ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್(IPL Final 2024) ಟೂರ್ನಿ ಮುಕ್ತಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಫೈನಲ್ ಪಂದ್ಯ ನಡೆಯಲಿದ್ದು, ಟೇಬಲ್ ಟಾಪರ್ ಕೋಲ್ಕತಾ ನೈಟ್‌ರೈಡರ್ ಮತ್ತು ದ್ವಿತೀಯ ಸ್ಥಾನಿ ಸನ್‌ರೈಸರ್ ಪ್ರಶಸ್ತಿಗಾಗಿ ಸೆಣಸಲಿವೆ. ಈ ಬಾರಿ ಚಾಂಪಿಯನ್ ಯಾರಾಗಲಿದ್ದಾರೆ ಎಂಬ ಅಭಿಮಾನಿಗಳ ಕುತೂಹಲದ ಮಧ್ಯೆ ಕರ್ನಾಟಕದ ಕ್ರಿಕೆಟಿಗ ಕೆ. ಗೌತಮ್(Krishnappa Gowtham) ಅವರು ಕೆಕೆಆರ್ ತಂಡ ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ವಿಸ್ತಾರ ನ್ಯೂಸ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಗೌತಮ್, ಸಿನೆಮಾ, ಕ್ರಿಕೆಟ್ ಬಗ್ಗೆ ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಹಲವು ಕ್ರಿಕೆಟಿಗರ ಜೀವನಾಧಾರಿತ ಸಿನಿಮಾ ಬಂದಿದೆ. ನಿಮ್ಮ ಜೀವನಾಧಾರಿತ ಸಿನಿಮಾ ಕೂಡ ತೆರೆ ಮೇಲೆ ಬರುವ ಆಸೆ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೌತಮ್, ಇಲ್ಲ ಈ ರೀತಿಯ ಯಾವುದೇ ಆಸೆ ಇಲ್ಲ. ಸದ್ಯಕ್ಕೆ ಉತ್ತಮ ಕ್ರಿಕೆಟ್ ಆಡುವುದೊಂದೇ ನನ್ನ ಗುರಿ ಎಂದರು. ಇದೇ ವೇಳೆ ಸಿನಿಮಾವನ್ನು ತಾನು ಹೆಚ್ಚಾಗಿ ನೋಡುವುದಿಲ್ಲ. ಕೊನೆಯ ಬಾರಿಗೆ ನೋಡಿದ ಸಿನೆಮಾವೆಂದರೆ ಕಾತಾಂರ ಎಂದರು. ಸಮಯ ಸಿಕ್ಕಾಗ ಮಗಳ ಜತೆ ಆಡುತ್ತಾ ಕಾಲ ಕಳೆಯುತ್ತೇನೆ ಎಂದರು.
ಆರ್ಸಿಬಿಯ ಹೊಸ ಅಧ್ಯಾಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೌತಮ್, ಈ ಬಾರಿಯ ಲೀಗ್ನಲ್ಲಿ ಆರಂಭಿಕ ಹಂತದಲ್ಲಿ ಸತತವಾಗಿ ಸೋಲು ಕಂಡು ಆ ಬಳಿಕ ಗೆಲ್ಲಲೇ ಬೇಕಾದ ಎಲ್ಲ 6 ಪಂದ್ಯಗಳನ್ನು ಗೆದ್ದಿರುವುದು ನಿಜಕ್ಕೂ ಹೊಸ ಅಧ್ಯಾಯ ಎಂದರು. ಇದೇ ವೇಳೆ ಆರ್ಸಿಬಿ ಪರ ಆಡುವ ಬಯಕೆಯನ್ನು ಕೂಡ ವ್ಯಕ್ತಪಡಿಸಿದರು. ಲಕ್ನೋ ತಂಡದ ಪರ ಆಡಿದ ಅನುಭವ ಕೂಡ ಹಂಚಿಕೊಂಡು, ಮೂರು ವರ್ಷದಿಂದ ಲಕ್ನೋ ತಂಡದ ಪರ ಆಡಿದರೂ ಕೂಡ ಬೇರೆ ಫ್ರಾಂಚೈಸಿ ಪರ ಆಡಿದಂತಾಗಿಲ್ಲ. ಏಕೆಂದರೆ ತಂಡದ ನಾಯಕ ಕೆ.ಎಲ್ ರಾಹುಲ್ ಸೇರಿ ಹಲವು ಕರ್ನಾಟಕದ ಆಟಗಾರರಿದ್ದರು. ಹೀಹಾಗಿ ಕರ್ನಾಟಕ ತಂಡದ ಪರವೇ ಆಡುತ್ತಿರುವಂತೆ ಭಾಸವಾಗುತ್ತಿತ್ತು ಎಂದರು.
ಇದನ್ನೂ ಓದಿ IPL Final 2024: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು? ಮಳೆ ನಿಯಮ ಹೇಗಿದೆ?
ಈ ಬಾರಿ ಯಾವ ತಂಡ ಕಪ್ ಗೆಲ್ಲಲಿದೆ ಎಂದು ಕೇಳಿದಾಗ ಕೆಕೆಆರ್ ತಂಡ ಗೆಲ್ಲುವ ಸಾಧ್ಯತೆ ಹೆಚ್ಚು ಎಂದರು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿ ವೈವಿಧ್ಯಮಯವಾಗಿದೆ. ಹೀಗಾಗಿ ಕೆಕೆಆರ್ ಟ್ರೋಫಿ ಗೆಲ್ಲಲಿದೆ ಎಂದರು.
ಫೈನಲ್ನಲ್ಲಿ ವಿಜೇತ ತಂಡ 20 ಕೋಟಿ ರೂಪಾಯಿ ಬಹುಮಾನವನ್ನು ಪಡೆಯಲಿದೆ. ರನ್ನರ್ ಅಪ್ ತಂಡಕ್ಕೆ 15 ಕೋಟಿ ರೂ. ಸಿಗಲಿದೆ. ಮೂರನೇ ಸ್ಥಾನಿಯಾದ ತಂಡಕ್ಕೆ 7 ಕೋಟಿ ಮತ್ತು 4ನೇ ಸ್ಥಾನಿಗೆ 6.5 ಕೋಟಿ ರೂ ಸಿಗಲಿದೆ. ಈಗಾಗಲೇ ರಾಜಸ್ಥಾನ್ ಮತ್ತು ಆರ್ಸಿಬಿ ಪ್ಲೇ ಆಫ್ನಲ್ಲಿ ಸೋಲಿ ಕಂಡು ಕ್ರಮವಾಗಿ 3 ಮತ್ತು ನಾಲ್ಕನೇ ಸ್ಥಾನ ಪಡೆದಿವೆ. ಹೀಗಾಗಿ ರಾಜಸ್ಥಾನ್ಗೆ(7 ಕೋಟಿ) ಮತ್ತು ಆರ್ಸಿಬಿಗೆ(6.5 ಕೋಟಿ) ಮೊತ್ತ ಸಿಗಲಿದೆ. ಒಟ್ಟು ಬಹುಮಾನ ಮೊತ್ತ 46.5 ಕೋಟಿ ರೂ. ಆಗಿದೆ.
ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಆಟಗಾರರಿಗೆ 15 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಸದ್ಯ ಆರ್ಸಿಬಿ ತಂಡದ ವಿರಾಟ್ ಕೊಹ್ಲಿ ಈ ಬಾರಿಯ ಟೂರ್ನಿಯಲ್ಲಿ 741 ರನ್ ಬಾರಿಸಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಇವರ ರನ್ ಹಿಂದಿಕ್ಕಲು ಇನ್ನು ಯಾರಿಗೂ ಅವಕಾಶ ಇಲ್ಲದ ಕಾರಣ ಈ ಪ್ರಶಸ್ತಿ ಇವರಿಗೇ ಸಿಗಲಿದೆ.