Site icon Vistara News

Team India : ಭಾರತ ಕ್ರಿಕೆಟ್​ ತಂಡದ ಆಟಗಾರರಿಗೆ ಮಾನಸಿಕ ಒತ್ತಡದ ಸಮಸ್ಯೆ?

ishan Kishan

ಬೆಂಗಳೂರು: ಮಿತಿ ಮೀರಿದ ಕ್ರಿಕೆಟ್​ ಭಾರತ ತಂಡದ ಅಟಗಾರರ ಮೇಲೆ ಮಾನಸಿಕ ಒತ್ತಡವನ್ನು ಸೃಷ್ಟಿ ಮಾಡುತ್ತಿದೆ ಎಂಬ ಚರ್ಚೆಯ ನಡುವೆ ಅದು ಸತ್ಯವೆಂದು ಸಾಬೀತಾಗಿದೆ. ವಿಕೆಟ್​ ಕೀಪರ್ ಬ್ಯಾಟರ್​ ಇಶಾನ್ ಕಿಶನ್​ ಮಾನಸಿಕ ಒತ್ತಡಕ್ಕೆ ಸಿಲುಕಿರುವ ಸುದ್ದಿಯೊಂದು ದಕ್ಷಿಣ ಆಫ್ರಿಕಾದಿಂದ ಬಂದಿದೆ. ಅವರು ಏಕಾಏಕಿ ಟೆಸ್ಟ್​ ತಂಡವನ್ನು ತೊರೆದು ಭಾರತಕ್ಕೆ ವಾಪಸಾಗಿದ್ದಾರೆ. ಕಳೆದ 12 ತಿಂಗಳಿಂದ ಸತತವಾಗಿ ತಂಡದೊಂಡಿಗೆ ಪ್ರವಾಸ ಮಾಡುತ್ತಿರುವ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ತಂಡದ ಸಹಾಯಕ ಸಿಬ್ಬಂದಿ ಅರಿತುಕೊಂಡ ಕಾರಣ ಅವರಿಗೆ ವಿಶ್ರಾಂತಿ ಕಲ್ಪಿಸಲಾಗಿದೆ.

ಇಶಾನ್ ಕಿಶನ್ ಡಿಸೆಂಬರ್ 26 ರಿಂದ ಪ್ರಾರಂಭವಾಗುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಿಂದ ಏಕಾಏಕಿ ಹಿಂದೆ ಸರಿದಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಿಶನ್ ಅವರ ಮನವಿಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿಲ್ಲ. ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಕ್ರಿಕೆಟಿಗ ತನ್ನ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಹೇಳಿದೆ. ಆದರೆ ಇದು ಮಾನಸಿಕ ಒತ್ತಡದ ಸಮಸ್ಯೆ ಎಂದು ಹೇಳಲಾಗಿದೆ.

ಕಳೆದ 12 ತಿಂಗಳುಗಳಿಂದ ತಂಡದೊಂದಿಗೆ ನಿಯಮಿತವಾಗಿ ಪ್ರಯಾಣಿಸುತ್ತಿರುವುದರಿಂದ ಮಾನಸಿಕ ಆಯಾಸದಿಂದಾಗಿ 25 ವರ್ಷದ ಆಟಗಾರ ದಕ್ಷಿಣ ಆಫ್ರಿಕಾ ಟೆಸ್ಟ್​​ನಿಂದ ಹೊರಗುಳಿದಿದ್ದಾರೆ ಎಂದು ಈಗ ವರದಿಯಾಗಿದೆ. ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಪ್ರಕಾರ, ಕಿಶನ್ ಅವರು ಮಾನಸಿಕ ಆಯಾಸವನ್ನು ಹೊಂದಿದ್ದಾರೆ ಎಂದು ತಂಡದ ಮ್ಯಾನೇಜ್ಮೆಂಟ್​ಗೆ ಮಾಹಿತಿ ನೀಡಿದರು. ಅವರಿಗೆ ಕ್ರಿಕೆಟ್​ನಿಂದ ವಿರಾಮ ಪಡೆಯುವಂತೆ ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.

ಹೆಚ್ಚು ಪ್ರಯಾಣ, ಕಡಿಮೆ ಪಂದ್ಯ

ಕಿಶನ್ ಜನವರಿಯಿಂದ ಎಲ್ಲಾ ಮೂರು ಸ್ವರೂಪಗಳಿಗೆ ಭಾರತೀಯ ತಂಡದ ಭಾಗವಾಗಿದ್ದರು. ಅವರು ಶ್ರೀಲಂಕಾ ಟಿ 20ಐ ಮತ್ತು ಏಕದಿನ ಸರಣಿಗಳ ಭಾಗವಾಗಿದ್ದರು (ಜನವರಿ 3-15), ನಂತರ ತವರಿನಲ್ಲಿ ನ್ಯೂಜಿಲೆಂಡ್ ಸೀಮಿತ ಓವರ್​ಗಳ ಸರಣಿಯ ಭಾಗವಾಗಿದ್ದರು.

ಫೆಬ್ರವರಿ 9 ರಿಂದ ಮಾರ್ಚ್ 22 ರವರೆಗೆ ತವರಿನಲ್ಲಿ ನಡೆದ ಆಸೀಸ್​ 4 ಪಂದ್ಯಗಳ ಟೆಸ್ಟ್ ಸರಣಿಗೆ ಅವರನ್ನು ಭಾರತೀಯ ಟೆಸ್ಟ್ ತಂಡಕ್ಕೆ ಸೇರಿಸಲಾಗಿತ್ತು. ಆದರೆ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಬೆಂಚ್ ಬೆಚ್ಚಗಾಗಿಸಿದರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್​​ಗಾಗಿ ಇಂಗ್ಲೆಂಡ್​ಗೆ ತೆರಳುವ ಮೊದಲು ಯುವ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಮೇ ವರೆಗೆ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು.

ನಂತರ ಕಿಶನ್ ಜುಲೈ 12 ರಿಂದ ಆಗಸ್ಟ್ 13 ರವರೆಗೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಂಡದೊಂದಿಗೆ ಪ್ರಯಾಣಿಸಿದರು. ಅವರು ಒಂದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳನ್ನು ಆಡಿದ್ದರು. ಒಂದು ವಾರದ ನಂತರ, ಅವರನ್ನು ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್​ಗೆ (ಸೆಪ್ಟೆಂಬರ್ 22-27) ಆಯ್ಕೆಯಾದರು. ನಂತರ ಆಸ್ಟ್ರೇಲಿಯಾ ವಿರುದ್ಧ ಸ್ವದೇಶದಲ್ಲಿ ಮೂರು ಏಕದಿನ ಸರಣಿ ಮತ್ತು ವಿಶ್ವಕಪ್​ಗೆ ಆಯ್ಕೆಗೊಂಡರು.

ಇದನ್ನೂ ಓದಿ : Team India : ಭಾರತದ ಅತ್ಯಂತ ನಿಸ್ವಾರ್ಥಿ ಕ್ರಿಕೆಟಿಗನನ್ನು ಹೆಸರಿಸಿದ ಸೈಮಲ್​ ಡಲ್

ಶುಬ್ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಏಕದಿನ ವಿಶ್ವಕಪ್​ನ ಮೊದಲ ಎರಡು ಪಂದ್ಯಗಳಿಗೆ ಆರಂಭದಲ್ಲಿ ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಪಡೆದಿದ್ದರು. ನಂತರ ಅವರು ಬೆಂಚ್​ ಕಾಯುವಂತಾಯಿತು. ನಂತರ ಅವರು ಕೊನೆಯ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆಯುವ ಮೊದಲು ಭಾರತ ಮತ್ತು ಆಸ್ಟ್ರೇಲಿಯಾ ಟಿ20 ಐ ಸರಣಿಯ ಮೊದಲ ಮೂರು ಪಂದ್ಯಗಳನ್ನು ಆಡಿದರು. ದಕ್ಷಿಣ ಆಫ್ರಿಕಾ ಸರಣಿಯಲ್ಲಿ, ಟಿ 20ಐ ತಂಡದ ಭಾಗವಾಗಿದ್ದರೂ, ಜಿತೇಶ್ ಶರ್ಮಾ ಅವರನ್ನು ಆಯ್ಕೆ ಮಾಡಿದ್ದರಿಂದ ಇಶಾನ್ ಕಿಶನ್ ಅವರನ್ನು ಬದಿಗಿಡಲಾಯಿತು.

Exit mobile version