ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ (ICC World Cup 2023) ಫೈನಲ್ನಲ್ಲಿ ಸೋಲಿನ ಪರಿಣಾಮವನ್ನು ಭಾರತೀಯ ಕ್ರಿಕೆಟಿಗರು ಇನ್ನೂ ಅನುಭವಿಸುತ್ತಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ನಲ್ಲಿ ಫಾಫ್ ಡು ಪ್ಲೆಸಿಸ್ ಅವರು ಆರ್ಸಿಬಿ ತಂಡದ ನಾಯಕರಾಗಿದ್ದಾರೆ. ಹೀಗಾಗಿ ಭಾರತೀಯ ಕ್ರಿಕೆಟ್ ಜತೆ ಅವರು ವಿಶೇಷ ಸಂಬಂಧ ಹೊಂದಿದ್ದಾರೆ. ಅವರೀಗ ಭಾರತ ತಂಡದ ಸೋಲಿನ ಬಗ್ಗೆ ವಿಶ್ಲೇಷಣೆ ಮಾಡಿದ್ದು ಈ ನೋವು ಮರೆಯಲು ಸಾಕಷ್ಟು ಸಮಯ ಬೇಕು ಎಂದು ಹೇಳಿದ್ದಾರೆ.
ಏಕದಿನ ವಿಶ್ವಕಪ್ 2023 ರ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾದ 6 ವಿಕೆಟ್ಗಳನ್ನು ಸೋಲನ್ನು ಆರ್ಸಿಬಿ ನಾಯಕ ಲವ್ ಬ್ರೇಕ್ಅಪ್ಗೆ ಹೋಲಿಸಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಸತತ ಹತ್ತು ಪಂದ್ಯಗಳನ್ನು ಗೆದ್ದಿತ್ತು. ಆದರೆ 12 ವರ್ಷಗಳ ನಂತರ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಅವಕಾಶವನ್ನು ಕಳೆದುಕೊಂಡಿತು. ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಸೋಲನ್ನು ಅನುಭವಿಸಿತು.
ಸೋಲಿನ ನಂತರ, ಆಸ್ಟ್ರೇಲಿಯಾ ವಿರುದ್ಧದ ಟಿ 20 ಐ ಸರಣಿಗೆ ಅನೇಕ ಆಟಗಾರರಿಗೆ ವಿಶ್ರಾಂತಿ ನೀಡಲಾಯಿತು. ಆದರೆ ಅವರು ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವರೆಲ್ಲರೂ ಮತ್ತೆ ಆಡಲಿದ್ದಾರೆ. ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಕಾರಣ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ 20 ಐ ಸರಣಿಯಲ್ಲಿ ಭಾರತ ತಂಡವು ಕೆಲವು ಸವಾಲುಗಳನ್ನು ಎದುರಿಸಬಹುದು ಎಂದು ಡು ಪ್ಲೆಸಿಸ್ ಅಭಿಪ್ರಾಯಪಟ್ಟಿದ್ದಾರೆ.
ಲವ್ ಬ್ರೇಕ್ಅಪ್ ರೀತಿ, ನೋವು ಬೇಗ ಹೋಗುವುದಿಲ್ಲ
ಭಾರತ ತಂಡಕ್ಕೆ ಮುಂದಿನ ಸರಣಿ ದೊಡ್ಡ ಸವಾಲಾಗಿದೆ. 2015 ರ ವಿಶ್ವಕಪ್ನಲ್ಲಿ ನಾವು ಏರಿಳಿತಗಳನ್ನು ಎದುರಿಸಿದಾಗ ಕ್ರಿಕೆಟಿಗನಾಗಿ ನಾನು ರೀತಿಯ ಅನುಭವವನ್ನು ಎದುರಿಸಿದ್ದೆ. ಭಾರತ ತಂಡ ಪ್ರೇಯಸಿ ಬಿಟ್ಟು ಹೋದಷ್ಟು ದೊಡ್ಡ ನೋವು ಎದುರಿಸುವಂತಾಗಿದೆ. ಇದು ಗೆಳತಿಯೊಂದಿಗೆ ಬ್ರೇಕಪ್ ಆಗುವಂತಿದೆ. ಅದನ್ನು ನೇರವಾಗಿ ನಿವಾರಿಸಲು ಸಾಧ್ಯವಿಲ್ಲ, ಬೇರೆ ವಿಜಯಗಳ ಮೂಲಕ ಸಮಾಧಾನ ಹೇಳಿಕೊಳ್ಳಬಹದು ಎಂದು ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.
ಇದನ್ನೂ ಓದಿ : Team India : ಭವಿಷ್ಯದ ಪಾಂಡ್ಯ ಪತ್ತೆ; ಬ್ಯಾಟಿಂಗ್, ಬೌಲಿಂಗ್ನಲ್ಲಿ ಅಬ್ಬರಿಸಿದ ಯುವ ಆಟಗಾರ
ಈ ವಿಶ್ವಕಪ್ನಲ್ಲಿ ಭಾರತ ತಂಡ ಆಡಿದ ರೀತಿ ತುಂಬಾ ಅದ್ಭುತವಾಗಿತ್ತು. ಅವರು ತಮ್ಮ ಮೈದಾನ ತುಂಬೆಲ್ಲ ನಂಬಲು ಅಸಾಧ್ಯವಾದ ರೀತಿಯಲ್ಲಿ ಆಡಿದರು. ಹೀಗಾಗಿ ಫೈನಲ್ ಸೋಲಿನಿಂದ ಅವರಿಗೆ ಆಘಾತವವಾಗಿದೆ. ಅವರು ಸಮಸ್ಯೆ ಎದುರಿಸುತ್ತಾರೆ ಮತ್ತು ಎದೆಗುಂದಿದ್ದಾರೆ ಎಂದು ಅವರು ಹೇಳಿದ್ದಾರೆ. ಭಾರತ ತಂಡ ವಿಶ್ವಕಪ್ ಗೆಲ್ಲಬೇಕಾಗಿತ್ತು. ಅವರಿಗೆ ಹೆಚ್ಚಿನ ಅವಕಾಶಗಳು ಇದ್ದವು. ಆದರೆ ಅದು ಆಗಲಿಲ್ಲ. ಮುಂದೆ ಗೆಲ್ಲಬಹುದು. ಅದಕ್ಕಾಗಿ ಕಾಯಬೇಕು ಎಂದು ಪ್ಲೆಸಿಸ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಸರಣಿಯು ರೋಚಕವಾಗಿರಲಿದೆ. ನಿಸ್ಸಂಶಯವಾಗಿ ದಕ್ಷಿಣ ಆಫ್ರಿಕಾದಲ್ಲಿ ತುಂಬಾ ಗುಣಮಟ್ಟದ ಆಟಗಾರರು ಇದ್ದಾರೆ . ಕೆಲವು ಅನುಭವಿ ಆಟಗಾರರು ಯುವ ಆಟಗಾರರನ್ನು ಉತ್ತಮವಾಗಿ ನಿರ್ವಹಿಸಲು ಸಜ್ಜಾಗಿದ್ದಾರೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಡು ಪ್ಲೆಸಿಸ್ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವ ಸೂಚನೆ ನೀಡಿದ್ದರು. ಅವರು 2024 ರ ಟಿ 20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಆಡುವ ಸೂಚನೆ ನೀಡಿದ್ದಾರೆ.