ಮುಂಬಯಿ: ಫ್ರಾಂಚೈಸಿಗಳ ಒತ್ತಾಯಕ್ಕೆ ಮಣಿದು ಕೊನೆಗೂ ಬಿಸಿಸಿಐ(BCCI) ಮುಂದಿನ ಐಪಿಎಲ್(IPL 2025) ಮೆಗಾ(mega auction) ಹರಾಚಿನಲ್ಲಿ ಪ್ರತಿ ತಂಡಕ್ಕೆ ಗರಿಷ್ಠ 4ರ ಬದಲಾಗಿ 6 ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ ಎಂದು ವರದಿಯಾಗಿದೆ. ಬಿಸಿಸಿಐ ಈ ಮುನ್ನ ಗರಿಷ್ಠ 4 ಆಟಗಾರರ ರಿಟೇನ್ಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿತ್ತು. ಅಲ್ಲದೆ 2022ರಲ್ಲಿಯೂ 4 ಆಟಗಾರರ ರಿಟೇನ್ ಅವಕಾಶ ನೀಡಿತ್ತು. ಈ ಬಾರಿ ಫ್ರಾಂಚೈಸಿಗಳು 8 ಆಟಗಾರರನ್ನು ರೀಟೆನ್ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿತ್ತು. ಇದೀಗ ಬಿಸಿಸಿಐ 6 ಆಟಗಾರರ ರಿಟೇನ್ಗೆ ಅವಕಾಶ ಕಲ್ಪಿಸಿದೆ ಎನ್ನಲಾಗಿದೆ.
ಇತ್ತೀಚೆಗೆ ಮುಂಬಯಿಯಲ್ಲಿ ನಡೆದಿದ್ದ ಮೆಗಾ ಹರಾಜು ಕುರಿತ ಸಭೆಯಲ್ಲಿ ಕೆಕೆಆರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಮಾಲಿಕರು ಮೆಗಾ ಹರಾಜು ಪ್ರಕ್ರಿಯೆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಕೆಲ ಫ್ರಾಂಚೈಸಿಗಳು ಹರಾಜಿನಲ್ಲಿ ಖರೀದಿಸಿದ ವಿದೇಶಿ ಆಟಗಾರ ಅನಗತ್ಯ ಕಾರಣ ನೀಡಿ ತಂಡದ ಪರ ಆಡದೇ ಅರ್ಧದಲ್ಲೇ ಕೈಕೊಟ್ಟರೆ ಇಂತಹ ವಿದೇಶೀ ಆಟಗಾರರಿಗೆ 2 ವರ್ಷ ನಿಷೇಧ ವಿಧಿಸುವಂತೆ ಬಿಸಿಸಿಐಗೆ ಒತ್ತಡ ಹೇರಿವೆ ಎಂದು ವರದಿಯಾಗಿದೆ. ಬಿಸಿಸಿಐ ಕೂಡ ಇದಕ್ಕೆ ಸಮ್ಮತಿ ಸೂಚಿಸಿದೆ ಎಂದು ತಿಳಿದುಬಂದಿದೆ. ಈ ಬಾರಿ ರೈಟ್ ಟು ಮ್ಯಾಚ್(ಆರ್ಟಿಎಂ) ಕಾರ್ಡ್ ಪದ್ಧತಿಯನ್ನೂ ಮತ್ತೆ ತರಲಾಗುವುದು ಎಂದು ವರದಿಯಾಗಿದೆ.
ಇದನ್ನೂ ಓದಿ IPL 2025: ರಾಜಸ್ಥಾನ್ ರಾಯಲ್ಸ್ಗೆ ರಾಹುಲ್ ದ್ರಾವಿಡ್ ನೂತನ ಕೋಚ್?
ಏನಿದು ಆರ್ಟಿಎಂ ಕಾರ್ಡ್?
ಆರ್ಟಿಎಂ ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಆರ್ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಧಿಕಾರಿಗಳ ಅಭಿಪ್ರಾಯ. ಐಪಿಎಲ್ನಲ್ಲಿ ಇದುವರೆಗೆ ವಿರಾಟ್ ಕೊಹ್ಲಿ (ಆರ್ಸಿಬಿ), ಜಸ್ಪ್ರೀತ್ ಬುಮ್ರಾ(ಮುಂಬೈ) ಮಾತ್ರ ಒಂದೇ ತಂಡದ ಪರ ಆಡಿದ್ದಾರೆ. ಉಳಿದ ಆಟಗಾರರು ಬೇರೆ ಬೇರೆ ಫ್ರಾಂಚೈಸಿ ಪರ ಕನಿಷ್ಠ ಒಂದೆರಡು ವರ್ಷಗಳ ಕಾಲ ಆಡಿದ್ದಾರೆ.
ಐಪಿಎಲ್ ಮೆಗಾ ಹರಾಜನ್ನು ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವಂತೆಯೂ ಕೆಲವು ಫ್ರಾಂಚೈಸಿಗಳು ಮನವಿ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತಿತ್ತು. ಒಂದೊಮ್ಮೆ ಈ ಬೇಡಿಕೆಗೆ ಬಿಸಿಸಿಐ ಸಮ್ಮತಿಸಿದರೆ. ಮುಂದಿನ ಮೆಗಾ ಹರಾಜು 2029ರಲ್ಲಿ ನಡೆಯಲಿದೆ. ಇದರ ನಡುವೆ ಮಿನಿ ಹರಾಜು ಮಾತ್ರ ನಡೆಯಲಿದೆ. ಈ ತಿಂಗಳಾಂತ್ಯದಲ್ಲಿ ಐಪಿಎಲ್ ಮಾಲೀಕರೊಂದಿಗೆ ಬಿಸಿಸಿಐ ಸಭೆ ನಡೆಸಿ ಮೆಗಾ ಹರಾಜಿನ ಅಂತಿಮ ರೂಪುರೇಷೆಗಳ ಬಗ್ಗೆ ಚರ್ಚಿಸಲಿದೆ ಎಂದು ವರದಿಯಾಗಿದೆ