ದುಬೈ: ಎಲ್ಲ ಕ್ರಿಕೆಟ್ ಅಭಿಮಾನಿಗಳ ಚಿತ್ತ ನಾಳೆ(ಮಂಗಳವಾರ) ದುಬೈನಲ್ಲಿ ನಡೆಯುವ ಐಪಿಎಲ್ 2024ರ(IPL Auction 2024) ಆಟಗಾರ ಮಿನಿ ಹರಾಜಿನ ಮೇಲಿದೆ. 10 ತಂಡಗಳ ಅಭಿಮಾನಿಗಳು ತಮ್ಮ ತಂಡಕ್ಕೆ ಯಾವ ಆಟಗಾರು ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಕುತೂಹಲದಲ್ಲಿದ್ದಾರೆ. ಹರಾಜು ಪಟ್ಟಿಯಲ್ಲಿರುವ ಆಟಗಾರರ ಪೈಕಿ 5 ಮಂದಿಗೆ ಬಹುಬೇಡಿಕೆ ಇದ್ದು ಇವರ ಖರೀದಿಗಾಗಿ ಫ್ರಾಂಚೈಸಿಗಳು ಜಿದ್ದಾಜಿದ್ದಿನ ಪೈಪೋಟಿಗೆ ಇಳಿಯುವ ಸಾಧ್ಯತೆ ಇದೆ.
ಟ್ರಾವಿಸ್ ಹೆಡ್
ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಭಾರತದ ವಿಶ್ವಕಪ್ ಟ್ರೋಫಿ ಕನಸನ್ನು ಭಗ್ನ ಗೊಳಿಸಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರಿಗೆ ಈ ಬಾರಿಯ ಹರಾಜಿನಲ್ಲಿ ಭಾರಿ ಮೊತ್ತ ಸಿಗುವ ನಿರೀಕ್ಷೆ ಇದೆ. ಈಗಾಗಕೇ ಅವರನ್ನು ಆಕ್ಷನ್ನಲ್ಲಿ 20 ಕೋಟಿ ರೂ. ನೀಡಿಯಾದರೂ ಖರೀದಿಸಲು ಕೆಲವು ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ. ಒಟ್ಟಾರೆ ಹೆಡ್ ಅವರು ಈ ಬಾರಿ ಅತ್ಯಧಿಕ ಮೊತ್ತಕ್ಕೆ ಸೇಲ್ ಆಗುವುದರಲ್ಲಿ ಯಾವುದೇ ಅನುಮಾನ ಬೇಡ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿದ ಅನುಭವ ಹೊಂದಿದ್ದಾರೆ.
ರಚಿನ್ ರವೀಂದ್ರ
50 ಲಕ್ಷ ಮೂಲಬೆಲೆ ಹೊಂದಿರುವ ನ್ಯೂಜಿಲ್ಯಾಂಡ್ನ ಯುವ ಆಟಗಾರ ರಚಿನ್ ರವೀಂದ್ರ ಅವರಿಗೂ ಭಾರಿ ಮೊತ್ತ ಸಿಗುವ ಸಾಧ್ಯತೆ ಇದೆ. ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಬಾರಿ ಕಣಕ್ಕಿಳಿದರೂ, ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಟೂರ್ನಿಯಲ್ಲಿ ಅತ್ಯಧಿಕ ರನ್ ಸಾಧಕರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದರು. ವಿಶ್ವಕಪ್ನಲ್ಲಿ ಅವರು 578 ರನ್ ಬಾರಿಸಿದ್ದರು. ಎಲ್ಲ ಫ್ರಾಂಚೈಸಿಗಳು ಇವರ ಮೇಲೆ ಕಣ್ಣಿಟ್ಟಿದೆ.
ಡ್ಯಾರಿಲ್ ಮಿಚೆಲ್
ನ್ಯೂಜಿಲ್ಯಾಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಮತ್ತು ಆಲ್ರೌಂಡರ್ ಆಗಿರುವ ಡ್ಯಾರಿಲ್ ಮಿಚೆಲ್ ಅವರಿಗೂ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಇದೆ. ಯಾವುದೇ ಹಂತದಲ್ಲಿಯೂ ತಂಡಕ್ಕೆ ಆಸರೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇವರಿಗಿದೆ. ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿಯೂ ಮಿಚೆಲ್ ಗಮನಾರ್ಹ ಪ್ರದರ್ಶನ ತೋರಿದ್ದರು. 552 ರನ್ ಬಾರಿಸಿ ವಿಶ್ವಕಪ್ನಲ್ಲಿ ಅತ್ಯಧಿಕ ರನ್ಗಳಿಸಿದ 5ನೇ ಆಟಗಾರನಾಗಿ ಹೊರಮೊಮ್ಮಿದ್ದರು.
ಇದನ್ನೂ ಓದಿ IND vs SA: ಭಾರತಕ್ಕೆ ಗೆಲುವಿನ ಹರ್ಷ ನೀಡಿದ ಅರ್ಶ್ದೀಪ್; 8 ವಿಕೆಟ್ ಜಯ
ಜೆರಾಲ್ಡ್ ಕೋಟ್ಜಿ
ಈಗಾಗಲೇ 2 ಕೋಟಿ ರೂ. ಮೂಲಬೆಲೆ ಹೊಂದಿರುವ ದಕ್ಷಿಣ ಆಫ್ರಿಕಾ ತಂಡದ ಯುವ ವೇಗಿ ಮತ್ತು ಬ್ಯಾಟಿಂಗ್ ಆಲ್ರೌಂಡರ್ ಆಗಿರುವ ಜೆರಾಲ್ಡ್ ಕೋಟ್ಜಿ ಅವರಿಗೆ ಈ ಬಾರಿ ಐಪಿಎಲ್ನಲ್ಲಿ ಅದೃಷ್ಟ ಖಲಾಯಿಸುವ ಸಾಧ್ಯತೆ ಇದೆ. ವಿಶ್ವಕಪ್ನಲ್ಲಿ ಜೆರಾಲ್ಡ್ ಕೋಟ್ಜಿ 20 ವಿಕೆಟ್ ಕಿತ್ತು ಅತ್ಯಧಿಕ ವಿಕೆಟ್ ಕಿತ್ತ ಬೌಲರ್ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.
ಮಿಚೆಲ್ ಸ್ಟಾರ್ಕ್
ಕೆಲ ಕಾಲ ಐಪಿಎಲ್ ಆಡಿ ಆ ಬಳಿಕ ಗಾಯದ ಸಮಸ್ಯೆ ಮತ್ತು ಕೊರೊನಾ ಜೈವಿಕ ಸುರಕ್ಷತಾ ವಲಯದಲ್ಲಿ ಆಡಲು ನಿರಾಕರಿಸಿ ಐಪಿಎಲ್ನಿಂದ ದೂರ ಉಳಿದಿದ್ದ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾಕ್ ಅವರು ಈ ಬಾರಿಯ ಆಟಗಾರರ ಹಾರಜಿಗೆ ಹೆಸರು ನೊಂದಾಯಿಸಿದ್ದಾರೆ. ಎಂಟು ವರ್ಷಗಳ ಬಳಿಕ ಮತ್ತೆ ಐಪಿಎಲ್ ಟೂರ್ನಿಗೆ ಮರಳುವ ಕಾತರದಲ್ಲಿದ್ದಾರೆ. 2015ರಲ್ಲಿ ಕೊನೆಯ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮಿಚೆಲ್ ಸ್ಟಾರ್ಕ್ ಆಡಿದ್ದರು. ಇವರಿಗೂ ಈ ಬಾರಿಯ ಹರಾಜಿನಲ್ಲಿ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಇದೆ. ಮುಂಬೈ ಇಂಡಿಯನ್ಸ್ ತಂಡ ಇವರ ಮೇಲೆ ಕಣ್ಣಿಟ್ಟಿದೆ.