ಬೆಂಗಳೂರು: 2008ರಿಂದ 2023 ರವರೆಗಿನ ಐಪಿಎಲ್(IPL 2024) ಇತಿಹಾಸವನ್ನು(ipl history) ಗಮನಿಸಿದರೆ ಮುಂಬೈ(Mumbai Indians) ಮತ್ತು ಚೆನ್ನೈ(Chennai Super Kings) ತಂಡಗಳೇ ಅತಿ ಹೆಚ್ಚು ಬಾರಿ ಚಾಂಪಿಯನ್ ಆಗಿ ಮೂಡಿಬಂದಿರುವುದು ಗಮನಾರ್ಹ. ಹಾಗಾದರೆ ಐಪಿಎಲ್ ಗೆಲ್ಲಬಲ್ಲ ಸಾಮರ್ಥ್ಯವುಳ್ಳ ಬೇರೆ ತಂಡಗಳಿಲ್ಲವೇ? ಈ ಎರಡು ತಂಡಗಳ ಗೆಲುವಿನ ರಹಸ್ಯವಾದರೂ ಏನು? ಇದು ಕ್ರಿಕೆಟ್ ಅಭಿಮಾನಿಗಳನ್ನು ಕಾಡುವ ಪ್ರಶ್ನೆ.
ಉಭಯ ತಂಡಗಳು ಕೂಡ ತಲಾ 5 ಬಾರಿ ಐಪಿಎಲ್ ಟ್ರೋಫಿ ಗೆದ್ದ ಇತಿಹಾಸ ಹೊಂದಿದೆ. ಇಷ್ಟೂ ಟ್ರೋಫಿಗಳನ್ನು ಗೆದ್ದಿರುವುದು ಒಂದೇ ನಾಯಕತ್ವದಡಿಯಲ್ಲಿ. ಮುಂಬೈಗೆ ರೋಹಿತ್(rohit sharma), ಚೆನ್ನೈಗೆ ಧೋನಿ(MS Dhoni). ಮುಂಬೈ ಇಂಡಿಯನ್ಸ್ ಒಟ್ಟು 6 ಬಾರಿ ಫೈನಲ್ ಪ್ರವೇಶಿಸಿ 1 ಬಾರಿ ರನ್ನರ್ ಅಪ್ ಉಳಿದ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶಿಸ್ತಿನ ಹಾಗೂ ಲೆಕ್ಕಾಚಾರದ ಆಟಕ್ಕೆ ಹೆಸರುವಾಸಿಯಾಗಿರುವ ಚೆನ್ನೈ ಅತ್ಯಧಿಕ 10 ಬಾರಿ ಫೈನಲ್ ಪ್ರವೇಶಿಸಿ 5 ಸಲ ಕಪ್ ಮತ್ತು 5 ಬಾರಿ ರನ್ನರ್ ಅಪ್ ಆಗಿದೆ. ಹಾಲಿ ಚಾಂಪಿಯನ್ ಆಗಿರುವ ಚೆನ್ನೈ ಈ ಬಾರಿಯೂ ಬಲಿಷ್ಠವಾಗಿ ಗೋಚರಿಸಿದ್ದು ಮತ್ತೆ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದೆ.
ಹೊಂದಾಣಿಕೆಯ ಆಟ
ಎರಡೂ ತಂಡಗಳನ್ನು ಸಮೀಕರಿಸಿ ಹೇಳುವುದಾದರೆ ಹೊಂದಾಣಿಕೆಯ ಆಟ ಈ ತಂಡದ ಪ್ರಮುಖ ಬಲವಾಗಿದೆ. ಬಹಳ ವರ್ಷಗಳಿಂದ ಅನೇಕ ಮಂದಿ ಖಾಯಂ ಸದಸ್ಯರು ಒಟ್ಟಿಗೇ ಆಡುತ್ತಿರುವುದರಿಂದ ಇವರ ನಡುವೆ ಗೊಂದಲಕ್ಕೆ ಅವಕಾಶವೇ ಇಲ್ಲ. ಇದರ ಜತೆಗೆ ಉಭಯ ತಂಡಗಳು ಕೂಡ ಒಬ್ಬರನ್ನೇ ಅವಲಂಬಿಸಿಲ್ಲ. ಇಲ್ಲಿ ಆಪತ್ಕಾಲಕ್ಕೆ ಎಲ್ಲರೂ ನೆರವಿಗೆ ನಿಲ್ಲುತ್ತಾರೆ. ಇದಕ್ಕೆ ಉತ್ತಮ ನಿದರ್ಶನವೆಂದರೆ ಕಳೆದ ವರ್ಷದ ಟೂರ್ನಿ. ಚೆನ್ನೈ ತಮಡ ಅನಾನುಭವಿಗಳಿಂದ ಕೂಡಿದ್ದರೂ ಕೂಡ ಆಡಿದ ಎಲ್ಲ ಆಟಗಾರರು ಕೂಡ ಸಂಘಟಿತ ಪ್ರದರ್ಶನ ತೋರಿ ಕಪ್ ತಮ್ಮದಾಗಿಸಿಕೊಂಡಿದ್ದರು. ಆದರೆ, ಆರ್ಸಿಬಿ, ಪಂಜಾಬ್, ಡೆಲ್ಲಿ ತಂಡಗಳು ಸೀಮಿತ ಆಟಗಾರರು ಬ್ಯಾಟ್ ಬೀಸಿದರಷ್ಟೇ ಅವುಗಳಿಗೆ ಗೆಲುವು, ಉಳಿಗಾಲ. ಬರೀ ಗೆಲುವಷ್ಟೇ ಅಲ್ಲ, ಗೆಲುವಿನ ರೀತಿ ಹಾಗೂ ಗೆಲುವಿನ ಲಯವೂ ಚಾಂಪಿಯನ್ನರನ್ನು ರೂಪಿಸುವಲ್ಲಿ ಮುಖ್ಯ ಪಾತ್ರವಹಿಸುತ್ತವೆ ಎಂಬುದಕ್ಕೆ ಈ 2 ತಂಡಗಳಿಗಿಂತ ಉತ್ತಮ ನಿದರ್ಶನ ಬೇಕಿಲ್ಲ.
ಇದನ್ನೂ ಓದಿ IPL 2024 Opening Ceremony: ಎ.ಆರ್ ರೆಹಮಾನ್ ಗಾಯನ, ಅಕ್ಷಯ್ ಕುಮಾರ್ ಡಾನ್ಸ್
ಈ ಬಾರಿ ರೋಹಿತ್ ನಾಯಕನಲ್ಲ
ಮುಂಬೈ ಇದುವರೆಗೆ 5 ಬಾರಿ ಕಪ್ ಎತ್ತಿ ಹಿಡಿದದ್ದು ರೋಹಿತ್ ಶರ್ಮ ನಾಯಕತ್ವದಲ್ಲಿ. ಆದರೆ, ಈ ಬಾರಿ ಅವರು ತಂಡದ ನಾಯಕನಾಗಿಲ್ಲ. ಅವರ ಬದಲಿಗೆ ಹಾರ್ದಿಕ್ ಪಾಂಡ್ಯ ನೂತನ ನಾಯಕನಾಗಿದ್ದಾರೆ. ರೋಹಿತ್ ಆಟಗಾರನಾಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಇಲ್ಲದೆ ಮುಂಬೈ ಕಪ್ ಗೆಲ್ಲಬಹುದೇ ಎನ್ನುವುದು ಅಭಿಮಾನಿಗಳ ಪ್ರಶ್ನೆಯಾದರೂ ಕೂಡ ಹಾರ್ದಿಕ್ ಕೂಡ ಸಮರ್ಥ ನಾಯಕ ಎನ್ನುವುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಚೊಚ್ಚಲ ನಾಯಕತ್ವದಲ್ಲಿಯೇ ಗುಜರಾತ್ ಟೈಟಾನ್ಸ್ ತಂಡವನ್ನು ಸತತವಾಗಿ 2 ಬಾರಿ ಫೈನಲ್ಗೆ ತಂದು ಒಂದು ಬಾರಿ ಚಾಂಪಿಯನ್ ಮತ್ತು ರನ್ನರ್ ಅಪ್ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಅಲ್ಲದೆ ಮುಂಬೈ 5 ಬಾರಿ ಚಾಂಪಿಯನ್ ಆದಾಗಲೂ ಪಾಂಡ್ಯ ಮುಂಬೈ ತಂಡದ ಪ್ರಮುಖ ಆಟಗಾರನಾಗಿದ್ದರು. ಹೀಗಾಗಿ ಮುಂಬೈ ತಂಡದ ನಾಯಕತ್ವ ಬದಲಾದರೂ ಕೂಡ ಕಪ್ ಗೆಲ್ಲುವ ಸಾಮರ್ಥ್ಯವನ್ನು ಅಲ್ಲಗಳೆಯುವಂತಿಲ್ಲ.