ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ರವೀಂದ್ರ ಜಡೇಜಾ ಅವರು ತನ್ನದೇ ತಂಡದ ಅಭಿಮಾನಿಗಳ ವಿರುದ್ಧ ನೀಡಿದ ಹೇಳಿಕೆಯೊಂದು ಇದೀಗ ಭಾರಿ ಸಂಚಲನ ಮೂಡಿಸಿದೆ. ತಾನು ಬ್ಯಾಟಿಂಗ್ ನಡೆಸಲು ಬಂದರೆ ಅಭಿಮಾನಿಗಳು ಬೇಗನೆ ಔಟಾಗುವಂತೆ ಹಿಡಿ ಶಾಪ ಹಾಕುತ್ತಾರೆ ಎಂದು ಹೇಳಿದ್ದಾರೆ.
ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪಾಲಿನ ಆಟದಲ್ಲಿ 8 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿ ಶರಣಾಯಿತು.
ಈ ಪಂದ್ಯದಲ್ಲಿ ಚೆನ್ನೈ ಪರ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಜಡೇಜಾ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನಾರದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಡೇಜಾ ಅವರು ತಾನು ಬ್ಯಾಟಿಂಗ್ ನಡೆಸಲು ಕ್ರೀಸ್ಗೆ ಇಳಿಯುವ ವೇಳೆ ಅಭಿಮಾನಿಗಳು ಔಟಾಗುವಂತೆ ಪ್ರಾರ್ಥಿಸುತ್ತಾರೆ ಎಂದು ಹೇಳಿದರು. ಜಡೇಜಾ ಅವರು ಹೀಗೆ ಹೇಳಲು ಪ್ರಮುಖ ಕಾರಣವೆಂದರೆ ಅಭಿಮಾನಿಗಳಿಗೆ ಧೋನಿ ಬ್ಯಾಟಿಂಗ್ ಕಣ್ತುಂಬಿಕೊಳ್ಳುವ ಬಯಕೆ.
ಹೌದು ಮಹೇಂದ್ರ ಸಿಂಗ್ ಧೋನಿ ಅವರು ಈ ಬಾರಿಯ ಐಪಿಎಲ್ ಬಳಿಕ ನಿವೃತ್ತಿ ಹೇಳಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದ ಕ್ಷಣದಿಂದ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಬ್ಯಾಟಿಂಗ್ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯ ಇದೆ ಎಂದರೆ ಸಾಕು ತಮ್ಮ ನೆಚ್ಚಿನ ತಂಡವನ್ನು ಬಿಟ್ಟು ಧೋನಿ ತಂಡಕ್ಕೆ ಬೆಂಬಲ ಸೂಚಿಸುತ್ತಿರುವ ಹಲವಾರು ನಿದರ್ಶನಗಳನ್ನು ಈಗಾಗಲೇ ನೋಡಿದ್ದೇವೆ. ಅದರಲ್ಲೂ ಧೋನಿ ಅವರು ಮೈದಾನಕ್ಕೆ ಬ್ಯಾಟ್ ಹಿಡಿದು ಬರುವ ಕ್ಷಣವಂತು ಇಡೀ ಸ್ಟೇಡಿಯಂನ್ಲಲಿ ಧೋನಿ ಹೆಸರು ರಾರಾಜಿಸುತ್ತಿರುತ್ತದೆ.
ಇದನ್ನೂ ಓದಿ IPL 2023: ಟಾಸ್ ಗೆದ್ದ ರಾಜಸ್ಥಾನ್; ಕೆಕೆಆರ್ಗೆ ಬ್ಯಾಟಿಂಗ್ ಆಹ್ವಾನ
ಇದೇ ವಿಚಾರವಾಗಿ ರವೀಂದ್ರ ಜಡೇಜಾ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ನನ್ನ ಬ್ಯಾಟಿಂಗ್ ಕ್ರಮಾಂಕ ಆದ ಬಳಿಕ ಧೋನಿ ಅವರು ಕ್ರೀಸ್ಗೆ ಇಳಿಯುತ್ತಾರೆ. ಧೋನಿ ಅವರು ನನಗೆ ಹೆಚ್ಚು ಎಸೆತಗಳನ್ನು ಆಡುವಂತೆ ಸೂಚಿಸುತ್ತಾರೆ. ಆದ್ದರಿಂದ ಅವರಿಗೆ ಬ್ಯಾಟಿಂಗ್ ನಡೆಸಲು ಹೆಚ್ಚಿನ ಎಸೆತಗಳು ಲಭ್ಯವಾಗುದಿಲ್ಲ. ಒಂದೊಮ್ಮೆ ನಾನು ಔಟಾದರೆ ಆಗ ಧೋನಿ ಅವರು ತಂಡಕ್ಕೆ ಆಸರೆಯಾಗಿ ಹೆಚ್ಚಿನ ಎಸೆತಗಳಿಗೆ ಬ್ಯಾಟ್ ಬೀಸುತ್ತಾರೆ. ಆಗ ಅವರ ಅಭಿಮಾನಿಗಳಿಗೆ ನೆಚ್ಚಿನ ಆಟಗಾರರನ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ಈ ಒಂದೇ ಕಾರಣಕ್ಕೆ ಅಭಿಮಾನಿಗಳು ತಾನು ಕ್ರೀಸ್ಗೆ ಇಳಿಯುವಾಗ ಔಟಾಗುವಂತೆ ಪ್ರಾರ್ಥಿಸುತ್ತಾರೆ ಎಂದು ಹೇಳಿದ್ದಾರೆ. ಆದರೆ ಜಡೇಜಾ ಅವರ ಈ ಹೇಳಿಕೆಯನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಜಡೇಜಾ ಅವರು ತಮ್ಮನ್ನು ನಾಯಕತ್ವದಿಂದ ಕೆಳಗಿಳಿಸಿದ ನೋವಿನಿಂದ ಹೀಗೆ ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದಾರೆ.