Site icon Vistara News

Ireland vs India: ಮಳೆಯಿಂದ ಮೂರನೇ ಪಂದ್ಯ ರದ್ದು; ಸರಣಿ ಗೆದ್ದ ಭಾರತ

The third T20I has been abandoned due to rain

ಡಬ್ಲಿನ್​: ಭಾರತ ಮತ್ತು ಐರ್ಲೆಂಡ್​ ನಡುವಣ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ(Ireland vs India, 3rd T20) ಮಳೆಯೇ ಮೇಲುಗೈ ಸಾಧಿಸಿದೆ. ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿತು.(Match abandoned) ಈಗಾಗಲೇ 2-0 ಮುನ್ನಡೆ ಸಾಧಿಸಿದ್ದ ಭಾರತ ಸರಣಿ ಗೆಲುವಿನೊಂದಿಗೆ ಸಂಭ್ರಮಿಸಿದೆ. ಅಂತಿಮ ಪಂದ್ಯದಲ್ಲಾದರೂ ಗೆದ್ದು ತವರಿನ ಅಭಿಮಾನಗಳನ್ನು ಸಮಾಧಾನ ಪಡಿಸುವ ಐರ್ಲೆಂಡ್​ ತಂಡದ ಯೋಜನೆ ಮಳೆಯಲ್ಲಿ(Match abandoned without a ball bowled) ಕೊಚ್ಚಿಹೋಯಿತು.

ಟಾಸ್​ಗೂ ಸ್ವಲ್ಪ ಮುನ್ನ ಸುರಿದ ಭಾರಿ ಮಳೆ ಯಾವುದೇ ಹಂತದಲ್ಲಿಯೂ ಬಿಡುವು ನೀಡಲೇ ಇಲ್ಲ. ಅಂತಿಮವಾಗಿ ಭಾರತೀಯ ಕಾಲಮಾನ ರಾತ್ರಿ. 10.30 ರ ವೇಳೆಗೆ ಉಭಯ ತಂಡಗಳ ನಾಯಕರು ಪಂದ್ಯವನ್ನು ರದ್ದುಗೊಳಿಸಲು ಒಪ್ಪಿಗೆ ಸೂಚಿಸಿದರು. ಪಂದ್ಯ ನೋಡಲು ಪಂದ್ಯ ಅಭಿಮಾನಿಗಳಿಗೆ ಮಳೆ ನಿರಾಸೆ ಮೂಡಿಸಿತು. 11 ತಿಂಗಳ ಬಳಿಕ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಜಸ್​ಪ್ರೀತ್​ ಬುಮ್ರಾ ಅವರಿಗೆ ಈ ಸರಣಿ ಮತ್ತೆ ಆತ್ಮವಿಶ್ವಾಸ ಮೂಡಿಸಿದೆ.

ಆತ್ಮವಿಶ್ವಾಸ ಹೆಚ್ಚಿಸಿದೆ

ತಂಡಕ್ಕೆ ಮತ್ತೆ ಮರಳಿದ ಬಗ್ಗೆ ಸಂತಸವಿದೆ. ಕಳೆದ 11 ತಿಂಗಳು ನಾನು ಪಟ್ಟ ಕಠಿಣ ಪರಿಶ್ರಮಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಏಷ್ಯಾಕಪ್​ ಸೇರಿ ಏಕದಿನ ವಿಶ್ವಕಪ್​ನಲ್ಲಿ ನಮ್ಮ ತಂಡ ಶ್ರೇಷ್ಠ ಪ್ರದರ್ಶನ ತೋರುವ ಎಲ್ಲ ವಿಶ್ವಾಸವಿದೆ. ತಂಡದಲ್ಲಿ ಅನೇಕ ಯುವ ಆಟಗಾರರು ಬೆಳೆಯುತ್ತಿರುವುದು ಭಾರತೀಯ ಕ್ರಿಕೆಟ್​ಗೆ ಒಳ್ಳೆಯ ಸಂಗತಿ. ದ್ವಿತೀಯ ಪಂದ್ಯದಲ್ಲಿ ಮಿಂಚಿದ ರಿಂಕು ಸಿಂಗ್​ ಮುಂದಿನ ಸರಣಿಯಲ್ಲಿಯೂ ತಂಡಕ್ಕೆ ಆಯ್ಕೆಯಾಗುವುದು ಖಚಿತ ಎಂದು ಬುಮ್ರಾ ಹೇಳಿದರು.

ಐರ್ಲೆಂಡ್​ ವಿರುದ್ಧ ಮೂರನೇ ಟಿ20 ಸರಣಿ ಜಯ

ಭಾರತ ತಂಡ ಐರ್ಲೆಂಡ್​ ವಿರುದ್ಧ ಮೂರನೇ ಟಿ20 ಸರಣಿ ಗೆದ್ದ ಸಾಧನೆ ಮಾಡಿತು. 2018 ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಮ್​ ಇಂಡಿಯಾ ಐರ್ಲೆಂಡ್​ನಲ್ಲಿ ಸರಣಿ ಗೆದ್ದಿತ್ತು. ಇದಾದ ಬಳಿಕ 2022 ಹಾರ್ದಿಕ್ ಪಾಂಡ್ಯ ಕಪ್ ಗೆದ್ದಿದ್ದರು. ಇದೀಗ 2023ರಲ್ಲಿ ಜಸ್​ಪ್ರೀತ್​ ಬುಮ್ರಾ ಸರಣಿ ಗೆದ್ದಿದ್ದಾರೆ. ಸ್ವಾರಸ್ಯವೆಂದರೆ ಮೂರೂ ಸರಣಿಯಲ್ಲಿಯೂ ಮೂರು ನಾಯಕರು ಮುನ್ನಡೆಸಿದ್ದು.

ಏಷ್ಯಾಕಪ್​ನಲ್ಲಿ ಸ್ಥಾನ ಪಡೆದ ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ, ಸಂಜು ಸ್ಯಾಮ್ಸನ್‌, ಜಸ್‌ಪ್ರಿತ್‌ ಬುಮ್ರಾ ಅವರು ನೇರವಾಗಿ ಬೆಂಗಳೂರಿಗೆ ಆಗಮಿಸಿ ಶುಕ್ರವಾರ ಎನ್​ಸಿಎಯಲ್ಲಿ ಅಭ್ಯಾಸ ನಿರತರಾಗಲಿದ್ದಾರೆ. ನಾಯಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ತಂಡದಲ್ಲಿ ಅವಕಾಶ ಪಡೆದಿರುವ ಎಲ್ಲ ಆಟಗಾರರು ಬುಧವಾರದಿಂದಲೇ ಅಭ್ಯಾಸ ಆರಂಭಿಸಿದ್ದಾರೆ.

ಇದನ್ನೂ ಓದಿ India vs Ireland: ಐರ್ಲೆಂಡ್‌ ವಿರುದ್ಧ ಭಾರತ ತಂಡದ ದಾಖಲೆ ಹೇಗಿದೆ? ಅಂಕಿ ಅಂಶ ಹೀಗಿದೆ

ಆಗಸ್ಟ್ 29ರ ವರೆಗೆ ಶಿಬಿರ ನಡೆಯಲಿದ್ದು ಇದು ಮುಕ್ತಾಯ ಕಂಡ ಬೆನ್ನಲ್ಲೇ ಆಟಗಾರರು ಶ್ರೀಲಂಕಾಕ್ಕೆ ಪ್ರಯಾಣಿಸಲಿದ್ದಾರೆ. ಭಾರತ ತನ್ನ ಮೊದಲ ಪಂದ್ಯವನ್ನು ಸಂಪ್ರದಾಯಿಕ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಪ್ಟಂಬರ್​ 2ರಂದು ಲಂಕಾದ ಕ್ಯಾಂಡಿಯಲ್ಲಿ ಆಡಲಿದೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ, ಶ್ರೀಲಂಕಾದಲ್ಲಿ ನಡೆಯಲಿದೆ. ಒಟ್ಟು 13 ಪಂದ್ಯಗಳ ಪೈಕಿ ಪಾಕಿಸ್ತಾನದಲ್ಲಿ 4 ಪಂದ್ಯಗಳು ಮತ್ತು ಶ್ರೀಲಂಕಾದಲ್ಲಿ 9 ಪಂದ್ಯಗಳು ನಡೆಯಲಿದೆ.

ಏಷ್ಯಾಕಪ್​ಗೆ ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್​ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ, ಸಂಜು ಸ್ಯಾಮ್ಸನ್‌ (ಮೀಸಲು ಆಟಗಾರ).  

Exit mobile version