ನವದೆಹಲಿ: 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅತ್ಯಂತ ಹೀನಾಯ ಪ್ರದರ್ಶನ ತೋರಿತ್ತು. ತಂಡದ ಈ ಪ್ರದರ್ಶನ ಕಂಡು ಸ್ವತಃ ತಂಡದ ಸಹ ಮಾಲೀಕ ಪಾರ್ಥ್ ಜಿಂದಾಲ್ ಅವರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಮ್ಯಾನೆಜ್ಮೆಂಟ್ ಮುಂದಿನ ಆವೃತ್ತಿಗೆ ತಂಡದಲ್ಲಿ ಮೇಜರ್ ಸರ್ಜರಿ ನಡೆಸಲು ಮುಂದಾಗಿದೆ.
ಕಳೆದ ಕೆಲ ಆವೃತ್ತಿಗಳಲ್ಲಿ ಡೆಲ್ಲಿ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್(Ricky Ponting) ಅವರನ್ನು ಮುಂದಿನ ಆವೃತ್ತಿಗೆ ತಂಡದಿಂದ ಕೈ ಬಿಡಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ಫ್ರಾಂಚೈಸಿ, ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಅವರನ್ನು ಕೋಚ್ ಆಗಿ ಆಯ್ಕೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಕಳೆದ ಆವೃತ್ತಿಯವರೆಗೂ ಗಂಗೂಲಿ ಡೆಲ್ಲಿ ತಂಡದ ನಿರ್ದೇಶಕರಾಗಿ ಈ ತಂಡದೊಂದಿಗಿದ್ದರು. ಈಗ ಅವರು ಈ ತಂಡದ ಕೋಚ್ ಹುದ್ದೆಯನ್ನು ನಿಭಾಯಿಸಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಫ್ರಾಂಚೈಸಿ ಯಾವುದೇ ಅಧಿಕೃತ ಪ್ರಕಟನೆ ಹೊರಡಿಸಿಲ್ಲ.
ಇದನ್ನೂ ಓದಿ IPL 2023: ಫೈನಲ್ ಪಂದ್ಯದಲ್ಲಿ ಪಾಂಡ್ಯ ತೋರಿದ ವರ್ತನೆಗೆ ಸೆಹವಾಗ್ ಆಕ್ರೋಶ
ಈ ಬಾರಿ ಐಪಿಎಲ್ನಲ್ಲಿ ಡೆಲ್ಲಿ ತಂಡ ಆಡಿದ ಆರಂಭಿಕ ಆರು ಪಂದ್ಯದಲ್ಲಿ ಸೋಲಯು ಕಂಡು ಬಳಿಕ ಗೆಲುವಿನ ಹಳಿ ಏರಿತ್ತು. ಒಟ್ಟಾರೆ ಡೆಲ್ಲಿ ಆಡಿದ 14 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು 9ನೇ ಸ್ಥಾನ ಪಡೆದಿತ್ತು. ರಿಷಭ್ ಪಂತ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ಡೇವಿಡ್ ವಾರ್ನರ್ ಅವರು ಈ ಬಾರಿ ತಂಡವನ್ನು ಮುನ್ನಡೆಸಿದ್ದರು. ಇವರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರನು ತಂಡದ ಪರ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿರಲಿಲ್ಲ.