Site icon Vistara News

IND vs PAK : ಭಾರತದ ಕ್ರಿಕೆಟಿಗರು ಪಾಕಿಸ್ತಾನದವರ ಕೈ ಕುಲುಕುವುದು ಸರಿಯಲ್ಲ; ಗಂಭೀರ್​ ಹೀಗೆ ಹೇಳಿದ್ಯಾಕೆ?

Gautham Gambhir

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ನಡುವೆ ಉಭಯ ಕುಶಲೋಪರಿಯಲ್ಲಿ ತೊಡಗಿದ್ದ ಇತ್ತಂಡಗಳ ಆಟಗಾರರ ಬಗ್ಗೆ ಮಾಜಿ ಎಡಗೈ ಬ್ಯಾಟರ್​ ಗೌತಮ್​ ಗಂಭೀರ್​ ಬೇಸರಗೊಂಡಿದ್ದಾರೆ. ಇವೆಲ್ಲರೂ ಆಧುನಿಕ ಫ್ರಾಂಚೈಸಿ ಕ್ರಿಕೆಟ್​ನ ಪರಿಣಾಮ ಎಂದು ನೇರ ಹೇಳಿಕೆ ನೀಡಿದ್ದಾರೆ. ಕ್ಯಾಂಡಿಯ ಪಲ್ಲೆಕೆಲೆಯಲ್ಲಿ ನಡೆದಿದ್ದ ಪಂದ್ಯ ಮಳೆಯಿಂದ ಕೊಚ್ಚಿ ಹೋಗಿತ್ತು. ಹೀಗಾಗಿ ಎರಡೂ ತಂಡಗಳು ಅಂಕಗಳನ್ನು ಹಂಚಿಕೊಂಡಿದ್ದವು. ಏತನ್ಮಧ್ಯೆ, ವಿರಾಟ್​ ಕೊಹ್ಲಿ ಸೇರಿದಂತೆ ಭಾರತ ತಂಡದ ಆಟಗಾರರು ಹಾಗೂ ಎದುರಾಳಿ ಪಾಕಿಸ್ತಾನ ತಂಡದ ಆಟಗಾರರು ಪರಸ್ಪರ ಕೈ ಕುಲುಕಿದ್ದರು. ಅಲ್ಲದೆ ನಗುತ್ತಾ ಮಾತನಾಡಿದ್ದರು. ಈ ಕುರಿತು ಗಂಭೀರ್​ ತಮ್ಮ ನೇರ ಹೇಳಿಕೆ ನೀಡಿದ್ದಾರೆ.

ತಮ್ಮ ಆಟದ ಅವಧಿಯಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರರು ಎಂದ ತಕ್ಷಣ ನಖಶಿಖಾಂತ ಉರಿದು ಬೀಳುತ್ತಿದ್ದ ಗಂಭೀರ್​ಗೆ, ಆಧುನಿಕ ಕ್ರಿಕೆಟ್ ಆಟಗಾರರ ವರ್ತನೆ ವಿಲಕ್ಷಣವಾಗಿ ಕಂಡಿದೆ. ಹೀಗಾಗಿ ನೇರ ಪ್ರಸಾರದ ಕಾಮೆಂಟರಿಯಲ್ಲಿದ್ದ ಅವರು ಇದೊಂದು ಗಿಮಿಕ್ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಪಂದ್ಯದ ಸಮಯದಲ್ಲಿ ಆಟಗಾರರು ತಮ್ಮ ಆಕ್ರಮಣಕಾರಿಯಾಗಿರಬೇಕು ಬಯಸುತ್ತಿದ್ದ ಗಂಭೀರ್​​ಗೆ ಇದು ಸಹನೀಯ ಎನಿಸಲಿಲ್ಲ.

“ನೀವು ನಿಮ್ಮ ರಾಷ್ಟ್ರೀಯ ತಂಡಕ್ಕಾಗಿ ಮೈದಾನದಲ್ಲಿ ಆಡುವಾಗ, ನೀವು ಸ್ನೇಹವನ್ನು ಬೌಂಡರಿ ಹಗ್ಗಗಳ ಹೊರಗೆ ಬಿಡಬೇಕು. ಕ್ರೀಡಾಂಗಣದಲ್ಲಿ ಆಟವೇ ಮುಖ್ಯವಾಗಿರುತ್ತದೆ. ಗೆಳೆತನ ಹೊರಗೆ ಮಾತ್ರ ಇರಬೇಕು. ಆಟದ ಮುಖವನ್ನು ಹೊಂದಿರುವುದು ಮುಖ್ಯ. ಪಂದ್ಯದ ಸಮಯದಲ್ಲಿ ಸ್ನೇಹವು ಹೊರಗೆ ಉಳಿಯಬಹುದು). ಎರಡೂ ತಂಡಗಳ ಆಟಗಾರರ ದೃಷ್ಟಿಯಲ್ಲಿ ಆಕ್ರಮಣಶೀಲತೆ ಇರಬೇಕು. ಆ ಆರೇಳು ಗಂಟೆಗಳ ಕ್ರಿಕೆಟ್ ನಂತರ ನೀವು ಬಯಸಿದಷ್ಟು ಸ್ನೇಹಪರರಾಗಬಹುದು, “ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್​​ನಲ್ಲಿ ಕಾಮೆಂಟರಿ ನೀಡುವಾಗ ಹೇಳಿದ್ದಾರೆ.

ಆಟದ ಗಂಟೆಗಳು ಬಹಳ ಮುಖ್ಯ, ಏಕೆಂದರೆ ನೀವು ನಿಮ್ಮನ್ನು ಪ್ರತಿನಿಧಿಸುತ್ತಿಲ್ಲ, ನೀವು ಒಂದು ಶತಕೋಟಿ ಅಭಿಮಾನಿಗಳು ಹೊಂದಿರುವ ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದೀರಿ. ಇತ್ತೀಚಿನ ದಿನಗಳಲ್ಲಿ ಎದುರಾಳಿ ತಂಡಗಳ ಆಟಗಾರರು ಪಂದ್ಯದ ಸಮಯದಲ್ಲಿ ಪರಸ್ಪರ ಬೆನ್ನನ್ನು ತಟ್ಟಿಕೊಳ್ಳುವುದನ್ನು ಮತ್ತು ಹಸ್ತ ಲಾಘವ ಮಾಡಿಕೊಳ್ಳುವುದನ್ನು ನೀವು ನೋಡುತ್ತೀರಿ. ಕೆಲವು ವರ್ಷಗಳ ಹಿಂದೆ ನೀವು ಅದನ್ನು ನೋಡಲು ಸಾಧ್ಯವಿರುತ್ತಿರಲಿಲ್ಲ ಎಂಬುದಾಗಿ ಗಂಭೀರ್​ ಹೇಳಿಕೆ ನೀಡಿದ್ದಾರೆ.

ವಿಶೇಷವೆಂದರೆ, ಗಂಭೀರ್ ಅವರು ರಾಷ್ಟ್ರೀಯ ತಂಡದಲ್ಲಿದ್ದಾಗ ಪಾಕಿಸ್ತಾನದ ವಿರುದ್ಧ ಆಡುವುದನ್ನು ಸಂಭ್ರಮಿಸಿದ್ದರು. ಮೈದಾನದಲ್ಲಿ ಅತ್ಯಂತ ಆಕ್ರಮಣಕಾರಿ ಮತ್ತು ಕೇಂದ್ರೀಕೃತ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. ಸ್ಲೆಡ್ಜಿಂಗ್ ವಿಷಯವನ್ನು ಮತ್ತಷ್ಟು ಎತ್ತಿ ತೋರಿಸಿದ ಗಂಭೀರ್ ಅವರು, ಆಟಗಾರರ ನಡುವಿನ ತಮಾಷೆ ವೈಯಕ್ತಿಕ ಮಟ್ಟಕ್ಕೆ ಹೋಗಬಾರದು ಎಂಬುದಾಗಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ : Asia Cup 2023 : ಭಾರತ- ನೇಪಾಳ ಪಂದ್ಯಕ್ಕೂ ಮಳೆ ಬರುವುದೇ? ಹಾಗಾದ್ರೆ ಭಾರತ ಪ್ಲೇಆಫ್​ ಅವಕಾಶವೇನು?

ಸ್ಲೆಡ್ಜ್ ಮಾಡಬಹುದು, ಆದರೆ ವೈಯಕ್ತಿಕವಾಗಬೇಡಿ. ನೀವು ನಿಮ್ಮ ಮಿತಿಯೊಳಗೆ ಇರಬೇಕು. ಇನ್ನೊಬ್ಬರ ಕುಟುಂಬ ಸದಸ್ಯರನ್ನು ಒಳಗೊಳ್ಳಬೇಡಿ ಅಥವಾ ತುಂಬಾ ವೈಯಕ್ತಿಕವಾಗಬೇಡಿ. ತಮಾಷೆ ಚೆನ್ನಾಗಿದೆ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ತಮಾಷೆ ನಡೆಯುತ್ತಿತ್ತು ಎಂದು ಅವರು ಹೇಳಿದರು.

ಏಷ್ಯಾಕಪ್ ಬಗ್ಗೆ ಮಾತನಾಡುವುದಾದರೆ ಪಾಕಿಸ್ತಾನವು ಭಾರತದ ವಿರುದ್ಧ ಒಂದು ಅಂಕವನ್ನು ಗಳಿಸಿದ ನಂತರ ಸೂಪರ್ 4 ಹಂತಕ್ಕೆ ಪ್ರವೇಶಿಸಿದೆ. ಮತ್ತೊಂದೆಡೆ, ಮೆನ್ ಇನ್ ಬ್ಲೂ ಮುಂದಿನ ಸುತ್ತಿಗೆ ಪ್ರವೇಶಿಸಲು ನೇಪಾಳದ ವಿರುದ್ಧ ತಮ್ಮ ಪರವಾಗಿ ಫಲಿತಾಂಶವನ್ನು ಪಡೆಯಬೇಕಾಗಿದೆ.

Exit mobile version