ವಾಷಿಂಗ್ಟನ್: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ(Ravindra Jadeja) ರಜೆಯ ಮೋಜಿನಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ಕುಟುಂಬ ಸಮೇತರಾಗಿ ಅಮೆರಿಕ(United States) ಪ್ರವಾಸ ಕೈಗೊಂಡು ಇಲ್ಲಿನ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ.
ಮುಕ್ಕಾಬುಲ್ಲಾ ಹಾಡಿಗೆ ಸಖತ್ ಸ್ಟೆಪ್ಸ್
ಸತತ ಕ್ರಿಕೆಟ್ ಆಡಿ ಬಳಲಿರುವ ಜಡೇಜಾ ಏಷ್ಯ ಕಪ್ಗೂ ಮುನ್ನ ರಿಲ್ಯಾಕ್ಸ್ ಆಗಲು ಬಿಡುವು ಮಾಡಿಕೊಂಡು ಅಮೆರಿಕದಲ್ಲಿ ಸುತ್ತಾಡುತ್ತಿದ್ದಾರೆ. ಇದೇ ವೇಳೆ ಅವರು ಇಲ್ಲಿನ ಸ್ಟ್ರೀಟ್ ಒಂದರಲ್ಲಿ ನಡೆಯುತ್ತಿದ್ದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಡ್ಯಾನ್ಸ್ ಪ್ರಿಯರನ್ನು ಹೆಚ್ಚೆದ್ದು ಕುಣಿಸುವಂತೆ ಮಾಡುವ ಪ್ರಭುದೇವ್ ನಟನೆಯ ಸಿನೆಮಾದ ಮುಕ್ಕಾಲ ಮುಕ್ಕಾಬುಲ್ಲಾ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೊ ವೈರಲ್(Viral Video) ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮೆಚ್ಚುಗೆ
ರವೀಂದ್ರ ಜಡೇಜಾ ಅವರ ಡ್ಯಾನ್ಸ್ ವಿಡಿಯೊವನ್ನು ಐಪಿಎಲ್ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(chennai super kings) ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು. ‘ನಿಮ್ಮ ಬೆಂಕಿ ಡ್ಯಾನ್ಸ್ಗೆ ದೊಡ್ಡ ಸಲಾಂ, ಬೆಂಕಿಯನ್ನು ನೀಡಿದರೆ ಅದನ್ನು ಜ್ವಾಲೆಯಾಗಿ ಪರಿವರ್ತಿಸಿ’ ಎಂದು ಬರೆದುಕೊಂಡಿದೆ. 16ನೇ ಆವೃತ್ತಿ ಐಪಿಎಲ್ನಲ್ಲಿ ಚೆನ್ನೈ ಚಾಂಪಿಯನ್ ಆಗಲು ಜಡೇಜಾ ಅವರೆ ಪ್ರಮುಖ ಕಾರಣ.
ಚೆನ್ನೈಗೆ ಸ್ಮರಣೀಯ ಗೆಲುವು ತಂದು ಕೊಟ್ಟ ಜಡೇಜಾ
ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ಉಸಿರು ಬಿಗಿಹಿಡಿದು ನಿಲ್ಲುವಂತೆ ಮಾಡಿದ್ದ 16ನೇ ಆವೃತ್ತಿ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ವಿರುದ್ಧ ಗೆದ್ದು 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಪಂದ್ಯದಲ್ಲಿ ಅಸಾಮಾನ್ಯ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟವರು ರವೀಂದ್ರ ಜಡೇಜಾ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಅತ್ಯಂತ ರೋಚಕ ಪಂದ್ಯದ ಅಂತಿಮ ಓವರ್ ಮೋಹಿತ್ ಶರ್ಮ ಎಸೆದರು. ಈ ಓವರಿನ ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ ಮೂರು ರನ್ ಬಿಟ್ಟುಕೊಟ್ಟು ಚೆನ್ನೈ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದರು. ಇದರಿಂದಾಗಿ ಪಾಂಡ್ಯ ಪಡೆಯ ಗೆಲ್ಲುವ ಆಸೆ ಬಲವಾಯಿತು. ಆದರೆ ಗುಜರಾತ್‌ನ ಈ ಕನಸನ್ನು ರವೀಂದ್ರ ಜಡೇಜಾ ನುಚ್ಚುನೂರು ಮಾಡಿದರು. ಅಂತಿಮ ಎರಡು ಎಸೆತದಲ್ಲಿ 10 ರನ್ ಗಳಿಸಬೇಕಿತ್ತು, ಈ ಸವಾಲನ್ನು ಜಡೇಜಾ ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ ಚೆನ್ನೈ ತಂಡದ ಗೆಲುವನ್ನು ಸಾರಿದ್ದರು.
ಇದನ್ನೂ ಓದಿ Viral Video: ರಕ್ಕಸ ಗಾತ್ರದ ಅಲೆಗಳ ಮಧ್ಯೆ ಈಜಿ ದಡ ಸೇರಿದ ಮಹಿಳೆ; ದೂರ ತಿಳಿದರೆ ಅಚ್ಚರಿ ಖಚಿತ!
ಏಷ್ಯಾಕಪ್ಗೆ ಸಿದ್ಧತೆ
ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯುವ ಹೈಬ್ರಿಡ್ ಮಾದರಿಯ ಏಷ್ಯಾಕಪ್ಗೆ(Asia Cup 2023) ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಉಳಿದಿವೆ. ಈ ಮಹತ್ವದ ಟೂರ್ನಿ ಆಗಸ್ಟ್ 31ರಿಂದ ಆರಂಭವಾಗಲಿದೆ. ಟೂರ್ನಿಯ ವೇಳಾಪಟ್ಟಿ ಮತ್ತು ತಾಣಗಳು ಈಗಾಗಲೇ ಪ್ರಕಟಗೊಂಡಿದೆ. ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ನಾಯಕ ರೋಹಿತ್ ಶರ್ಮ ಮತ್ತು ರವೀಂದ್ರ ಜಡೇಜಾ ಮುಂದಿನ ವಾರ ಬೆಂಗಳೂರಿನ ಎನ್ಸಿಎಗೆ ಆಗಮಿಸಿ ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ವಿಶ್ವಕಪ್ ದೃಷ್ಟಿಯಲ್ಲಿ ಈ ಟೂರ್ನಿ ಭಾರತಕ್ಕೆ ಮಹತ್ವದ್ದಾಗಿದೆ.