ಡಬ್ಲಿನ್: ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್(58) ಅವರ ಸೊಗಸಾದ ಅರ್ಧಶತಕ ಮತ್ತು ಸಂಜು ಸ್ಯಾಮ್ಸನ್(40) ಹಾಗೂ ರಿಂಕು ಸಿಂಗ್(38) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ, ದ್ವಿತೀಯ ಟಿ20 ಪಂದ್ಯದಲ್ಲಿ ಉತ್ತಮ ರನ್ ಕಲೆಹಾಕಿದೆ. ಇಲ್ಲಿನ ಮಲಾಹೈಡ್‌ನ ವಿಲೇಜ್(The Village, Dublin) ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 185 ರನ್ ಗಳಿಸಿ ಸವಾಲೊಡ್ಡಿದೆ. ಜವಾಬಿತ್ತ ಐರ್ಲೆಂಡ್(Ireland vs India, 2nd T20) ಗೆಲುವಿಗೆ 186 ರನ್ ಬಾರಿಸಬೇಕಿದೆ.
ತಿಲಕ್ ವರ್ಮಾ ಮತ್ತೆ ವಿಫಲ
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಒಂದು ಅರ್ಧಶತಕ ಸೇರಿ ಟೂರ್ನಿಯಲ್ಲಿ ಒಟ್ಟು 173 ರನ್ ಗಳಿಸಿ ಮಿಂಚಿದ್ದ ತಿಲಕ್ ವರ್ಮಾ(Tilak Varma) ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರುದ್ಧದ ದ್ವಿತೀಯ ಪಂದ್ಯದಲ್ಲಿಯೂ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಮೊದಲ ಪಂದ್ಯದಲ್ಲಿ ಶೂನ್ಯ ಸುತ್ತಿದ ಅವರು ದ್ವಿತೀಯ ಪಂದ್ಯದಲ್ಲಿ ಕೇವಲ ಒಂದಂಕಿಗೆ ಸೀಮಿತರಾದರು. ವಿಂಡೀಸ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಉತ್ತಮ ಬ್ಯಾಟ್ ಬೀಸಿದ್ದ ಈ ಯುವ ಆಟಗಾರ ಮೇಲೆ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಭಾರತದ ತಂಡದ ಭರವಸೆಯ ಆಟಗಾರ ಎಂಬ ನಿರೀಕ್ಷೆಯೊಂದನ್ನು ಇಟ್ಟಿತ್ತು. ಏಷ್ಯಾಕಪ್ಗೂ ಆಯ್ಕೆ ಮಾಡುವ ಯೋಜನೆಯಲ್ಲಿತ್ತು. ಆದರೆ ಅವರ ಮೇಲಿನ ನಿರೀಕ್ಷೆ ಹುಸಿಯಾದಂತೆ ಕಾಣುತ್ತಿದೆ.
ಐಪಿಎಲ್ನಲ್ಲಿ ರಾಜಸ್ಥಾನ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದ ಯುವ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ತಂಡದ ನೆರವಿಗೆ ಧಾವಿಸುವಲ್ಲಿ ವಿಫಲರಾದರು. ಬಡ ಬಡನೆ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 18 ರನ್ಗೆ ಆಟ ಮುಗಿಸಿದರು. ಆದರೆ ಇವರ ಜತೆಗಾರ ಋತುರಾಜ್ ಗಾಯಕ್ವಾಡ್(Ruturaj Gaikwad) ತಂಡಕ್ಕೆ ಆಸರೆಯಾಗಿ ಆರಂಭಿಕ ಆಘಾತದಿಂದ ಪಾರು ಮಾಡಿದರು.
ಸಂಜು ಸ್ಫೋಟಕ ಆಟ
ಸರಿಯಾಗಿ ಅವಕಾಶ ಸಿಗದೆ ಪರದಾಡುತ್ತಿದ್ದ ಕೇರಳದ ಸ್ಟಂಪರ್, ಹಾರ್ಡ್ ಹಿಟ್ಟರ್ ಸಂಜು ಸ್ಯಾಮ್ಸನ್(Sanju Samson) ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಗಾಯಕ್ವಾಡ್ ಜತೆ ಉತ್ತಮ ಇನಿಂಗ್ಸ್ ಕಟ್ಟಿ ಮೂರನೇ ವಿಕೆಟ್ಗೆ 71 ರನ್ಗಳ ಅಮೂಲ್ಯ ಜತೆಯಾಟ ಕೊಡುಗೆ ನೀಡಿದರು. 26 ಎಸೆತ ಎದುರಿಸಿದ ಸಂಜು 5 ಆಕರ್ಷಕ ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 40 ರನ್ ಬಾರಿಸಿದರು. ಈ ಇನಿಂಗ್ಸ್ ಮೂಲಕ ಸೋಮವಾರ ಪ್ರಕಟಗೊಳ್ಳುತ್ತದೆ ಎನ್ನಲಾದ ಏಷ್ಯಾ ಕಪ್ ತಂಡದಲ್ಲಿ ತಾನೂ ಕೂಡ ಸ್ಪರ್ಧಿ ಎಂಬ ಸಂದೇಶವೊಂದನ್ನು ನೀಡಿದ್ದಾರೆ.
ಅರ್ಧಶತಕ ಬಾರಿಸಿದ ಗಾಯಕ್ವಾಡ್
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಐರ್ಲೆಂಡ್ ಬೌಲರ್ಗಳ ದಾಳಿಗೆ ಎದೆಯೊಡ್ಡಿ ನಿಂತ ಋತುರಾಜ್ ಗಾಯಕ್ವಾಡ್ ಅರ್ಧಶತಕ ಬಾರಿಸಿ ಮಿಂಚಿದರು. ಆರಂಭದಲ್ಲಿ ತಾಳ್ಮೆಯ ಬ್ಯಾಟಿಂಗ್ ನಡೆಸಿದ ಅವರು ಬಳಿಕ ಆಕ್ರಮಣ ಕಾರಿ ಆಟದ ಮೂಲಕ ಐರ್ಲೆಂಡ್ ಬೌಲರ್ಗಳ ಬೆವರಿಳಿಸಿದರು. ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 58 ರನ್ ಬಾರಿಸಿದರು. ಇದಕ್ಕೆ 43 ಎಸೆತಗಳನ್ನು ಎದುರಿಸಿದರು. ಇದು ಅವರ ದ್ವಿತೀಯ ಟಿ20 ಅರ್ಧಶತಕವಾಗಿದೆ.
ಇದನ್ನೂ ಓದಿ Ireland vs India: ದ್ವಿತೀಯ ಪಂದ್ಯಕ್ಕೂ ಮಳೆ ಕಾಟ; ಪಿಚ್ ರಿಪೋರ್ಟ್,ಸಂಭಾವ್ಯ ತಂಡ ಹೀಗಿದೆ
ಸಿಡಿದು ನಿಂತ ರಿಂಕು
ಐಪಿಎಲ್ನ ಸಿಕ್ಸರ್ ಕಿಂಗ್ ಖ್ಯಾತಿಯ ರಿಂಕು ಸಿಂಗ್(Rinku Singh) ಅವರಿಗೆ ಈ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಲಭಿಸಿತು. ಐಪಿಎಲ್ನಂತೆ ಇಲ್ಲಿಯೂ ಸಿಡಿದು ನಿಂತ ರಿಂಕು ಅಂತಿಮ ಹಂತದಲ್ಲಿ 21 ಎಸೆತಗಳಿಂದ ಭರ್ಜರಿ ಮೂರು ಸಿಕ್ಸರ್ ಮತ್ತು 2 ಬೌಂಡರಿ ಬಾರಿಸಿ 38 ರನ್ ಚಚ್ಚಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ ಆಲ್ರೌಂಡರ್ ಶಿವಂ ದುಬೆ 2 ಸಿಕ್ಸರ್ ಸಹಾಯದಿಂದ ಅಜೇಯ 22 ರನ್ ಗಳಿಸಿದರು. ಐಲೆಂಡ್ ಪರ ಬ್ಯಾರಿ ಮೆಕಾರ್ಥಿ ಉತ್ತಮ ಬೌಲಿಂಗ್ ಸಂಘಟಿಸಿ ನಾಲ್ಕು ಓವರ್ ಎಸೆದು 32 ರನ್ಗೆ 2 ವಿಕೆಟ್ ಉರುಳಿಸಿದರು.