ಬೆಂಗಳೂರು: ಕಳೆದ ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್(IPL 2024) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(MI vs RCB) ಹಾಗೂ ಮುಂಬೈ ಇಂಡಿಯನ್ಸ್(Mumbai Indians) ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ, ಪಂದ್ಯದ ಬಳಿಕ ಮುಂಬೈ ಗೆಲುವಿಗೆ ಕಾರಣ ಟಾಸ್ ಫಿಕ್ಸಿಂಗ್ ಎಂಬ ಕೂಗು ಜೋರಾಗಿ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಪಟ್ಟ ಕೆಲ ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಈ ಘಟನೆಯ ನೈಜ ಕಾರಣವನ್ನು ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್(Faf du Plessis) ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ಪಂದ್ಯದ ವಿರುದ್ಧದ ಟಾಸ್ ವೇಳೆ ಪ್ಯಾಟ್ ಕಮಿನ್ಸ್(Pat Cummins) ಜತೆ ಚರ್ಚಿಸಿದ್ದಾರೆ. ಇದರ ವಿಡಿಯೊ ವೈರಲ್ ಆಗಿದ್ದು, ಮತ್ತೆ ಟಾಸ್ ಫಿಕ್ಸ್ ಚರ್ಚೆ ಮುನ್ನಲೆಗೆ ಬಂದಿದೆ.
ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಚಿನ್ನಶ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿತ್ತು. ಉಭಯ ತಂಡದ ನಾಯಕರು ಟಾಸ್ಗೆ ಆಗಮಿಸಿದ ಈ ವೇಳೆ ಪ್ಯಾಟ್ ಕಮಿನ್ಸ್ ಅವರು ಡು ಪ್ಲೆಸ್ ಬಳಿಕ ಮುಂಬೈ ವಿರುದ್ಧದ ಟಾಸ್ ಘಟನೆಯ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಡು ಪ್ಲೆಸಿಸ್ ಪಾಂಡ್ಯ ಹಿಮ್ಮುಖವಾಗಿ ದೂರಕ್ಕೆ ಟಾಸ್ ಕಾಯಿನ್ ಚಿಮ್ಮಿಸಿದರು. ಮ್ಯಾಚ್ ರೆಫ್ರಿಯಾಗಿದ್ದ ಜಾವಗಲ್ ಶ್ರೀನಾಥ್(Javagal Srinath) ಅವರು ಕಾಯಿನ್ ತಿರುಗಿಸಿ ಹೆಕ್ಕಿ ಪಾಂಡ್ಯ ಬಳಿ ಏನೋ ಕೇಳಿ ಟಾಸ್ ಗೆದ್ದಿರುವಂತೆ ಹೇಳಿ ತಕ್ಷಣ ಅಲ್ಲಿಂದ ತೆರಳಿದರು ಎಂದು ಅಂದಿನ ಘಟನೆಯನ್ನು ನಟನೆಯ ಮೂಲಕ ತೋರಿಸಿದರು. ಈ ವಿಡಿಯೊ ವೈರಲ್ ಆಗಿದ್ದು ನಿಜವಾಗಿಯೂ ಟಾಸ್ ಫಿಕ್ಸಿಂಗ್ ನಡೆದಿದೆಯಾ? ಎಂಬ ಚರ್ಚೆ ಮತ್ತೆ ಶುರುವಾಗಿದೆ.
ಚೇಸಿಂಗ್ಗೆ ಯೋಗ್ಯವಾದ ವಾಂಖೆಡೆ ಸ್ಟೇಡಿಯಂನಲ್ಲಿ ಅಂಪೈರ್ ಟಾಸ್ ಕಾಯಿನ್ ಬದಲಿಸಿ ಮುಂಬೈ ತಂಡಕ್ಕೆ ಸಹಕರಿಸಿದ್ದಾರೆ. ಇಲ್ಲವಾದರೆ ಆರ್‌ಸಿಬಿ ಗೆಲ್ಲುತ್ತಿತ್ತು ಎಂದು ಅನೇಕ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಂಬಾನಿ ಮತ್ತು ಐಪಿಎಲ್ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ IPL 2024: ವಿಮಾನ ಚಲಾಯಿಸಿದ ಯಜುವೇಂದ್ರ ಚಹಲ್; ವಿಡಿಯೊ ವೈರಲ್
ಹೈದರಾಬಾದ್ ವಿರುದ್ಧ 25 ರನ್ ಸೋಲು
ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಹೈದರಾಬಾದ್ ವಿರುದ್ಧ 25 ರನ್ಗಳ ಸೋಲು ಕಂಡಿತು. ಟಾಸ್ ಗೆದ್ದ ಆತಿಥೇಯ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ ತಂಡ ವಿಶ್ವ ದಾಖಲೆಯ 287 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್‌ಸಿಬಿ ತಂಡ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 7 ವಿಕೆಟ್ಗೆ 262 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಪ್ಲೇ ಆಫ್ ಆಸೆ ಇನ್ನೂ ಜೀವಂತ
ಸದ್ಯದ ಪರಿಸ್ಥಿತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಈಗಾಗಲೇ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್ ಹಂತದಲ್ಲಿ ಇನ್ನೂ 7 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಆರ್‌ಸಿಬಿ ಪ್ಲೇಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ.