Site icon Vistara News

IPL 2025: ಐಪಿಎಲ್​ ತಂಡಗಳ ಬ್ರಾಂಡ್​ ಮೌಲ್ಯ ಏರಿಕೆ; ಕಪ್​ ಗೆಲ್ಲದಿದ್ದರೂ ಆರ್​ಸಿಬಿ ಪ್ರಾಬಲ್ಯ

IPL 2025

IPL 2025: Which is the most valued IPL team? MI, CSK or RCB?

ಮುಂಬಯಿ: ಮುಂದಿನ ವರ್ಷ ನಡೆಯುವ 18ನೇ ಆವೃತ್ತಿಯ ಐಪಿಎಲ್​ಗೆ(IPL 2025) ಈಗಾಗಲೇ ಸಿದ್ಧತೆಗಳು ಆರಂಭವಾಗಿದೆ. ಆಟಗಾರರ ಮೆಗಾ ಹರಾಜು ಡಿಸೆಂಬರ್​ನಲ್ಲಿ ನಡೆಯುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಐಪಿಎಲ್​ನ ಬ್ರಾಂಡ್​ ಮೌಲ್ಯದ(IPL brand value) ವರದಿ ಹೊರಬಿದ್ದಿದೆ. ಈ ಬಾರಿ ಎಲ್ಲ ತಂಡಗಳ ಬ್ರಾಂಡ್ ಮೌಲ್ಯದಲ್ಲಿ(IPL teams brand valuation) ಭಾರಿ ಏರಿಕೆ ಕಂಡಿದೆ.

ಐಪಿಎಲ್​ನ ಯಶಸ್ವಿ ತಂಡಗಳಲ್ಲಿ ಒಂದಾದ ಐದು ಬಾರಿಯ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​​(CSK) ಗರಿಷ್ಠ ಮೌಲ್ಯ ಹೊಂದಿರುವ ತಂಡವಾಗಿ ಕಾಣಿಸಿಕೊಂಡಿದೆ. 1,930 ಕೋಟಿ ರೂ. ಬ್ರಾಂಡ್​ ಮೌಲ್ಯ ಹೊಂದಿದೆ. ಇದಕ್ಕೂ ಮುನ್ನ 675 ಕೋಟಿ ರೂ. (81 ದಶಲಕ್ಷ ಡಾಲರ್​) ಬ್ರಾಂಡ್​ ಮೌಲ್ಯದೊಂದಿಗೆ ದ್ವಿತೀಯ ಸ್ಥಾನಿಯಾಗಿತ್ತು. ಮುಂಬೈ ಇಂಡಿಯನ್ಸ್​ ತಂಡ 725 ಕೋಟಿ ರೂ.ಬ್ರಾಂಡ್​ ಮೌಲ್ಯದೊಂದಿಗೆ ಅಗ್ರಸ್ಥಾನ ಪಡೆದಿತ್ತು. ಪ್ರಸ್ತುತ 1,704 ಕೋಟಿ ರೂ. ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಆರ್​ಸಿಬಿಗೆ 2ನೇ ಸ್ಥಾನ

ಕನ್ನಡಿಗರ ನೆಚ್ಚಿನ ತಂಡವಾದ, ಅತ್ಯಧಿಕ ಅಭಿಮಾನಿ ಬಳಗವನ್ನು ಹೊಂದಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB) ತಂಡ ಇದುವರೆ ಕಪ್​ ಗೆಲ್ಲದಿದ್ದರೂ ಬ್ರಾಂಡ್​ ಮೌಲ್ಯದಲ್ಲಿ ತನ್ನ ಖ್ಯಾತಿಯನ್ನು ಬಿಟ್ಟುಕೊಟ್ಟಿಲ್ಲ. ಆರ್​ಸಿಬಿ ತಂಡ ಕಳೆದ ಬಾರಿ 582 ಕೋಟಿ ರೂ. (69.8 ದಶಲಕ್ಷ ಡಾಲರ್​) ಬ್ರಾಂಡ್​ ಮೌಲ್ಯದೊಂದಿಗೆ 4ನೇ ಸ್ಥಾನದಲ್ಲಿತ್ತು. ಇದೀಗ ನೂತನ ಪಟ್ಟಿಯಲ್ಲಿ 1,896 ಕೋಟಿ ರೂ. ಮೌಲ್ಯದೊಂದಿಗೆ 2ನೇ ಸ್ಥಾನಿಯಾಗಿದೆ. ಈ ಬಾರಿ ತಂಡ ಎಲಿಮಿನೇಟರ್​ ಹಂತದ ತನಕ ಆಡಿತ್ತು.

ಇದನ್ನೂ ಓದಿ IPL 2025 Mega Auction: ಕೇವಲ ಇಷ್ಟು ಆಟಗಾರರ ರಿಟೇನ್​ಗೆ ಮಾತ್ರ ಅವಕಾಶ!

ಹಾಲಿ ಚಾಂಪಿಯನ್​ ಕೆಕೆಆರ್​ ತಂಡ ಈ ಪಟ್ಟಿಯಲ್ಲಿ ಮೂರನೇ ಸ್ಥಾನಿಯಾಗಿದೆ. ತಂಡದ ಬ್ರಾಂಡ್​ ಮೌಲ್ಯ 1,805 ಕೋಟಿ ರೂ. ಆಗಿದೆ. ಇದಕ್ಕೂ ಮುನ್ನ 655 ಕೋಟಿ ರೂ.ಗಳೊಂದಿಗೆ ಮೂರನೇ ಸ್ಥಾನದಲ್ಲೇ ಕಾಣಿಸಿಕೊಂಡಿತ್ತು. ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್​ ತಂಡ 760 ಕೋಟಿ ರೂ. ಬ್ರಾಂಡ್​ ಮೌಲ್ಯದೊಂದಿಗೆ ಕೊನೆಯ ಸ್ಥಾನಿಯಾಗಿದೆ. ಮುಂದಿನ ಆವೃತ್ತಿಯಲ್ಲಿ ರಾಹುಲ್​ ಅವರು ಆರ್​ಸಿಬಿ ತಂಡದ ಪರ ಆಡಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿದೆ. ಕೆಲ ಮೂಲಗಳ ಪ್ರಕಾರ ರಾಹುಲ್​ಗೆ ಈಗಾಗಲೇ ಆರ್​ಸಿಬಿ ಫ್ರಾಂಚೈಸಿ ತಂಡ ಸೇರುವಂತೆ ಆಫರ್​ ಕೂಡ ಕೊಟ್ಟಿದೆ ಎಂದು ವರದಿಯಾಗಿದೆ. ಅದು ಕೂಡ ನಾಯಕನಾಗಿ ಎನ್ನಲಾಗಿದೆ.

ಐಪಿಎಲ್​ ತಂಡಗಳ ಬ್ರಾಂಡ್​ ಮೌಲ್ಯ


ಚೆನ್ನೈ ಸೂಪರ್​ಕಿಂಗ್ಸ್​: 1,930 ಕೋಟಿ ರೂ.

ರಾಯಲ್​ ಚಾಲೆಂಜರ್ಸ್​​ ಬೆಂಗಳೂರು: 1,896 ಕೋಟಿ ರೂ.

ಕೋಲ್ಕತಾ ನೈಟ್​ರೈಡರ್ಸ್​: 1,805 ಕೋಟಿ ರೂ.

ಮುಂಬೈ ಇಂಡಿಯನ್ಸ್​: 1,704 ಕೋಟಿ ರೂ.

ರಾಜಸ್ಥಾನ್​ ರಾಯಲ್ಸ್​: 1,111 ಕೋಟಿ ರೂ.

ಸನ್​ರೈಸರ್ಸ್​ ಹೈದರಾಬಾದ್​: 1,103 ಕೋಟಿ ರೂ.

ಡೆಲ್ಲಿ ಕ್ಯಾಪಿಟಲ್ಸ್​: 1,094 ಕೋಟಿ ರೂ.

ಗುಜರಾತ್​ ಟೈಟಾನ್ಸ್​: 1,036 ಕೋಟಿ ರೂ.

ಪಂಜಾಬ್​ ಕಿಂಗ್ಸ್​: 844 ಕೋಟಿ ರೂ.

ಲಕ್ನೋ ಸೂಪರ್​ಜೈಂಟ್ಸ್​: 760 ಕೋಟಿ ರೂ.

Exit mobile version