ಅಲ್‌ರಿಯಾನ್ (ಕತಾರ್): ತಮ್ಮ ದೇಶದಲ್ಲಿ ನಡೆಯುತ್ತಿರುವ ಬುರ್ಖಾ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಿ ಫುಟ್ಬಾಲ್ ವಿಶ್ವ ಕಪ್ ಪಂದ್ಯಗಳ ವೇಳೆ ರಾಷ್ಟ್ರಗೀತೆ ಹಾಡದೇ ಇರಲು ನಿರ್ಧರಿಸಿದ್ದ ಇರಾನ್ ಫುಟ್ಬಾಲ್ ತಂಡ ಕೊನೆಗೂ ಅಲ್ಲಿನ ಸರಕಾರದ ಒತ್ತಡಕ್ಕೆ ಮಣಿದಿದೆ. ಶುಕ್ರವಾರ ನಡೆದ ವೇಲ್ಸ್ ವಿರುದ್ಧದ ಪಂದ್ಯಕ್ಕೆ ಮೊದಲು ಆಟಗಾರರು ರಾಷ್ಟ್ರಗೀತೆ ಹಾಡಿದ್ದು ಈ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ ಎಂಬುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಇಸ್ಲಾಮಿಕ್ ರಾಷ್ಟ್ರ ಇರಾನ್‌ನಲ್ಲಿ ಚಾಲ್ತಿಯಲ್ಲಿರುವ ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಯರಿಗೆ ಬುರ್ಖಾ ಕಡ್ಡಾಯ ಎಂಬ ಕಾನೂನಿಗೆ ವಿರೋಧ ವ್ಯಕ್ತಗೊಂಡಿದ್ದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಹೋರಾಟದ ನೇತೃತ್ವ ವಹಿಸಿದ್ದ ಮಾಹ್ಸಾ ಅಮಿನಿ ಎಂಬುವರು ಅಲ್ಲಿನ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದರು. ಆ ಬಳಿಕ ಪ್ರತಿಭಟನೆ ಭುಗಿಲೆದ್ದಿದೆ. ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಇರಾನ್ ಆಟಗಾರರು ಫಿಫಾ ವಿಶ್ವ ಕಪ್ ಆರಂಭಗೊಂಡ ಮರು ದಿನ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಾಷ್ಟ್ರಗೀತೆ ಹಾಡಿರಲಿಲ್ಲ. ಇದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು.
ಆಟಗಾರರ ನಿರ್ಧಾರದ ವಿರುದ್ಧ ಆ ರಾಷ್ಟ್ರದಲ್ಲಿ ಭಾರೀ ಅಸಮಾಧಾನ ವ್ಯಕ್ತಗೊಂಡಿದ್ದವು. ಆಟಗಾರರು ರಾಷ್ಟ್ರ ದ್ರೋಹದ ಕೆಲಸ ಮಾಡಿದ್ದಾರೆ ಎಂಬುದಾಗಿ ಹೇಳಲಾಗಿತ್ತು. ಜಾಗತಿಕ ಮಟ್ಟದಲ್ಲಿ ಇರಾನ್ ಮರ್ಯಾದೆ ತೆಗೆದಿದ್ದಾರೆ ಎಂಬುದಾಗಿಯೂ ಹೇಳಲಾಗಿತ್ತು. ಈ ಎಲ್ಲ ಬೆಳವಣಿಗೆ ಬಳಿಕ ಮಧ್ಯಪ್ರವೇಶಿಸಿದ ಅಲ್ಲಿನ ಸರಕಾರ ಆಟಗಾರರೊಂದಿಗೆ ಮಾತುಕತೆ ನಡೆಸಿ, ರಾಷ್ಟ್ರಗೀತೆ ಆಡುವಂತೆ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಶುಕ್ರವಾರ ನಡೆದ ವೇಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ರಾಷ್ಟ್ರಗೀತೆಗೆ ಧ್ವನಿಯಾಗಿದ್ದಾರೆ.
ಇರಾನ್ ಸರಕಾರದ ಮಾತುಕತೆಯ ಪ್ರಕಾರ, ಪ್ರತಿಭಟನೆ ಬೆಂಬಲ ವ್ಯಕ್ತಪಡಿಸಿ ಘೋಷಣೆಗಳನ್ನು ಬರೆದುಕೊಂಡಿದ್ದ ಬಾವುಟ ಅಥವಾ ಬಟ್ಟೆಗಳನ್ನು ಧರಿಸಿಕೊಂಡು ಬಂದ ಅಭಿಮಾನಿಗಳಿಗೆ ಸ್ಟೇಡಿಯಮ್ ಒಳಗೆ ಪ್ರವೇಶ ಕೂಡ ಕೊಡಲಿಲ್ಲ ಎಂಬುದಾಗಿಯೂ ವರದಿಯಾಗಿದೆ.
ಇದನ್ನೂ ಓದಿ | FIFA World Cup | ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್ ತಂಡ, ವಿಶ್ವ ಕಪ್ ವೇಳೆ ಮತ್ತೊಂದು ವಿವಾದ