ದುಬೈ: ಬಹುನಿರೀಕ್ಷಿತ ಐಪಿಎಲ್ 17ನೇ ಆವೃತ್ತಿಯ ಆಟಗಾರರ ಹರಾಜು ದುಬೈನಲ್ಲಿ ನಡೆಯುತ್ತಿದ್ದು, ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಈ ಹರಾಜಿನಲ್ಲಿ(IPL Auction 2024 Live) ಯಾವ ಆಟಗಾರ ಯಾವ ತಂಡಕ್ಕೆ ಹಾಗೂ ಎಷ್ಟು ಮೊತ್ತಕ್ಕೆ ಸೇಲ್ ಆಗಬಹುದೆಂಬುದು ಸದ್ಯದ ಕುತೂಹಲ. ಹರಾಜಿನ ಎಲ್ಲ ಲೈವ್ ಮಾಹಿತಿಗಳು ಇಲ್ಲಿ ಲಭ್ಯ.
ಕೋಲ್ಕತ್ತಾ ನೈಟ್ ರೈಡರ್ಸ್(32.70 ಕೋಟಿ ರೂ.)
2 ಬಾರಿಯ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬಳಿ 32.70 ಕೋಟಿ ರೂ. ಉಳಿಕೆ ಹಣವಿದೆ. ಹೀಗಾಗಿ ಸ್ಟಾರ್ ಆಟಗಾರರನ್ನು ತನ್ನ ತಂಡಕ್ಕೆ ಸೆಳೆಯಬಹುದು. ಗರಿಷ್ಠ 12 ಆಟಗಾರರ ಅಗತ್ಯವಿದೆ. ಇದರಲ್ಲಿ 8 ಭಾರತೀಯ ಹಾಗೂ 4 ವಿದೇಶಿ ಆಟಗಾರರಿಗೆ ಅವಕಾಶ ನೀಡಬಹುದು.
ಡೆಲ್ಲಿ ಕ್ಯಾಪಿಟಲ್ಸ್
ಯುವ ಆಟಗಾರರನ್ನೇ ನೆಚ್ಚಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬಳಿ 28.95 ಕೋಟಿ ರೂ. ಹಣವಿದೆ. ಈ ಬಾರಿ 9 ಆಟಗಾರರನ್ನು ಖರೀದಿ ಮಾಡಬಹುದು. ಇದರಲ್ಲಿ 4 ವಿದೇಶಿ ಆಟಗಾರರಿಗೆ, ಐವರು ಭಾರತೀಯ ಅವಕಾಶ ನೀಡಬಹುದು. ಕಳೆದ ವರ್ಷ ಡಿಸೆಂಬರ್ನಲ್ಲಿ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ರಿಷಭ್ ಪಂತ್ 16ನೇ ಆವೃತ್ತಿಯ ಐಪಿಎಲ್ನಿಂದ ದೂರ ಉಳಿದಿದ್ದರು. ಈ ಬಾರಿ ಅವರು ಕಣಕ್ಕಿಳಿಯಲಿದ್ದಾರೆ ಎಂದು ಫ್ರಾಂಚೈಸಿ ಹೇಳಿದೆ. ಇದರಿಂದ ತಂಡ ಮತ್ತೆ ಬಲಿಷ್ಠವಾಗುವ ಸಾಧ್ಯತೆ ಇದೆ.
ಲಕ್ನೋ ಸೂಪರ್ ಜೈಂಟ್ಸ್(13.15 ಕೋಟಿ. ರೂ.)
ಕನ್ನಡಿಗ ಕೆ.ಎಲ್ ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಬಳಿ ಕೇವಲ 13.15 ಕೋಟಿ. ರೂ. ಮಾತ್ರ ಬಾಕಿ ಉಳಿದಿದ್ದು ಸ್ಟಾರ್ ಆಟಗಾರರನ್ನು ಖರೀದಿ ಮಾಡಲು ಕಷ್ಟವಾಗಬಹುದು. ಈ ಬಾರಿಯ ಹರಾಜಿನಲ್ಲಿ ಒಟ್ಟು 6 ಆಟಗಾರರನ್ನು ಖರೀದಿ ಮಾಡಬಹುದು. ನಾಲ್ವರು ಭಾರತೀಯ ಆಟಗಾರರನ್ನು ಹಾಗೂ ಇಬ್ಬರು ವಿದೇಶಿ ಆಟಗಾರರು.
ರಾಜಸ್ಥಾನ್ ರಾಯಲ್ಸ್(14.50 ಕೋಟಿ ರೂ.)
ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಬಳಿ 14.50 ಕೋಟಿ ರೂ. ಮೊತ್ತ ಬಾಕಿ ಇದೆ. ಈ ಬಾರಿ 8 ಸ್ಲಾಟ್ಗಳಲ್ಲಿ ಮೂವರು ವಿದೇಶಿ ಹಾಗೂ 5 ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ. ಈಗಾಗಲೇ ಟ್ರೆಡಿಂಗ್ ಮೂಲಕ ಲಕ್ನೋ ತಂಡದ ಅವೇಶ್ ಖಾನ್ ಅವರನ್ನು ಖರೀದಿಸಿ ದೇವದತ್ತ ಪಡಿಕ್ಕಲ್ ಅವರನ್ನು ಲಕ್ನೋಗೆ ಬಿಟ್ಟುಕೊಟ್ಟಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು(14.50 ಕೋಟಿ ರೂ.)
ಕನ್ನಡಿಗರ ನೆಚ್ಚಿನ ತಂಡ, ಸ್ಟಾರ್ ಆಟಗಾರರ ಪಡೆಯನ್ನೇ ಹೊಂದಿದ್ದರೂ ಇದುವರೆಗೂ ಕಪ್ ಗೆಲ್ಲದ ಐಪಿಎಲ್ನ ನತದೃಷ್ಟ ತಂಡಗಳಲ್ಲಿ ಒಂದಾಗಿರುವ ಆರ್ಸಿಬಿ ಫ್ರಾಂಚೈಸಿ ಬಳಿ ಕೇವಲ 14.50 ಕೋಟಿ ರೂ. ಮಾತ್ರ ಉಳಿಕೆ ಹಣವಿದೆ. ಈ ಮೊತ್ತದಲ್ಲಿ ಸ್ಟಾರ್ ಆಟಗಾರರನ್ನು ಖರೀದಿಸುವುದು ಕಷ್ಟ ಸಾಧ್ಯ. ಈ ಬಾರಿ ಒಟ್ಟು 6 ಆಟಗಾರರನ್ನು ಖರೀದಿಸಬಹುದು. ತಲಾ ಮೂರು ಭಾರತೀಯ ಮತ್ತು ವಿದೇಶಿ ಆಟಗಾರರು.