ಪಲ್ಲೆಕೆಲೆ: ಇದೇ ಮೊದಲ ಬಾರಿ ಪಾಕಿಸ್ತಾನ(IND vs PAK) ವಿರುದ್ಧ ಕಣಕಿಳಿದ ಇಶಾನ್ ಕಿಶನ್(ishan kishan) ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಸೊಗಸಾದ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಜತೆಗೆ ವಿಶ್ವಕಪ್ ವಿಜೇತ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ನ(Asia cup 2023) ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಎಡಗೈ ಆಟಗಾರ ಇಶಾನ್ ಕಿಶನ್ ತಂಡಕ್ಕೆ ಆಸರೆಯಾಗಿ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು.
ಇಶಾನ್ ಕಿಶನ್ ಅವರು ಅರ್ಧಶತಕ ಬಾರಿಸುತ್ತಿದ್ದಂತೆ ಏಕದಿನ ಕ್ರಿಕೆಟ್ನಲ್ಲಿ ಸತತ 4 ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ವಿಕೆಟ್ ಕೀಪರ್ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನು ಬರೆದರು. ಇದಕ್ಕೂ ಮುನ್ನ ಸತತ 4 ಅರ್ಧಶತಕ ಬಾರಿಸಿದ ದಾಖಲೆ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿತ್ತು. ಧೋನಿ ಅವರು 2011 ರಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಇಶಾನ್ ಅವರು ಕೇವಲ 25 ವಯಸ್ಸಿನಲ್ಲಿ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಚ್ಚರಿ ಎಂದರೆ ಇಶಾನ್ ಕಿಶನ್ ಅವರ ತವರೂರು ಜಾರ್ಖಂಡ್. ವಿಶ್ವ ಕ್ರಿಕೆಟ್ ಕಂಡ ಯಶಸ್ವಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯ ಊರು. ಧೋನಿಯಂತೆ ಅವರು ಕೂಡ ವಿಕೆಟ್ ಕೀಪರ್ ಆಗಿದ್ದಾರೆ.
ಇದಕ್ಕೂ ಮುನ್ನ ಇಶಾನ್ ಅವರು ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ರಮವಾಗಿ 52, 55 ಹಾಗೂ 77 ರನ್ ಬಾರಿಸಿದ್ದರು. ಪಾಕ್ ವಿರುದ್ಧದ ಶನಿವಾರದ ಏಷ್ಯಾಕಪ್ ಪಂದ್ಯದಲ್ಲಿ ಇಶಾನ್ 81 ಎಸೆತ ಎದುರಿಸಿ 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 82 ರನ್ ಬಾರಿಸಿದರು.
ಇದನ್ನೂ ಓದಿ Virat Kohli: ಕ್ಲೀನ್ ಬೌಲ್ಡ್ ಆದ ಕೊಹ್ಲಿ; ಹಳೆ ಚಾಳಿ ಬಿಡದ ಪಾಕ್ ಮಾಜಿ ಆಟಗಾರ
ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿದ್ದ ಇಶಾನ್ ಕಿಶನ್ ದ್ವಿಶತಕ ಬಾರಿಸಿ ದಾಖಲೆ ಬರೆದಿದ್ದರು. ಆ ಪಂದ್ಯದಲ್ಲಿ ಇಶಾನ್ 131 ಎಸೆತದಿಂದ 10 ಸಿಕ್ಸರ್ ಮತ್ತು 24 ಬೌಂಡರಿ ನೆರವಿನಿಂದ 210 ಬಾರಿಸಿದ್ದರು. ಈ ಮೂಲಕ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವೀರೆಂದ್ರ ಸೆಹವಾಗ್, ಮಾರ್ಟಿನ್ ಗಪ್ಟಿಲ್ ಮತ್ತು ಗೇಲ್ ಅವರ ದಾಖಲೆಯ ಸಾಲಿಗೆ ಸೇರಿದದ್ದರು. ಅಲ್ಲದೆ ದ್ವಿಶತಕ ಬಾರಿಸಿದ್ದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದರು.