ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರು ಮುಂದಿನ ಐಪಿಎಲ್(IPL 2025)ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಕೋಚಿಂಗ್ ನಡೆಸುವುದು ಬಹುತೇಕ ಖಚಿತ ಎಂದು ತಿಳಿದುಬಂದಿದೆ. ಸದ್ಯ ರಾಜಸ್ಥಾನ್ ತಂಡದ ಹಾಲಿ ಕೋಚ್ ಆಗಿರುವ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ ಇಂಗ್ಲೆಂಡ್ ಸೀಮಿತ ತಂಡದ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅವರ ಸ್ಥಾನಕ್ಕೆ ದ್ರಾವಿಡ್ ಅವರನ್ನು ನೇಮಕ ಮಾಡಲು ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ದ್ರಾವಿಡ್ ಜತೆ ಈಗಾಗಲೇ ಫ್ರಾಂಚೈಸಿ ಮಾತುಕತೆ ನಡೆಸಿದ್ದು ದ್ರಾವಿಡ್ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಯಾವುದೇ ಅಧಿಕೃತ ಮಾಹಿತಿ ಇನ್ನೂ ಪ್ರಕಟಗೊಂಡಿಲ್ಲ. ಈ ಹಿಂದೆ ದ್ರಾವಿಡ್ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡದ ಪರವೇ 2 ಆವೃತ್ತಿಯಲ್ಲಿ ಕೋಚಿಂಗ್ ನಡೆಸಿದ್ದರು. ಅಂಡರ್ 19 ತಂಡದ ಕೋಚ್ ಆದ ಕಾರಣ ಐಪಿಎಲ್ ಕೋಚಿಂಗ್ನಿಂದ ದೂರ ಉಳಿದಿದ್ದರು.
ರಾಜಸ್ಥಾನ್ ರಾಯಲ್ಸ್ ಪರ ನಾಯಕರಾಗಿ ದ್ರಾವಿಡ್ ಒಮ್ಮೆ ತಂಡವನ್ನು ಪ್ಲೇ ಆಪ್ಗೆ ಕೊಂಡೊಯ್ದಿದ್ದರು. ಚಾಂಪಿಯನ್ಸ್ ಲೀಗ್ನಲ್ಲಿ ತಂಡ ಫೈನಲ್ಗೇರಿತ್ತು. ರಾಜಸ್ಥಾನ್ ತಂಡದ ಪರ 40 ಪಂದ್ಯಗಳಲ್ಲಿ ನಾಯಕರಾಗಿದ್ದ ದ್ರಾವಿಡ್ 23 ಗೆಲುವು ಕಂಡಿದ್ದಾರೆ. ಇದೀಗ ಎಲ್ಲ ಬಿಸಿಸಿಐ ಹುದ್ದೆಗಳಿಂದ ನಿವೃತ್ತಿ ಹೊಂದಿರುವ ದ್ರಾವಿಡ್ ಮತ್ತೆ ಐಪಿಎಲ್ ಕೋಚಿಂಗ್ ಕಡೆ ಗಮನಹರಿಸಿದ್ದಾರೆ ಎನ್ನಲಾಗಿದೆ.
1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್ ದ್ರಾವಿಡ್ 2012ರ ವರೆಗೆ ಭಾರತ ತಂಡದ ಪರವಾಗಿ ಆಡಿದ್ದರು. ಆದರೆ ವಿಶ್ವಕಪ್ ಎನ್ನುವುದು ಅವರಿಗೆ ಕನಸಾಗಿತ್ತು. ಈ ಕೊರಗು ಕೂಡ ಅವರಲ್ಲಿತ್ತು. ನಾಯಕನಾಗಿ, ಆಟಗಾರನಾಗಿ ಗೆಲ್ಲಲಾಗದ ವಿಶ್ವಕಪ್ ಅನ್ನು ತರಬೇತುದಾರನಾಗಿ ಗಳಿಸಿಕೊಂಡಿದ್ದಾರೆ. ಅದು ಕೂಡ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಎನ್ನುವುದು ವಿಶೇಷ.
ಇದನ್ನೂ ಓದಿ IPL 2025: ಮುಂಬೈ ತಂಡದಿಂದ ಪಾಂಡ್ಯಗೆ ಗೇಟ್ಪಾಸ್; ಸೂರ್ಯಕುಮಾರ್ಗೆ ನಾಯಕತ್ವ?
ಪ್ರಧಾನ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರಿಗೆ “ಭಾರತ ರತ್ನ” ಪ್ರಶಸ್ತಿಯಿಂದ ಗೌರವಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುನೀಲ್ ಗವಾಸ್ಕರ್ ಒತ್ತಾಯಿಸಿದ್ದಾರೆ. “ಭಾರತ ಸರಕಾರವು ದ್ರಾವಿಡ್ಗೆ ಭಾರತ ರತ್ನ ಪ್ರಶಸ್ತಿಯಿಂದ ಗೌರವಿಸಿದರೆ ಅದು ಅವರಿಗೆ ಸಲ್ಲುವ ಸೂಕ್ತ ಗೌರವವಾಗುತ್ತದೆ. ಈ ಗೌರವಕ್ಕೆ ಅವರು ಸಂಪೂರ್ಣವಾಗಿ ಅರ್ಹರಾಗಿದ್ದಾರೆ ಎಂದು ಬರೆದುಕೊಂಡಿದ್ದರು.
ದ್ರಾವಿಡ್ ಆಟಗಾರರಾಗಿ ಮತ್ತು ತಂಡದ ನಾಯಕರಾಗಿ ವಿದೇಶಗಳಲ್ಲಿ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ವೆಸ್ಟ್ ಇಂಡೀಸ್ನಲ್ಲಿ ಗೆಲ್ಲುವುದು ಅಸಾಧ್ಯ ಎಂಬ ಕಾಲದಲ್ಲಿ ಅವರು ಭಾರತಕ್ಕೆ ಸರಣಿ ಗೆಲುವನ್ನು ತಂದಿದ್ದಾರೆ. ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಗಳನ್ನು ಗೆದ್ದಿರುವ ಕೇವಲ ಮೂರು ಭಾರತೀಯ ನಾಯಕರ ಪೈಕಿ ಅವರು ಕೂಡ ಒಬ್ಬರಾಗಿದ್ದಾರೆ. ಈ ಹಿಂದೆ, ಅವರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಅತ್ಯುತ್ತಮ ಕ್ರಿಕೆಟ್ ಪ್ರತಿಭೆಗಳನ್ನು ಹೊರತಂದಿದ್ದಾರೆ. ಬಳಿಕ ಭಾರತೀಯ ಹಿರಿಯರ ಕ್ರಿಕೆಟ್ ತಂಡದ ಕೋಚ್ ಆಗಿ ಉತ್ತಮ ನಿರ್ವಹಣೆ ನೀಡಿದ್ದಾರೆ ಎಂದು ಗವಾಸ್ಕರ್ ಹೇಳಿದ್ದರು.