ಢಾಕಾ: ನ್ಯೂಜಿಲ್ಯಾಂಡ್(NZ vs BAN) ವಿರುದ್ಧದ ತವರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಹೀನಾಯ ಸೋಲು ಕಂಡಿದೆ. ಆದರೆ ಪಂದ್ಯದಲ್ಲಿ ಹಂಗಾಮಿ ನಾಯಕ ಲಿಟನ್ ದಾಸ್(Litton Das) ಅವರು ತೋರಿದ ಕ್ರೀಡಾಸ್ಫೂರ್ತಿಗೆ ಎದುರಾಳಿ ತಂಡದ ಆಟಗಾರರು ಮಾತ್ರವಲ್ಲದೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಿವೀಸ್ ಬ್ಯಾಟಿಂಗ್ ಸರದಿಯಲ್ಲಿ ಬಾಂಗ್ಲಾ ಬೌಲರ್ ಹಸನ್(Hasan Mahmud) 46ನೇ ಓವರ್ ಬೌಲ್ ಮಾಡುತ್ತಿದ್ದ ವೇಳೆ ನಾನ್ ಸ್ಟ್ರೈಕ್ನಲ್ಲಿದ್ದ ಇಶ್ ಸೋಧಿ(Ish Sodhi) ಬೌಲಿಂಗ್ ನಡೆಸುವ ಮುನ್ನವೇ ಕ್ರೀಸ್ ತೊರೆದು ಮಂಕಡಿಂಗ್ ರೂಪದಲ್ಲಿ ರನೌಟ್(mankading out) ಆದರು. ಆದರೆ ಅಂಪೈರ್ ಜತೆ ಮಾತನಾಡಿ ಲಿಟ್ಟನ್ ದಾಸ್ ಅವರು ಇಶ್ ಸೋಧಿಗೆ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು. ಅವರ ಈ ನಡೆಗೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಕಡಿಂಗ್ ವೇಳೆ ಸೋಧಿ 17 ರನ್ ಗಳಿಸಿದರು. ಬಳಿಕ 35 ರನ್ ಬಾರಿಸಿದರು. ಇದರಲ್ಲಿ ಮೂರು ಸೊಗಸಾದ ಸಿಕ್ಸರ್ ಕೂಡ ಸಿಡಿಯಿತು.
ಸೋಲು ಕಂಡ ಬಾಂಗ್ಲಾ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ತಂಡ 49.2 ಓವರ್ಗಳಲ್ಲಿ 254ರನ್ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಬಾಂಗ್ಲಾ ಸತತ ವಿಕೆಟ್ ಕಳೆದುಕೊಂಡು 41.1 ಓವರ್ಗಳಲ್ಲಿ ಕೇವಲ 168 ರನ್ಗೆ ಸರ್ವಪತನ ಕಂಡಿತು. ಕಿವೀಸ್ 86 ರನ್ಗಳ ಗೆಲುವು ಸಾಧಿಸಿತು. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಮೂರು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ಕಿವೀಸ್ ತಂಡ 1-0 ಮುನ್ನಡೆ ಸಾಧಿಸಿದೆ. ಅಂತಿಮ ಪಂದ್ಯ ಸೆಪ್ಟೆಂಬರ್ 26ರಂದು ನಡೆಯಲಿದೆ.
Ish Sodhi was run out at the non strikers end by Hasan Mahmud. The third umpire checked and gave OUT! But when Sodhi started walking out, skipper Litton Das and Hasan Mahmud called him back again. What a beautiful scene! Lovely spirit of the game. The hug at the end was wonderful… pic.twitter.com/GvrpjXcJwB
— SportsTattoo Media (@thesportstattoo) September 23, 2023
ಏನಿದು ಮಂಕಡಿಂಗ್ ಔಟ್
ಕ್ರಿಕೆಟ್ ಆಟದಲ್ಲಿ ಬೌಲರ್ ಒಬ್ಬ ಚೆಂಡನ್ನು ಬ್ಯಾಟರ್ನತ್ತ ಎಸೆಯುವ ಮೊದಲೇ ನಾನ್ ಸ್ಟ್ರೈಕ್ ನಲ್ಲಿರುವ ಬ್ಯಾಟರ್ ಕ್ರೀಸ್ ಬಿಟ್ಟಿದ್ದರೆ ಆಗ ಬೌಲರ್ ಆತನನ್ನು ರನೌಟ್ ಮಾಡುವ ಅವಕಾಶವನ್ನು ಕ್ರಿಕೆಟ್ ಕಾನೂನಿನ 41.46 ನಿಯಮ ನೀಡುತ್ತದೆ. ನಾನ್ ಸ್ಟ್ರೈಕ್ನಲ್ಲಿರುವ ಬ್ಯಾಟರ್ ಒಬ್ಬನನ್ನು ಆತನ ಅರಿವಿಗೆ ಬರದಂತೆ ರನೌಟ್ ಮಾಡುವ ವಿಧಾನ ಇದಾಗಿದೆ. ಈ ಅವಕಾಶ ಆ ಓವರ್ ಬೌಲಿಂಗ್ ಮಾಡುತ್ತಿರುವ ಬೌಲರ್ಗೆ ಮಾತ್ರವೇ ಇರುತ್ತದೆ. ಮತ್ತು ಇದು ಸಂಪೂರ್ಣವಾಗಿ ಬೌಲರೊಬ್ಬನ ವಿವೇಚನೆಗೆ ಬಿಟ್ಟಿರುವ ವಿಚಾರವಾಗಿರುತ್ತದೆ.
ಇದನ್ನೂ ಓದಿ Litton Das: ಬಾಂಗ್ಲಾ ತಂಡಕ್ಕೆ ಲಿಟ್ಟನ್ ದಾಸ್ ನಾಯಕ
ಮಂಕಡಿಂಗ್ ಹೆಸರು ಬರಲು ಕಾರಣವೇನು?
1947ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕ್ವೀನ್ಸ್ ಲ್ಯಾಂಡ್ ವಿರುದ್ಧದ ಪಂದ್ಯವೊಂದರಲ್ಲಿ ಭಾರತದ ಎಡಗೈ ಸ್ಪಿನ್ನರ್ ವೀನೂ ಮಂಕಡ್ ಅವರು ಬಿಲ್ ಬ್ರೌನ್ ಅವರನ್ನು ನಾನ್ ಸ್ಟ್ರೈಕ್ ಭಾಗದಲ್ಲಿ ರನೌಟ್ ಮಾಡಿದ್ದರು. ಆ ಬಳಿಕ ಕ್ರಿಕೆಟ್ ನ ಈ ವಿಚಿತ್ರ ನಿಯಮಕ್ಕೆ ‘ಮಂಕಡ್’ ನಿಯಮ ಎಂದೇ ಪ್ರಸಿದ್ಧಿ ಪಡೆಯಿತು.