಸಮಸ್ಯೆಗಳ ಸಾಗರವೇ ತಾಂಡವವಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೋಚ್​ ಲಸಿತ್​ ಮಾಲಿಂಗ(Lasith Malinga) ಮುನಿಸಿಕೊಂಡಿರುವ ವಿಡಿಯೊವೊಂದು ವೈರಲ್​ ಆಗಿದೆ.

ಹಾರ್ದಿಕ್‌ ಅವರ ನಾಯಕತ್ವದ ಬಗ್ಗೆ ತಂಡದ ಕೋಚ್‌ಗಳಿಗೂ ಮತ್ತು ಆಟಗಾರರಿಗೂ ಅಸಮಾಧಾನವಿದೆ ಎನ್ನಲಾಗಿದೆ. ಪ್ರಮುಖವಾಗಿ ಬೌಲರ್‌ಗಳ ನಿರ್ವಹಣೆಯಲ್ಲಿ ಹಾರ್ದಿಕ್‌ ಪಾಂಡ್ಯ ಪದೇಪದೇ ಎಡವಟ್ಟು ಮಾಡುತ್ತಿರುವುದಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಗುತ್ತಿದೆ. ತಂಡದ ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ ಅವರಿಗೆ ಇನಿಂಗ್ಸ್​ನ ಮೊದಲ ಓವರ್​ ನೀಡುವ ಬದಲು 5 ಓವರ್​ ಬಳಿಕ ಬೌಲಿಂಗ್​ ನೀಡುತ್ತಿದ್ದಾರೆ. ಇದೇ ವಿಚಾರದಲ್ಲಿ ಹಾರ್ದಿಕ್‌ರ ಮೇಲೆ ಬೌಲಿಂಗ್‌ ಕೋಚ್‌ ಲಸಿತ್‌ ಮಾಲಿಂಗ ಸಿಟ್ಟು ಮಾಡಿಕೊಂಡು ಎದ್ದು ಹೋಗುವಂತೆ ಕಾಣುವ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಅಲ್ಲದೆ ಪಂದ್ಯದ ಮುಕ್ತಾಯದ ವೇಳೆಯೂ ಮಾಲಿಂಗ ಅವರು ಪಾಂಡ್ಯ ಜತೆ ಸರಿಯಾಗಿ ಮಾತನಾಡಲು ಕೂಡ ನಿರಾಕರಿಸಿದ್ದಾರೆ.

ತಂಡದೊಳಗೆ ಎರಡು ಬಣಗಳಾಗಿವೆ ಎಂದು ಕೂಡ ಹೇಳಲಾಗಿದೆ. ರೋಹಿತ್‌ ಶರ್ಮಾ ಬಣದಲ್ಲಿ ಜಸ್‌ಪ್ರೀತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ ಸೇರಿ ಇನ್ನೂ ಹಲವರಿದ್ದರೆ, ಹಾರ್ದಿಕ್‌ ಪಾಂಡ್ಯ ಬಣದಲ್ಲಿ ಇಶಾನ್‌ ಕಿಶನ್‌ ಸೇರಿ ಕೆಲವು ಆಟಗಾರರಿದ್ದಾರೆ ಎನ್ನಲಾಗಿದೆ. ಪಾಂಡ್ಯ ಅವರ ಕೆಲ ವರ್ತನೆ ಬಗ್ಗೆ ಸ್ವತಃ ಫ್ರಾಂಚೈಸಿಗೂ ಅಸಮಾಧಾನ ಇದೆ ಎಂದು ವರದಿಯಾಗಿದ್ದು ಮತ್ತೆ ರೋಹಿತ್​ಗೆ ನಾಯಕತ್ವ ನೀಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

ಕಳೆದ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಮಾಲಿಕರಾದ ನೀತಾ ಅಂಬಾನಿ ಕೂಡ ಪಂದ್ಯವನ್ನು ನೋಡುವ ಬದಲು ಸಿಟ್ಟಿನಲ್ಲಿ ಮೊಬೈಲ್​ ನೋಡುತ್ತಿರುವ ದೃಶ್ಯಗಳು ವೈರಲ್​ ಆಗಿತ್ತು. ಪಂದ್ಯದ ಬಳಿಕ ಫ್ರಾಂಚೈಸಿಯ ಅಧಿಕಾರಿಗಳು ರೋಹಿತ್​ ಜತೆ ಚರ್ಚೆ ನಡೆಸುತ್ತಿರುವುದು ಕೂಡ ಕಂಡು ಬಂದಿತ್ತು. ಇದನ್ನೆಲ್ಲ ನೋಡುವಾಗ ಮುಂದಿನ ಪಂದ್ಯದಲ್ಲಿಯೂ ಮುಂಬೈ ಇದೇ ರೀತಿಯ ಕಳಪೆ ಪ್ರದರ್ಶನ ತೋರಿದರೆ ಪಾಂಡ್ಯ ತಲೆ ದಂಡ ಖಚಿತ ಎನ್ನಲಡ್ಡಿಯಿಲ್ಲ. ಮುಂಬೈ ಮುಂದಿನ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ತವರಿನ ವಾಖೆಂಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯ ಎಪ್ರಿಲ್​ 1 ರಂದು ನಡೆಯಲಿದೆ.

Exit mobile version