ಬೆಂಗಳೂರು : ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ (Ind vs Eng) ಐದನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ (ಮಾರ್ಚ್ 9) ನಾಯಕ ರೋಹಿತ್ ಶರ್ಮಾ (Rohit Sharma) ಇಲ್ಲದೆ ಭಾರತ ತಂಡ ಮೈದಾನಕ್ಕಿಳಿದಿತ್ತು. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ನಾಯಕ ಮೊದಲ ದಿನ ಫೀಲ್ಡಿಂಗ್ ಮತ್ತು ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಆದರೆ, ಮೂರನೇ ದಿನದಂದು ಅವರು ಫೀಲ್ಡಿಂಗ್ಗೆ ಬರಲಿಲ್ಲ. ಈ ವಿಷಯ ಮುಂದಿನ ಐಪಿಎಲ್ನಲ್ಲಿ (IPL 2024) ಅವರ ಭಾಗವಹಿಸುವಿಕೆಯ ಬಗ್ಗೆ ಅನುಮಾನಗಳನ್ನು ಸೃಷ್ಟಿಸಿದೆ.
ಬಿಸಿಸಿಐ ಆ ಬಳಿಕ ನಾಯಕನ ಅನುಪಸ್ಥಿತಿಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿತು. ಬೆನ್ನುನೋವಿನಿಂದಾಗಿ ಅನುಭವಿ ಬ್ಯಾಟ್ಸ್ಮನ್ ಮೈದಾನಕ್ಕಿಳಿಯಲಿಲ್ಲ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಅವರ ಅನುಪಸ್ಥಿತಿಯಲ್ಲಿ, ನಿಯೋಜಿತ ಉಪನಾಯಕ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಿದರು ಹಾಗೂ ತಂಡವನ್ನು ಸುಲಭವಾಗಿ ಗೆಲ್ಲಿಸಿದರು. ಭಾರತವು ಇಂಗ್ಲೆಂಡ್ ಅನ್ನು ಕೇವಲ 195 ರನ್ಗಳಿಗೆ ಆಲೌಟ್ ಮಾಡಿ ಇನ್ನಿಂಗ್ಸ್ ಮತ್ತು 64 ರನ್ಗಳಿಂದ ಪಂದ್ಯವನ್ನು ಗೆದ್ದಿತು.
ರೋಹಿತ್ ಶರ್ಮಾ ಅವರಿಗೆ ಬೆನ್ನುನೋವು ಕಾಣಿಸಿಕೊಂಡ ಕಾರಣ ಅವರು ಮೈದಾನಕ್ಕೆ ಇಳಿದಿರಲಿಲ್ಲ. ಅನುಭವಿ ಬ್ಯಾಟರ್ ಪಂದ್ಯ ಮುಗಿದ ನಂತರ ಮೈದಾನಕ್ಕೆ ಇಳಿದಿದ್ದರು. ಎದುರಾಳಿ ತಂಡದ ಆಟಗಾರರಿಗೆ ಹ್ಯಾಂಡ್ಶೇಕ್ ಮಾಡಿದರು. ನಡೆಯುವಾಗ ಸಂಪೂರ್ಣವಾಗಿ ಆರಾಮದಾಯಕವಾಗಿ ಕಾಣುತ್ತಿದ್ದರು. ಆದಾಗ್ಯೂ ಮೈದಾನಕ್ಕೆ ಬರದಿರುವುದು ಮುನ್ನೆಚ್ಚರಿಕೆಯ ಕ್ರಮವಾಗಿರಬಹುದು ಎಂದು ಹೇಳಲಾಗಿದೆ. ಹೀಗಾಗಿ ಅವರು ಮುಂದಿನ ಐಪಿಎಲ್ನಲ್ಲಿ ಆಡುವುದಿಲ್ಲ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಮೊದಲ ಹಂತದ ಐಪಿಎಲ್ ಆರಂಭಕ್ಕೆ ಇನ್ನೂ ಕೇವಲ 13 ದಿನಗಳು ಬಾಕಿ ಉಳಿದಿವೆ. ಅಷ್ಟು ದಿನದಲ್ಲಿ ಅವರು ಸಿದ್ಧಗೊಳ್ಳುವರೇ ಎಂಬ ಪ್ರಶ್ನೆ ಎದುರಾಗಿದೆ.
ತಂಡದ ಆಟಗಾರರನ್ನು ಶ್ಲಾಘಿಸಿದ ರೋಹಿತ್ ಶರ್ಮಾ
ಭಾರತವು ಸರಣಿಯನ್ನು 4-1 ರಿಂದ ಗೆದ್ದ ನಂತರ ಮಾತನಾಡಿದ ರೋಹಿತ್ ಶರ್ಮಾ ತಂಡದ ಆಟಗಾರರ ಪ್ರದರ್ಶನವನ್ನು ಶ್ಲಾಘಿಸಿದರು. ಮೊದಲ ಟೆಸ್ಟ್ನಲ್ಲಿ ಸೋತ ನಂತರ ಭಾರತವು ಹಿನ್ನಡೆಗೆ ಒಳಗಾಯಿತು. ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ ಅವರಂತಹ ಕೆಲವು ದೊಡ್ಡ ಆಟಗಾರರ ಅನುಪಸ್ಥಿತಿಯು ಅವರ ಮೇಲೆ ಹೆಚ್ಚಿನ ಒತ್ತಡ ಹೆಚ್ಚಿಸಿತು. ಆದಾಗ್ಯೂ, ಆತಿಥೇಯರು ಪುಟಿದೆದ್ದು ಸರಣಿ ಗೆದ್ದರು.
ಇದನ್ನೂ ಓದಿ : R Ashwin: ಶತಕದ ಟೆಸ್ಟ್ನಲ್ಲಿ ಹಲವು ದಾಖಲೆ ಬರೆದ ಅಶ್ವಿನ್; ಕುಂಬ್ಳೆ ದಾಖಲೆಯೂ ಪತನ
“ದೊಡ್ಡ ಸರಣಿಯಲ್ಲಿ ಆಟಗಾರರ ಲಭ್ಯತೆ ಹಾಗೂ ಆಗಮನ ಪದೇ ಪದೇ ಸಂಭವಿಸುತ್ತದೆ. ನಮ್ಮ ಆಟಗಾರರಿಗೆ ಅನುಭವದ ಕೊರತೆ ಇದೆ. ಆದಾಗ್ಯೂ ಅವರು ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಎಲ್ಲರೂ ಒತ್ತಡದಲ್ಲಿ ಆಡಿದ್ದಾರೆ. ಸರಣಿ ಗೆಲುವಿನ ಶ್ರೇಯಸ್ಸು ಶ್ರೇಯಸ್ಸು ಇಡೀ ತಂಡಕ್ಕೆ ಸಲ್ಲುತ್ತದೆ”ಎಂದು ರೋಹಿತ್ ಶರ್ಮಾ ಹೇಳಿದರು.
ಬ್ಯಾಟಿಂಗ್ನಲ್ಲಿ ರೋಹಿತ್ ಅವರ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಅವರು ಸರಣಿಯಲ್ಲಿ ಭಾರತದ ಪರ ಮೂರನೇ ಅತಿ ಹೆಚ್ಚು ರನ್ ಸ್ಕೋರರ್ ಎನಿಸಿಕೊಂಡರು. ಸರಣಿಯ ನಿಧಾನಗತಿಯ ಆರಂಭದ ನಂತರ, ಅವರು ಕೊನೆಯ ಮೂರು ಟೆಸ್ಟ್ ಗಳಲ್ಲಿ ಎರಡು ಶತಕಗಳನ್ನು ಗಳಿಸಿದರು. ಸರಣಿಯನ್ನು 400 ರನ್ ಗಳೊಂದಿಗೆ ಮುಗಿಸಿದರು. ಬೆನ್ನುನೋವು ಗಂಭೀರವಾಗಿಲ್ಲದ ಕಾರಣ, ಈ ತಿಂಗಳ ಕೊನೆಯಲ್ಲಿ ಐಪಿಎಲ್ 2024 ಪ್ರಾರಂಭವಾಗುವಾಗ ಅವರು ಆಡುವ ನಿರೀಕ್ಷೆಯಿದೆ.