ಇಂದೋರ್: ಏಕದಿನ ವಿಶ್ವಕಪ್(icc world cup 2023) ಆರಂಭಕ್ಕೂ ಮುನ್ನ ಆಯ್ಕೆ ಸಮಿತಿ ಮತ್ತು ಬಿಸಿಸಿಐ(BCCI) ಕೊಂಚ ನಿರಾಳವಾಗಿದೆ. ಇದಕ್ಕೆ ಕಾರಣ ಆಸೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್(Shreyas Iyer) ತೋರಿದ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ. ಹೌದು, ಅಯ್ಯರ್ ಅವರನ್ನು ನಾಲ್ಕನೇ ಕ್ರಮಾಂಕಕ್ಕೆ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಅವರು ಏಷ್ಯಾಕಪ್ನ ಮೊದಲ ಪಂದ್ಯ ಆಡಿದ ಬಳಿಕ ಮತ್ತೆ ಬೆನ್ನು ನೋವಿನ ಗಾಯಕ್ಕೆ ಈಡಾಗಿ ಆ ಬಳಿಕ ಪಂದ್ಯದಿಂದ ಹೊರಗುಳಿದಿದ್ದರು. ಇದು ಬಿಸಿಸಿಐಗೆ ಚಿಂತೆಗೀಡು ಮಾಡಿತ್ತು. ಆದರೆ ಈಗ ಈ ಸಮಸ್ಯೆ ಬಗೆಹರಿದಿದೆ.
ಆಸೀಸ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಅಯ್ಯರ್ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿ 6 ತಿಂಗಳ ಕಾಲ ಕ್ರಿಕೆಟ್ ನಿಂದ ದೂರ ಉಳಿದಿದ್ದರು. ಇದಾದ ಬಳಿಕ ಅವರು ಐಪಿಎಲ್ನಿಂದಲೂ ದೂರ ಉಳಿದಿದ್ದರು. ಶಸ್ತ್ರಚಿಕಿತ್ಸಗೆ ಒಳಗಾಗಿದ್ದ ಬಳಿಕ ಬೆಂಗಳೂರಿನ ರಾಷ್ಟ್ರೀಯ ಅಕಾಡೆಮಿಯಲ್ಲಿ ಪುನಶ್ಚೇತನದಲ್ಲಿ ಗುಣಮುಖರಾಗಿದ್ದರು. ಹೀಗಾಗಿ ಅವರನ್ನು ಏಷ್ಯಾ ಕಪ್ ಜತೆಗೆ ವಿಶ್ವಕಪ್ ತಂಡದಲ್ಲಿಯೂ ಅವಕಾಶ ನೀಡಲಾಗಿತ್ತು.
ನಂಬಿಕೆ ಉಳಿಸಿಕೊಂಡ ಅಯ್ಯರ್
ಏಷ್ಯಾಕಪ್ನ ಪಾಕ್ ವಿರುದ್ಧದ ಲೀಗ್ ಪಂದ್ಯದಲ್ಲಿ ಅವರಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಆಯ್ಕೆ ಸಮಿತಿಗೆ ಅವರ ಆಯ್ಕೆ ದೊಡ್ಡ ಹಿನ್ನಡೆಯಾಗುವ ಲಕ್ಷಣ ಕಂಡುಬಂದಿತ್ತು. ಅಲ್ಲದೆ ಮಾಜಿ ಆಟಗಾರರು ಕೂಡ ಅಯ್ಯರ್ ಅವರಿಗೆ ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಿದ ಕುರಿತು ಅಪಸ್ವರ ಎತ್ತಿದ್ದರು. ಆದರೆ ಅಯ್ಯರ್ ತನ್ನ ಮೇಲೆ ಆಯ್ಕೆ ಸಮಿತಿ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ವಿಶ್ವಕಪ್ಗೆ ಒಂದು ವಾರ ಇರುವಾಗ ಬಲಿಷ್ಠ ಆಸೀಸ್ ವಿರುದ್ಧ(IND vs AUS) ಶತಕ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಬ್ಯಾಟಿಂಗ್ ಫಾರ್ಮ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಹೆಚ್ಚು ನೆರವಾಗಲಿದೆ. ಅಯ್ಯರ್ ಮಾತ್ರವಲ್ಲದೆ ವಿಶ್ವಕಪ್ನಲ್ಲಿ ಸ್ಥಾನ ಪಡೆದ ಎಲ್ಲ ಆಟಗಾರರು ಕೂಡ ಉತ್ತಮ ಪ್ರದರ್ಶನ ತೋರುವ ಮೂಲಕ ವಿಶ್ವಕಪ್ ಗೆಲ್ಲುವ ಬರವಸೆ ಮೂಡಿಸಿದ್ದಾರೆ.
The celebration by Shreyas Iyer 🔥
— Johns. (@CricCrazyJohns) September 24, 2023
– He is back. Number 4 is back. pic.twitter.com/C9bgj5Br43
ಶ್ರೇಯಸ್ ಅಯ್ಯರ್ ಮತ್ತು ಗಿಲ್ ಸೇರಿಕೊಂಡು ದ್ವಿತೀಯ ವಿಕೆಟ್ಗೆ ಭರ್ತಿ 200 ರನ್ಗಳ ಜತೆಯಾಟ ನಡೆಸಿದರು. ಅಯ್ಯರ್ ಅವರು 90 ಎಸೆತ ಎದುರಿಸಿ 11 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 105 ರನ್ ಬಾರಿಸಿದರೆ, ಶುಭಮನ್ ಗಿಲ್ 97 ಎಸೆತದಿಂದ 104 ರನ್ ಬಾರಿಸಿದರು. ಈ ವೇಳೆ 6 ಬೌಂಡಿ ಮತ್ತು 4 ಸಿಕ್ಸರ್ ಸಿಡಿಯಿತು.
ಇದನ್ನೂ ಓದಿ IND vs AUS 2nd ODI: ಗಿಲ್-ಅಯ್ಯರ್ ಬೊಂಬಾಟ್ ಶತಕ; ಆಸೀಸ್ ಗೆಲುವಿಗೆ ಬೃಹತ್ ಗುರಿ
ಪ್ರತಿಭಾನ್ವಿತ ಆಟಗಾರ
ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಭರವಸೆಯ ಪ್ರತಿಭಾನ್ವಿತ ಆಟಗಾರ. ಇದುವರೆಗೆ ಟೀಮ್ ಇಂಡಿಯಾ ಪರ 10 ಟೆಸ್ಟ್, 45 ಏಕದಿನ ಮತ್ತು 49 ಟಿ20 ಪಂದ್ಯಗಳನ್ನು ಆಡಿದ್ದಾರೆ. 2017ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 50 ಓವರ್‌ಗಳ ಸ್ವರೂಪದಲ್ಲಿ, ಅವರು 46.13 ಸರಾಸರಿಯಲ್ಲಿ 1753 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು.