ಮುಂಬಯಿ: ಇಂಗ್ಲೆಂಡ್ ಸೀಮಿತ ಓವರ್ಗಳ ನಾಯಕ(england cricket captain), ಟಿ20 ವಿಶ್ವಕಪ್ ವಿಜೇತ ಜಾಸ್ ಬಟ್ಲರ್(jos buttler) ಅವರಿಗೆ ರಾಜಸ್ಥಾನ್ ರಾಯಲ್ಸ್(rajasthan royals) ಬಿಗ್ ಆಫರ್ ಒಂದನ್ನು ನೀಡಿದೆ. ರಾಯಲ್ಸ್ ಮ್ಯಾನೇಜ್ಮೆಂಟ್ ಬಟ್ಲರ್ ಅವರನ್ನು ದೀರ್ಘಾವಧಿಗೆ ತಮ್ಮೊಂದಿಗೆ ಉಳಿಸಲು ಮತ್ತು ನಾಲ್ಕು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲು ಉತ್ಸುಕವಾಗಿದೆ ಎಂದು ವರದಿಯಾಗಿದೆ.
ಪ್ರಸ್ತುತ ಐಪಿಎಲ್ನಲ್ಲಿ(IPL) ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಬಟ್ಲರ್ ಅವರನ್ನು ತಮ್ಮ ಫ್ರಾಂಚೈಸಿಯಲ್ಲಿಯೇ 4 ವರ್ಷ ಉಳಿಸಿಕೊಳ್ಳಲು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ರಾಯಲ್ಸ್ ಫ್ರಾಂಚೈಸಿಯು ಬಟ್ಲರ್ ಅವರಿಗೆ ನಾಲ್ಕು ವರ್ಷಕ್ಕೆ 40 ಕೋಟಿ ರೂ. ನೀಡಲು ಮುಂದಾಗಿದೆ ಎಂದು ವರದಿ ತಿಳಿಸಿದೆ.
ಒಂದು ವೇಳೆ ಬಟ್ಲರ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರೆ ಅವರು ಇಂಗ್ಲೆಂಡ್ ತಂಡದೊಂದಿಗಿನ ಅಂತಾರಾಷ್ಟ್ರೀಯ ಒಪ್ಪಂದವನ್ನು ಬಿಡಬೇಕಾಗಿದೆ. ಅಲ್ಲದೆ ಇಂಗ್ಲೆಂಡ್ ಪರ ಆಡಲು ಅವರು ರಾಯಲ್ಸ್ ಫ್ರಾಂಚೈಸಿ ಮ್ಯಾನೇಜ್ಮೆಂಟ್ನ ಅನುಮತಿಯನ್ನು ಪಡೆಯಬೇಕಾಗುತ್ತದೆ. ಬಟ್ಲರ್ ಜತೆಗೆ, ಮುಂಬೈ ಇಂಡಿಯನ್ಸ್ ಸಹ ಜೋಫ್ರಾ ಆರ್ಚರ್ಗೆ ಇದೇ ರೀತಿಯ ಆಫರ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜಾಸನ್ ರಾಯ್ ಅವರು ಇತ್ತೀಚೆಗೆ ಕೆಕೆಆರ್ನೊಂದಿಗೆ ಇದೇ ರೀತಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅವರು ಮುಂಬರುವ ಮೇಜರ್ ಲೀಗ್ ಕ್ರಿಕೆಟ್ (MLC) ನಲ್ಲಿ ಎಲ್ಎ ನೈಟ್ ರೈಡರ್ಸ್‌ಗಾಗಿ ಆಡಲಿದ್ದಾರೆ.
ಜಾಸ್ ಬಟ್ಲರ್ ಅವರು ಇದುವರೆಗೆ 96 ಐಪಿಎಲ್ ಪಂದ್ಯಗಳನ್ನು ಆಡಿದ್ದು 5 ಶತಕ ಮತ್ತು 19 ಅರ್ಧಶತಕ ಬಾರಿಸಿದ್ದಾರೆ. ಒಟ್ಟಾರೆ ಅವರು ಐಪಿಎಲ್ನಲ್ಲಿ 3223 ರನ್ ಗಳಿಸಿದ್ದಾರೆ. 2018ರಲ್ಲಿ ಬಟ್ಲರ್ ಅವರು ರಾಜಸ್ಥಾನ್ ತಂಡ ಸೇರಿದ್ದರು. ಇದುವರೆಗೆ ರಾಜಸ್ಥಾನ್ ಪರ 71 ಪಂದ್ಯ ಆಡಿದ್ದಾರೆ. ಅವರು ಬಾರಿಸಿದ 5 ಶತಕಗಳು ರಾಜಸ್ಥಾನ್ ಪರ ದಾಖಲಾಗಿದೆ.
ಟಿ20ಯಲ್ಲಿ 10 ಸಾವಿರ ರನ್ ಪೂರೈಸಿದ ಬಟ್ಲರ್
ಇತ್ತೀಚಿಗಷ್ಟೇ ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಬಟ್ಲರ್ ಅವರು 10 ಸಾವಿರ ರನ್ಗಳ ಗಡಿ ದಾಟಿದ ಸಾಧನೆ ಮಾಡಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ ಸಾಧಕರ ಪಟ್ಟಿಯಲ್ಲಿ ಬಟ್ಲರ್ಗೆ 9ನೇ ಸ್ಥಾನ. 14,562 ರನ್‌ಗಳನ್ನು ಕಲೆ ಹಾಕಿರುವ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್(Chris Gayle) ಅವರು ಅಗ್ರಸ್ಥಾನ ಪಡೆದಿದ್ದಾರೆ. ಆ ಬಳಿಕ ಕ್ರಮಾವಾಗಿ ಶೋಯೆಬ್ ಮಲಿಕ್(12,528 ರನ್), ಕೈರನ್ ಪೊಲಾರ್ಡ್(Kieron Pollard) (12,175 ರನ್) ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ ತಂಡದ ವಿರಾಟ್ ಕೊಹ್ಲಿ(Virat Kohli) ಅವರು (11,965 ರನ್) ನಾಲ್ಕನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ನಲ್ಲಿ ಶೂನ್ಯ ಸುತ್ತಿ ದಾಖಲೆ ಬರೆದಿದ್ಧ ಬಟ್ಲರ್
ಜಾಸ್ ಬಟ್ಲರ್ ಅವರು ಈ ಬಾರಿ ಐಪಿಎಲ್ನಲ್ಲಿ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದರು. ಒಂದೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯಧಿಕ ಶೂನ್ಯ ಸಂಪಾದನೆ ಮಾಡಿದ ಆಟಗಾರ ಎನಿಸಿಕೊಂಡಿದ್ದರು. 5ನೇ ಬಾರಿಗೆ ಶೂನ್ಯಕ್ಕೆ ಔಟಾದ ಆಟಗಾರ ಎಂಬ ಹಣೆಪಟ್ಟಿ ಕಟ್ಟಿಕೊಂಡು ಈ ಕಳಪೆ ಸಾಧನೆ ಮಾಡಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು.