Site icon Vistara News

Ishan Kishan : ಬಿಸಿಸಿಐ ಗುತ್ತಿಗೆ ರದ್ದಾಗುವ ಆತಂಕದಲ್ಲಿ ಇಶಾನ್​​, ಶ್ರೇಯಸ್​ ಅಯ್ಯರ್​; ಯಾಕೆ ಗೊತ್ತಾ?

Shreyas Iyer

ಬೆಂಗಳೂರು: ಟೀಮ್ ಮ್ಯಾನೇಜ್ಮೆಂಟ್ ಮತ್ತು ಬಿಸಿಸಿಐನ ಸೂಚನೆಗಳ ಹೊರತಾಗಿಯೂ ಇಶಾನ್ ಕಿಶನ್ (Ishan Kishan) ಮತ್ತು ಶ್ರೇಯಸ್ ಅಯ್ಯರ್ 2024 ರ ರಣಜಿ ಟ್ರೋಫಿಯಲ್ಲಿ ಆಡದಿರಲು ನಿರ್ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದು ಅವರ ವಿರುದ್ಧ ಕ್ರಮಕ್ಕೆ ಕಾರಣವಾಗಲಿದೆ ಎಂದು ಹೇಳಲಾಗಿದೆ. ಬಿಸಿಸಿಐ ಹೊಸ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದರೆ ಕಿಶನ್ ಮತ್ತು ಅಯ್ಯರ್ ಇಬ್ಬರೂ ತಮ್ಮ ಕೇಂದ್ರ ಒಪ್ಪಂದಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.

ಡಿಸೆಂಬರ್ ಮತ್ತು ಜನವರಿಯಲ್ಲಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದಿರುಗಿದ ನಂತರ ಕಿಶನ್ “ವೈಯಕ್ತಿಕ ಕಾರಣಗಳಿಂದಾಗಿ” ವಿರಾಮದಲ್ಲಿದ್ದಾರೆ. ಈ ವೇಳೆ ರಣಜಿಯಲ್ಲಿ ಪಾಲ್ಗೊಳ್ಳುವಂತೆ ಅವರಿಗೆ ಸೂಚನೆ ನೀಡಲಾಗಿದೆ. ಬರೋಡಾದಲ್ಲಿ ತಮ್ಮ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ಪರ ಆಡಿಲ್ಲ. ಹೀಗಾಗಿ ಅವರು ಗುತ್ತಿಗೆ ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಅಸ್ಸಾಂ ವಿರುದ್ಧದ ಮುಂಬೈನ ಕೊನೆಯ ರಣಜಿ ಟ್ರೋಫಿ ಲೀಗ್ ಪಂದ್ಯದಿಂದ ಅಯ್ಯರ್ ಗೈರು ಹಾಜರಾಗಿದ್ದರು. ಶುಕ್ರವಾರ ಬರೋಡಾ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇದು ಬಿಸಿಸಿಐ ಕೋಪಕ್ಕೆ ಕಾರಣವಾಗಿದೆ.

ಬೆನ್ನುನೋವಿನಿಂದಾಗಿ ಆಯ್ಕೆಗೆ ಲಭ್ಯವಿಲ್ಲ ಎಂದು ಮಧ್ಯಮ ಕ್ರಮಾಂಕದ ಬ್ಯಾಟರ್​ ಮುಂಬೈ ಕ್ರಿಕೆಟ್ ಅಸೋಸಿಯೇಷನ್​​​ಗೆ ತಿಳಿಸಿದ್ದರು, ಆದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಆರೋಗ್ಯ ವಿಭಾಗದ ಮುಖ್ಯಸ್ಥ ನಿತಿನ್ ಪಟೇಲ್ ಬಿಸಿಸಿಐ ಮತ್ತು ರಾಷ್ಟ್ರೀಯ ಆಯ್ಕೆದಾರರಿಗೆ ಇಮೇಲ್​​ ಮೂಲಕ ಅಯ್ಯರ್ ಫಿಟ್ ಆಗಿದ್ದಾರೆ ಎಂದು ಹೇಳಿದ್ದಾರೆ.

ಸುಳ್ಳು ಹೇಳಿದವರಿಗೆ ಶಿಕ್ಷೆ

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆದಾರರು 2023-24ರ ಋತುವಿಗೆ ಕೇಂದ್ರ ಗುತ್ತಿಗೆ ಆಟಗಾರರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ. ಬಿಸಿಸಿಐ ಆದೇಶದ ಹೊರತಾಗಿಯೂ ಕಿಶನ್ ಮತ್ತು ಅಯ್ಯರ್ ಇಬ್ಬರೂ ದೇಶೀಯ ಕ್ರಿಕೆಟ್ ಆಡದ ಕಾರಣ ಅವರನ್ನು ಆ ಪಟ್ಟಿಯಿಂದ ಹೊರಗಿಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಏತನ್ಮಧ್ಯೆ, ಶ್ರೇಯಸ್ ಅಯ್ಯರ್ ಅವರು ಬೆನ್ನುನೋವಿನ ಬಗ್ಗೆ ದೂರು ನೀಡಿದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಕೊನೆಯ ಮೂರು ಟೆಸ್ಟ್​ಗಳಿಗೆ ಭಾರತ ತಂಡದಿಂದ ಹೊರಗುಳಿದಿದ್ದಾರೆ ಎಂದು ಅವರ ಆಪ್ತ ಮೂಲವೊಂದು ಬಹಿರಂಗಪಡಿಸಿದೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಂತರ ಪಟೇಲ್ ಬಿಸಿಸಿಐಗೆ ಇಮೇಲ್ ಬರೆದಿದ್ದರು. ಅಂದಿನಿಂದ, ಬೆನ್ನುನೋವು ಅಯ್ಯರ್ ಅವರನ್ನು ಕಾಡುತ್ತಿದೆ. ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಅಯ್ಯರ್ ಭಾರತದ ಅತ್ಯುತ್ತಮ ಪ್ರದರ್ಶನ ನೀಡಿದ ಬ್ಯಾಟರ್​ಗಳಲ್ಲಿ ಒಬ್ಬರಾಗಿದ್ದರು. ರಣಜಿ ಪಂದ್ಯವನ್ನು ತಪ್ಪಿಸಿಕೊಂಡ ಮಾತ್ರಕ್ಕೆ ಅವರು ಒಪ್ಪಂದವನ್ನು ಕಳೆದುಕೊಳ್ಳುವುದಿಲ್ಲ ಎಂಬ ಅಭಿಪ್ರಾಯವೂ ಇದೆ.

ರಣಜಿ ಟ್ರೋಫಿಯಲ್ಲಿ ಭಾಗವಹಿಸದಿರುವುದನ್ನು ಸಹಿಸುವುದಿಲ್ಲ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರಿಗೆ ಈ ನಿಟ್ಟಿನಲ್ಲಿ ಮುಕ್ತ ಅವಕಾಶ ನೀಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಳೆದ ವಾರ ಕೇಂದ್ರ ಗುತ್ತಿಗೆ ಮತ್ತು ಭಾರತ ಎ ಕ್ರಿಕೆಟಿಗರಿಗೆ ಕಠಿಣ ಎಚ್ಚರಿಕೆ ನೀಡಿದ್ದರು.

Exit mobile version