ಬೆಂಗಳೂರು: ಐಪಿಎಲ್ 16ನೇ ಆವೃತ್ತಿಯ ಪ್ಲೇ ಆಫ್ ಪಂದ್ಯಗಳು ಚೆನ್ನೈ ಮತ್ತು ಅಹಮದಾಬಾದ್ನಲ್ಲಿ ನಡೆಯಲಿವೆ. ಬಿಸಿಸಿಐ ಶುಕ್ರವಾರ (ಏಪ್ರಿಲ್ 21ರಂದು) ಈ ಮಾಹಿತಿ ಪ್ರಕಟಿಸಿದೆ ಎಂಬುದಾಗಿ ವರದಿಯಾಗಿದೆ. ಚೆನ್ನೈ ಚೆಪಾಕ್ ಸ್ಟೇಡಿಯಮ್ನಲ್ಲಿ ಮೊದಲ ಕ್ವಾಲಿಫೈರ್ ಹಾಗೂ ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಆಯೋಜನೆಗೊಂಡಿದೆ.
ಐಪಿಎಲ್ ಆಡಳಿತ ಮಂಡಳಿ ಈ ಹಿಂದೆ ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿತ್ತು. ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳ ತಾಣ ಮತ್ತು ದಿನಾಂಕವನ್ನು ತಿಳಿಸಿದೆ. ಇದೀಗ ಹೊಸ ದಿನಾಂಕವನ್ನು ಬಹಿರಂಗ ಮಾಡಿದ್ದು, ಮೇ 23 ಹಾಗೂ 24ರಂದು ಕ್ವಾಲಿಫೈಯರ್ 1 ಹಾಗೂ ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಮೇ 26 ಹಾಗೂ ಮೇ 28ರಂದು ಫೈನಲ್ ಪಂದ್ಯ ನಡೆಯಲಿದೆ.
ಹೆಚ್ಚಿದ ಉತ್ಸಾಹ
2023ನೇ ಆವೃತ್ತಿಯ ಐಪಿಎಲ್ ಪಂದ್ಯಗಳು ಜಿದ್ದಾಜಿದ್ದಿನಿಂದ ನಡೆಯುತ್ತಿವೆ. ಬಹುತೇಕ ಪಂದ್ಯಗಳಲ್ಲಿ ರೋಚಕ ಫಲಿತಾಂಶಗಳು ಮೂಡಿ ಬರುತ್ತಿವೆ. ಶುಕ್ರವಾರಕ್ಕೆ 29 ಪಂದ್ಯಗಳು ಮುಕ್ತಾಯಗೊಂಡಿದ್ದು ಟೂರ್ನಿಯು ಕಳೆಗಟ್ಟುತ್ತಿದೆ. ಆರಂಭದಲ್ಲಿ ಪ್ರಮುಖ ಆಟಗಾರರು ಗಾಯಗೊಂಡಿರುವುದರಿಂದ ಹಾಲಿ ಆವೃತ್ತಿಯ ಟೂರ್ನಿ ಕಳೆಗುಂದಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಹೊಸ ಪ್ರತಿಭೆಗಳು ಅಬ್ಬರದ ಪ್ರದರ್ಶನ ನೀಡುತ್ತಿರುವ ಕಾರಣ ಹೆಚ್ಚೆಚ್ಚು ಗಮನ ಸೆಳೆಯುತ್ತಿದೆ.
ಐಪಿಎಲ್ ವೀಕ್ಷಿಸಿದ ಟಿಮ್ ಕುಕ್
ಆ್ಯಪಲ್ ಕಂಪೆನಿಯ ಸಿಇಒ ಟಿಮ್ ಕುಕ್ (Apple CEO Tim cook) ಅವರು ಭಾರತ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಅವರು ವಿಶ್ವದ ಕ್ಯಾಶ್ ರಿಚ್ ಕ್ರಿಕೆಟ್ ಲೀಗ್ ಐಪಿಎಲ್ ಪಂದ್ಯ ವೀಕ್ಷಿಸಿದ್ದಾರೆ. ಗುರುವಾರ ನಡೆದ ಡೆಲ್ಲಿ ಮತ್ತು ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಅವರು ಕೂಡ ಸಾಕ್ಷಿಯಾಗಿದ್ದರು. ಅವರು ಪಂದ್ಯ ವೀಕ್ಷಿಸಿದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಸೋಮವಾರ ಭಾರತದ ವಾಣಿಜ್ಯ ರಾಜಧಾನಿ ಮುಂಬೈ ನಗರಿಯಲ್ಲಿ ದೇಶದ ಮೊದಲ ಆ್ಯಪಲ್ ಬಿಕೆಸಿ ಸ್ಟೋರ್ ತೆರೆದ ಬಳಿಕ ದಿಲ್ಲಿಯಲ್ಲಿ ಎರಡನೇ ಮಳಿಗೆಗೆ ಗುರುವಾರ ಟಿಮ್ ಕುಕ್ ಚಾಲನೆ ನೀಡಿದ್ದರು. ಇದೇ ವೇಳೆ ಅವರು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ಪಂದ್ಯವನ್ನು ವೀಕ್ಷಿಸಿದ್ದಾರೆ. ಇವರ ಜತೆ ಬಾಲಿವುಡ್ ನಟಿ ಸೋನಂ ಕಪೂರ್ ದಂಪತಿ ಕೂಡ ಪಂದ್ಯ ವೀಕ್ಷಣೆ ಮಾಡಿದ್ದಾರೆ. ಸೋನಂ ಕಪೂರ್ ಅವರು ಟಿಮ್ ಕುಕ್ ಜತೆಗೆ ಪಂದ್ಯ ವೀಕ್ಷಿಸುತ್ತಿರುವ ಫೋಟೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.