ರಾಂಚಿ: ರಣಜಿ ಆಡಲು ನಿರಾಕರಿಸಿದ್ದ ಕಾರಣದಿಂದಾಗಿ ಟೀಮ್ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿರುವ ವಿಕೆಟ್ ಕೀಪರ್ ಕಮ್ ಬ್ಯಾಟರ್ ಇಶಾನ್ ಕಿಶನ್(Ishan Kishan) ಮತ್ತೆ ದೇಶೀಯ ಕ್ರಿಕೆಟ್ ಆಡಲು ಮುಂದಾಗಿದ್ದಾರೆ. ಆಗಸ್ಟ್ 15 ರಿಂದ ಆರಂಭವಾಗಲಿರುವ ಬುಚ್ಚಿ ಬಾಬು(Buchi Babu) ಕ್ರಿಕೆಟ್ ಟೂರ್ನಿಯಲ್ಲಿ ಜಾರ್ಖಂಡ್ ಪರ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಮತ್ತೆ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡುವ ಪ್ರಯತ್ನ ಮಾಡಲಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಮೊತವರಪು ವೆಂಕಟ ಮಹಿಪತಿ ನಾಯ್ಡು ಅವರ ಸ್ಮರಣಾರ್ಥವಾಗಿ ನಡೆಸುವ ಕ್ರಿಕೆಟ್ ಟೂರ್ನಿ ಇದಾಗಿದೆ. ಭಾರತ ಪರ ಆಡುವ ವೇಳೆ ಇವರು ಬುಚ್ಚಿ ಬಾಬು ನಾಯ್ಡು ಎಂದೇ ಖ್ಯಾತಿ ಗಳಿಸಿದ್ದರು. ಹೀಗಾಗಿ ಈ ಟೂರ್ನಿಗೆ ಇದೇ ಹೆಸರನ್ನು ಇರಿಸಲಾಗಿದೆ. ಒಟ್ಟು 12 ತಂಡಗಳು ಈ ಟೂರ್ನಿಯಲ್ಲಿ ಆಡಲಿವೆ. ರಣಜಿ ಮಾದರಿಯಂತೆ 4 ದಿನಗಳ ಕಾಲ ನಡೆಯುವ ಟೂರ್ನಿ ಇದಾಗಿದೆ. 12 ತಂಡಗಳನ್ನು ತಲಾ ಮೂರರಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.
ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿಯೂ ಇಶಾನ್ ಆಡುವ ಸಾಧ್ಯತೆ ಇದೆ. ಈ ಟೂರ್ನಿ ಸೆಪ್ಟೆಂಬರ್ 5ರಿಂದ ಆರಂಭವಾಗಲಿದೆ. ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿರುವ ಕಾರಣ ಭಾರತ ತಂಡದ ಅನೇಕ ಕ್ರಿಕೆಟಿಗರು ಕೂಡ ಈ ಬಾರಿ ದುಲೀಪ್ ಟ್ರೋಫಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಟೆಸ್ಟ್ ತಂಡದ ಸಂಭಾವ್ಯ ಆಟಗಾರರಾದ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ರಿಷಭ್ ಪಂತ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮೊದಲಾದವರೆಲ್ಲ ದುಲೀಪ್ ಟ್ರೋಫಿಯ ಕೆಲವು ಪಂದ್ಯಗಳಲ್ಲಿ ಆಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ Ishan Kishan: ಟೀಮ್ ಇಂಡಿಯಾದಲ್ಲಿ ಇಶಾನ್ ಕಿಶನ್ಗೆ ಬಾಗಿಲು ಬಂದ್?
ಕಳೆದ ವರ್ಷ ನವೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಸಂದರ್ಭದಲ್ಲಿ ಕಿಶನ್ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು. ನಂತರದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದರೂ ಕೂಡ ಅಂತಿಮ ಹಂತದಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದರು. ಸ್ವಲ್ಪ ವಿರಾಮವನ್ನು ತೆಗೆದುಕೊಂಡ ಇಶಾನ್ಗೆ ಅಂದಿನ ಕೋಚ್ ದ್ರಾವಿಡ್ ಮತ್ತು ಆಯ್ಕೆ ಸಮಿತಿ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡುವಂತೆ ಸೂಚನೆ ನೀಡಿತ್ತು. ಆದರೆ ಇದನ್ನು ಇಶಾನ್ ಕಡೆಗಣಿಸಿದ್ದರು. ಈ ಕಾರಣದಿಂದ ಬಿಸಿಸಿಐ ಅವರನ್ನು ಕೇಂದ್ರೀಯ ಗುತ್ತಿಗೆಯಿಂದಲೂ ಕೈಬಿಟ್ಟಿತ್ತು.
ಮಾನಸಿಕ ಒತ್ತಡದದಿಂದ ಬಳಲುತ್ತಿರುವುದಾಗಿ ಸುಳ್ಳು ಕಾರಣ ನೀಡಿ ಮುಕೇಶ್ ಅಂಬಾನಿ(Mukesh Ambani) ಪುತ್ರ ಅನಂತ್ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹಪೂರ್ವ(Anant Ambani wedding) ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ದುಬೈನಲ್ಲಿಯೂ ಪಾರ್ಟಿ ಮಾಡಿ ಸಿಕ್ಕಿಬಿದ್ದಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು.
ತಂಡಕ್ಕೆ ಆಯ್ಕೆ ಮಾಡದಿರುವುದರ ಕುರಿತು ಕೆಲ ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದ ಇಶಾನ್, “ನಾನು ಬ್ರೇಕ್ ಪಡೆದಿದ್ದೆ, ನನ್ನ ಪ್ರಕಾರ ಇದು ಸಾಮಾನ್ಯ. ತಂಡಕ್ಕೆ ಕಮ್ ಬ್ಯಾಕ್ ಮಾಡಬೇಕಾದರೆ ದೇಶೀಯ ಕ್ರಿಕೆಟ್ನಲ್ಲಿ ಪ್ರದರ್ಶನ ನೀಡಬೇಕು ಎಂಬ ನಿಯಮವಿದೆ ಎನ್ನುವುದು ನನಗೆ ತಿಳಿದಿದೆ. ಆದರೆ, ಅಂದು ನಾನು ಆಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಹಿಗಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದೆ. ಉತ್ತಮ ಫಾರ್ಮ್ನಲ್ಲಿರುವಾಗ ಅಂತಾರಾಷ್ಟ್ರೀಯ ಕ್ರಿಕೆಟ್ ಬಿಟ್ಟು ದೇಶೀಯ ಕ್ರಿಕೆಟ್ನಲ್ಲಿ ಆಡಬೇಕು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಇಂಡಿಯನ್ ಎಕ್ಸ್ ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.