Site icon Vistara News

ISSF Junior World Cup: ಪದಕ ಬೇಟೆಯಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಭಾರತ

ISSF Junior World Cup 2023

ಜೂಲ್‌, (ಜರ್ಮನಿ): ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ(ISSF Junior World Cup) ಭಾರತದ ಶೂಟರ್‌ಗಳು ಅಮೋಘ ಪ್ರದರ್ಶನ ತೋರುವ ಮೂಲಕ ಮತ್ತೆರಡು ಚಿನ್ನದ ಪದಕ್ಕೆ ಗುರಿ ಇರಿಸಿದ್ದಾರೆ. ಬುಧವಾರ ನಡೆದ ಪುರುಷರ 25 ಮೀ. ಪಿಸ್ತೂಲ್‌ ಶೂಟಿಂಗ್‌ನಲ್ಲಿ ಅಮನ್‌ಪ್ರೀತ್‌ ಸಿಂಗ್‌ 586 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದರೆ, ಮಹಿಳೆಯರ 25 ಮೀ. ತಂಡ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿತು. ಈ ಮೂಲಕ ಭಾರತ ತಂಡವು ಐದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಚಾಂಪಿಯನ್‌ಷಿಪ್‌ನಲ್ಲಿ ಇನ್ನು ಎರಡು ದಿನಗಳ ಸ್ಪರ್ಧೆಗಳು ಬಾಕಿಯಿವೆ.

ಮಹಿಳೆಯರ 25 ಮೀ. ತಂಡ ವಿಭಾಗದಲ್ಲಿ ಮೇಘನಾ ಸದುಲಾ, ಪಾಯಲ್‌ ಖತ್ರಿ ಮತ್ತು ಸಿಮ್ರನ್‌ಪ್ರೀತ್‌ ಕೌರ್‌ ಬ್ರಾರ್‌ ಸೇರಿಕೊಂಡು ಒಟ್ಟು 1,179 ಅಂಕಗಳನ್ನು ಕಲೆಹಾಕಿ ಮೊದಲ ಸ್ಥಾನ ಪಡೆಯಿತು. ಆದರೆ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಮೇಘನಾ, ಪಾಯಲ್‌ ಮತ್ತು ದಿವ್ಯಾಂಶಿ ಅವರು ಫೈನಲ್‌ ಸುತ್ತು ಪ್ರವೇಶಿಸಿದರೂ ಪದಕ ಗೆಲ್ಲುವಲ್ಲಿ ವಿಫಲರಾದರು. 22 ಪಾಯಿಂಟ್ಸ್‌ಗಳೊಂದಿಗೆ ಮೇಘನಾ 4ನೇ ಸ್ಥಾನ ಪಡೆದರು. ಪಾಯಲ್‌ (18) ಮತ್ತು ದಿವ್ಯಾಂಶಿ (11) ಅವರು ಕ್ರಮವಾಗಿ ಐದು ಹಾಗೂ ಏಳನೇ ಸ್ಥಾನ ಪಡೆದರು.

ಇದನ್ನೂ ಓದಿ ISSF World Cup: ಶೂಟಿಂಗ್​ನಲ್ಲಿ ವಿಶ್ವ ದಾಖಲೆ ಬರೆದ ಭಾರತದ ರಿದಮ್‌ ಸಂಗ್ವಾನ್‌

ಪುರುಷರ 50 ಮೀ. ರೈಫಲ್‌ ತ್ರಿ ಪೊಸಿಷನ್ಸ್‌ನಲ್ಲಿ ಅವಿನಾಶ್‌ ಯಾದವ್‌ 28ನೇ ಸ್ಥಾನ, ಪರೀಕ್ಷಿತ್‌ ಸಿಂಗ್ 31 ಮತ್ತು ರಮಣ್ಯ ತೋಮರ್‌ 40ನೇ ಸ್ಥಾನ ಪಡೆದರು. ಸೋಮವಾರ ನಡೆದಿದ್ದ ಪುರುಷರ 10 ಮೀ. ಏರ್​ ರೈಫಲ್​ ಸ್ಪರ್ಧೆಯಲ್ಲಿ ಧನುಷ್‌ ಶ್ರೀಕಾಂತ್‌ ಅವರು ಚಿನ್ನ ಜಯಿಸಿದ್ದರು.

Exit mobile version