ಡಬ್ಲಿನ್: ಸಂಘಟಿತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರಿದ ಟೀಮ್ ಇಂಡಿಯಾ(Ireland vs India) ಐರ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ 33 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ(India won by 33 runs). ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡು ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು ವಶಪಡಿಸಿಕೊಂಡಿದೆ. ಅಂತಿಮ ಪಂದ್ಯ ಬುಧವಾರ ಇದೇ ಮೈದಾನದಲ್ಲಿ ನಡೆಯಲಿದೆ. 11 ತಿಂಗಳ ಬಳಿಕ ಕ್ರಿಕೆಟ್ಗೆ ಮರಳಿದ ಜಸ್ಪ್ರೀತ್ ಬುಮ್ರಾ(jasprit bumrah) ಅವರಿಗೆ ನಾಯಕನಾಗಿ ಈ ಸರಣಿ ಗೆದ್ದಿರುವುದು ಏಷ್ಯಾಕಪ್ಗೂ ಮುನ್ನ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ.
ಮಲಾಹೈಡ್‌ನ ವಿಲೇಜ್(The Village, Dublin) ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್(58) ಅವರ ಸೊಗಸಾದ ಅರ್ಧಶತಕ ಮತ್ತು ಸಂಜು ಸ್ಯಾಮ್ಸನ್(40) ಹಾಗೂ ರಿಂಕು ಸಿಂಗ್(38) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಜವಾಬಿತ್ತ ಐರ್ಲೆಂಡ್ ತನ್ನ ಪಾಲಿನ ಆಟದಲ್ಲಿ 8 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿ ಶರಣಾಯಿತು.
ಆಂಡ್ರ್ಯೂ ಬಾಲ್ಬಿರ್ನಿ ಏಕಾಂಗಿ ಹೋರಾಟ
ಭಾರತದ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಐರ್ಲೆಂಡ್ ಆರಂಭದಲ್ಲೇ ಕನ್ನಡಿಗ ಪ್ರಸಿದ್ಧ್ ಕೃಷ್ಣ(Prasidh Krishna) ತಮ್ಮ ಮೊದಲ ಓವರ್ನಲ್ಲಿಯೇ ಅವಳಿ ಆಘಾತವಿಕ್ಕಿದರು. ನಾಯಕ ಪಾಲ್ ಸ್ಟಿರ್ಲಿಂಗ್ ಮತ್ತು ಲೋರ್ಕನ್ ಟಕರ್ ಅವರನ್ನು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ಗೆ ಅಟ್ಟಿದರು. ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಮಧ್ಯೆಯೂ ತಂಡದ ಗೆಲುವಿಗೆ ಟೊಂಕ ಕಟ್ಟಿ ನಿಂತ ಆರಂಭಿಕ ಆಟಗಾರ ಆಂಡ್ರ್ಯೂ ಬಾಲ್ಬಿರ್ನಿ(Andrew Balbirnie), ಭಾರತೀಯ ಬೌಲರ್ಗಳ ದಾಳಿಗೆ ಎದೆಯೊಡ್ಡಿ ನಿಂತು ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿದರು. ತಂಡದ ಗೆಲುವಿಗಾಗಿ ಏಕಾಂಗಿಯಾಗಿ ಕ್ರೀಸ್ ಕಚ್ಚಿ ನಿಂತ ಅವರು ಶಕ್ತಿ ಮೀರಿ ಬ್ಯಾಟಿಂಗ್ ನಡೆಸಿ 72 ರನ್ ಬಾರಿಸಿ ಅರ್ಶ್ದೀಪ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಅವರ ವಿಕೆಟ್ ಪತನಗೊಳ್ಳುತ್ತಿದಂತೆ ಐರ್ಲೆಂಡ್ ತಂಡದ ಸೋಲು ಕೂಡ ಖಚಿತಗೊಂಡಿತು. ಅವರ ಈ ಸೊಗಸಾದ ಬ್ಯಾಟಿಂಗ್ ಇನಿಂಗ್ಸ್ನಲ್ಲಿ ಬರೋಬ್ಬರಿ 4 ಸಿಕ್ಸರ್ ಮತ್ತು 5 ಸಿಕ್ಸರ್ ಸಿಡಿಯಿತು.
ಬುಮ್ರಾ ದಾಖಲೆ ಮುರಿದ ಅರ್ಶ್ದೀಪ್ ಸಿಂಗ್
ಎಡಗೈ ವೇಗಿ ಅರ್ಶ್ದೀಪ್ ಸಿಂಗ್(Arshdeep Singh) ಅವರು ಈ ಪಂದ್ಯದಲ್ಲಿ ಆಂಡ್ರ್ಯೂ ಬಾಲ್ಬಿರ್ನಿ ವಿಕೆಟ್ ಕೀಳುವ ಮೂಲಕ ಜಸ್ಪ್ರೀತ್ ಬುಮ್ರಾ ಅವರ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದರು. ಟಿ20 ಕ್ರಿಕೆಟ್ನಲ್ಲಿ ಅತಿ ಕಡಿಮೆ ಪಂದ್ಯಗಳನ್ನಾಡಿ 50 ವಿಕೆಟ್ ಪೂರ್ತಿಗೊಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರು. ಬುಮ್ರಾ ಅವರು ಈ ಮೈಲುಗಲ್ಲನ್ನು 41 ಪಂದ್ಯಗಳಲ್ಲಿ ನಿರ್ಮಿಸಿದ್ದರು. ಆದರೆ ಅರ್ಶ್ದೀಪ್ ಸಿಂಗ್ 33 ಪಂದ್ಯಗಳಲ್ಲಿ ಬುಮ್ರಾ ಸಾಧನೆಯನ್ನು ಮೀರಿ ನಿಂತರು. ಜತೆಗೆ 50 ವಿಕೆಟ್‌ಗಳನ್ನು ಪೂರ್ತಿಗೊಳಿಸಿದ 5ನೇ ಭಾರತೀಯ ಆಟಗಾರ(Team India Cricket Player) ಎನಿಸಿಕೊಂಡರು. ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಜೂಲನ್ ಗೋಸ್ವಾಮಿ ಉಳಿದ ನಾಲ್ವರು ಈ ಸಾಧನೆ ಮಾಡಿದ ಭಾರತೀಯ ಆಟಗಾರರಾಗಿದ್ದಾರೆ. ಭಾರತ ಪರ ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ ಮತ್ತು ರವಿ ಬಿಷ್ಣೋಯ್ ತಲಾ 2 ವಿಕೆಟ್ ಕಬಳಿಸಿದರು.
ಇದನ್ನೂ ಓದಿ Ireland vs India: ಗಾಯಕ್ವಾಡ್ ಅರ್ಧಶತಕ; ಐರ್ಲೆಂಡ್ಗೆ ಸವಾಲಿನ ಗುರಿ
ಅರ್ಧಶತಕ ಬಾರಿಸಿದ ಗಾಯಕ್ವಾಡ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತ ತಂಡದ ಪರ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅರ್ಧಶತಕ ಬಾರಿಸಿ ಮಿಂಚಿದರು. ಆರಂಭದಲ್ಲಿ ತಾಳ್ಮೆಯ ಬ್ಯಾಟಿಂಗ್ ನಡೆಸಿದ ಅವರು ಬಳಿಕ ಆಕ್ರಮಣ ಕಾರಿ ಆಟದ ಮೂಲಕ ಐರ್ಲೆಂಡ್ ಬೌಲರ್ಗಳ ಬೆವರಿಳಿಸಿದರು. ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 58 ರನ್ ಬಾರಿಸಿದರು. ಇದಕ್ಕೆ 43 ಎಸೆತಗಳನ್ನು ಎದುರಿಸಿದರು. ಇದು ಅವರ ದ್ವಿತೀಯ ಟಿ20 ಅರ್ಧಶತಕವಾಗಿದೆ.
ಸಂಜು ಜವಾಬ್ದಾರಿಯುತ ಆಟ
ಸರಿಯಾಗಿ ಅವಕಾಶ ಸಿಗದೆ ಪರದಾಡುತ್ತಿದ್ದ ಕೇರಳದ ಸ್ಟಂಪರ್, ಹಾರ್ಡ್ ಹಿಟ್ಟರ್ ಸಂಜು ಸ್ಯಾಮ್ಸನ್(Sanju Samson) ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಗಾಯಕ್ವಾಡ್ ಜತೆ ಉತ್ತಮ ಇನಿಂಗ್ಸ್ ಕಟ್ಟಿ ಮೂರನೇ ವಿಕೆಟ್ಗೆ 71 ರನ್ಗಳ ಅಮೂಲ್ಯ ಜತೆಯಾಟ ಕೊಡುಗೆ ನೀಡಿದರು. 26 ಎಸೆತ ಎದುರಿಸಿದ ಸಂಜು 5 ಆಕರ್ಷಕ ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 40 ರನ್ ಬಾರಿಸಿದರು. ಈ ಇನಿಂಗ್ಸ್ ಮೂಲಕ ಸೋಮವಾರ ಪ್ರಕಟಗೊಳ್ಳುತ್ತದೆ ಎನ್ನಲಾದ ಏಷ್ಯಾ ಕಪ್ ತಂಡದಲ್ಲಿ ತಾನೂ ಕೂಡ ಸ್ಪರ್ಧಿ ಎಂಬ ಸಂದೇಶವೊಂದನ್ನು ನೀಡಿದ್ದಾರೆ.
ಕಮಾಲ್ ಆಡಿದ ರಿಂಕು
ಐಪಿಎಲ್ನ ಸಿಕ್ಸರ್ ಕಿಂಗ್ ಖ್ಯಾತಿಯ ರಿಂಕು ಸಿಂಗ್(Rinku Singh) ಅವರಿಗೆ ಈ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಲಭಿಸಿತು. ಐಪಿಎಲ್ನಂತೆ ಇಲ್ಲಿಯೂ ಸಿಡಿದು ನಿಂತ ರಿಂಕು ಅಂತಿಮ ಹಂತದಲ್ಲಿ 21 ಎಸೆತಗಳಿಂದ ಭರ್ಜರಿ ಮೂರು ಸಿಕ್ಸರ್ ಮತ್ತು 2 ಬೌಂಡರಿ ಬಾರಿಸಿ 38 ರನ್ ಚಚ್ಚಿದರು. ಅವರ ಈ ಬ್ಯಾಟಿಂಗ್ ಪರಾಕ್ರಮಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ ಆಲ್ರೌಂಡರ್ ಶಿವಂ ದುಬೆ 2 ಸಿಕ್ಸರ್ ಸಹಾಯದಿಂದ ಅಜೇಯ 22 ರನ್ ಗಳಿಸಿದರು. ಐಲೆಂಡ್ ಪರ ಬ್ಯಾರಿ ಮೆಕಾರ್ಥಿ ಉತ್ತಮ ಬೌಲಿಂಗ್ ಸಂಘಟಿಸಿ ನಾಲ್ಕು ಓವರ್ ಎಸೆದು 32 ರನ್ಗೆ 2 ವಿಕೆಟ್ ಉರುಳಿಸಿದರು.
ಸತತ ವೈಫಲ್ಯ ಕಂಡ ತಿಲಕ್ ವರ್ಮಾ-ಜೈಸ್ವಾಲ್
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಒಂದು ಅರ್ಧಶತಕ ಸೇರಿ ಟೂರ್ನಿಯಲ್ಲಿ ಒಟ್ಟು 173 ರನ್ ಗಳಿಸಿ ಮಿಂಚಿದ್ದ ತಿಲಕ್ ವರ್ಮಾ(Tilak Varma) ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರುದ್ಧದ ದ್ವಿತೀಯ ಪಂದ್ಯದಲ್ಲಿಯೂ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಮೊದಲ ಪಂದ್ಯದಲ್ಲಿ ಶೂನ್ಯ ಸುತ್ತಿದ ಅವರು ದ್ವಿತೀಯ ಪಂದ್ಯದಲ್ಲಿ ಕೇವಲ ಒಂದಂಕಿಗೆ ಸೀಮಿತರಾದರು. ವಿಂಡೀಸ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಉತ್ತಮ ಬ್ಯಾಟ್ ಬೀಸಿದ್ದ ಈ ಯುವ ಆಟಗಾರ ಮೇಲೆ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಭಾರತದ ತಂಡದ ಭರವಸೆಯ ಆಟಗಾರ ಎಂಬ ನಿರೀಕ್ಷೆಯೊಂದನ್ನು ಇಟ್ಟಿತ್ತು. ಏಷ್ಯಾಕಪ್ಗೂ ಆಯ್ಕೆ ಮಾಡುವ ಯೋಜನೆಯಲ್ಲಿತ್ತು. ಆದರೆ ಅವರ ಮೇಲಿನ ನಿರೀಕ್ಷೆ ಹುಸಿಯಾದಂತೆ ಕಾಣುತ್ತಿದೆ. ಐಪಿಎಲ್ನಲ್ಲಿ ರಾಜಸ್ಥಾನ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದ ಯುವ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ತಂಡದ ನೆರವಿಗೆ ಧಾವಿಸುವಲ್ಲಿ ವಿಫಲರಾದರು. ಬಡ ಬಡನೆ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 18 ರನ್ಗೆ ಆಟ ಮುಗಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ: 20 ಓವರ್ಗಳಲ್ಲಿ 5 ವಿಕೆಟ್ಗೆ 185( ಋತುರಾಜ್ ಗಾಯಕ್ವಾಡ್ 58, ಸಂಜು ಸ್ಯಾಮ್ಸನ್ 40, ರಿಂಕು ಸಿಂಗ್ 38, ಶಿವಂ ದುಬೆ ಅಜೇಯ 22, ಬ್ಯಾರಿ ಮೆಕಾರ್ಥಿ 32ಕ್ಕೆ 2).
ಐರ್ಲೆಂಡ್: 20 ಓವರ್ಗಳಲ್ಲಿ 8 ವಿಕೆಟ್ಗೆ 152(ಆಂಡ್ರ್ಯೂ ಬಾಲ್ಬಿರ್ನಿ 72, ಮಾರ್ಕ್ ಅಡೇರ್ 23, ಪ್ರಸಿದ್ಧ್ ಕೃಷ್ಣ 29ಕ್ಕೆ 2, ಜಸ್ಪ್ರೀತ್ ಬುಮ್ರಾ 15ಕ್ಕೆ 2, ರವಿ ಬಿಷ್ಣೋಯ್ 37ಕ್ಕೆ 2). ಪಂದ್ಯಶ್ರೇಷ್ಠ: ರಿಂಕು ಸಿಂಗ್.