Site icon Vistara News

Pro Kabaddi League | ಜೈಪುರ ಪಿಂಕ್​ ಪ್ಯಾಂಥರ್ಸ್​ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ ಚಾಂಪಿಯನ್​

ಮುಂಬಯಿ : ಜೈಪುರ ಪಿಂಕ್​ ಪ್ಯಾಂಥರ್ಸ್​ ತಂಡ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನ (Pro Kabaddi League) ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಪುಣೇರಿ ಪಲ್ಟನ್​ ವಿರುದ್ಧ 33-29 ಅಂಕಗಳ ಅಂತರದ ವಿಜಯ ಸಾಧಿಸಿದ ಜೈಪುರ ತಂಡ ಎರಡನೇ ಬಾರಿಗೆ ಟ್ರೋಫಿ ಗೆದ್ದಿತು. 2014ರ ಉದ್ಘಾಟನಾ ಆವೃತ್ತಿಯಲ್ಲೂ ಪಿಂಕ್​ ಪ್ಯಾಂಥರ್ಸ್​ ಪ್ರಶಸ್ತಿ ಗೆದ್ದಿತ್ತು.

ಆರಂಭದಿಂದಲೇ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಪುಣೇರಿ ಪಲ್ಟನ್​ ವಿಶ್ವಾಸದಿಂದ ಆಟ ಆರಂಭಿಸಿತು. ಆದರೆ, ತನ್ನ ಅನುಭವ ಬಳಸಿಕೊಂಡು ಆಡಿದ ಜೈಪುರ ತಂಡ ಒಂದೊಂದಾಗಿ ಅಂಕಗಳನ್ನು ಗಳಿಸುತ್ತಾ ಪ್ರಥಮಾರ್ಧ ಮುಕ್ತಾಯದ ವೇಳೆಗೆ 14-12 ಅಂಕಗಳ ಮುನ್ನಡೆ ಸಾಧಿಸಿತು. ಅದೇ ಮಾದರಿಯ ಆಟವನ್ನು ದ್ವಿತೀಯಾರ್ಧದಲ್ಲೂ ಮುಂದುವರಿಸುವ ಜತೆಗೆ ಒಂದು ಪುಣೇರಿ ತಂಡವನ್ನು ಆಲ್​ಔಟ್​ ಮಾಡಿ 19-17 ಅಂಕಗಳನ್ನು ಸಂಪಾದಿಸಿ ಗೆಲುವು ಸಾಧಿಸಿತು.

ಜೈಪುರ ತಂಡದ ಪರ ರೇಡರ್​ಗಳಾದ ಅರ್ಜುನ್​ ದೇಸ್ವಾಲ್​ ಹಾಗೂ ವಿ ಅಜಿತ್​ ತಲಾ 6 ಅಂಕಗಳನ್ನು ಸಂಪಾದಿಸಿದರೆ, ಡಿಫೆಂಡರ್​ ಸುನೀಲ್​ ಕೂಡ 6 ಅಂಕಗಳನ್ನು ಪಡೆದರು. ಪುಣೇರಿ ತಂಡದ ಪರ ಆಕಾಶ್ ಶಿಂಧೆ ಹಾಗೂ ಅಭಿನೇಷ್​ ನಟರಾಜನ್​ ತಲಾ 4 ಅಂಕಗಳನ್ನು ಸಂಪಾದಿಸಿದರು.

ತಾರೆಯರ ದಂಡು

ಫೈನಲ್​ ಪಂದ್ಯವನ್ನು ಜೈಪುರ ಪಿಂಕ್​ ಪ್ಯಾಂಥರ್ಸ್ ತಂಡ ಮಾಲೀಕರಾಗಿರುವ ಅಭಿಷೇಕ್​ ಬಚ್ಚನ್. ಪತ್ನಿ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯ ಬಚ್ಚನ್​ ವೀಕ್ಷಿಸಿದರು. ಜತೆಗೆ ಬಾಲಿವುಡ್​ ನಟ ರಣವೀರ್ ಸಿಂಗ್​, ನಟಿ ಪೂಜಾ ಹೆಗ್ಡೆ ಹಾಗೂ ನಿರ್ದೇಶಕ ರೋಹಿತ್​ ಶೆಟ್ಟಿ ಕೂಡ ಹಾಜರಿದ್ದರು.

Exit mobile version