ಲಂಡನ್: ಇಂಗ್ಲೆಂಡ್ ತಂಡದ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್(James Anderson) ಅವರು ತಮ್ಮ 22 ವರ್ಷಗಳ ಸುದೀರ್ಘ ಅಂತಾರಾಷ್ಟೀಯ ಕ್ರಿಕೆಟ್ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಇಂದು(ಶುಕ್ರವಾರ) ಮುಕ್ತಾಯ ಕಂಡ ಟೆಸ್ಟ್ ಪಂದ್ಯ ಅವರಿಗೆ ಕೊನೆಯ ಪಂದ್ಯವಾಯಿತು. ಈ ಪಂದ್ಯವನ್ನು ಇಂಗ್ಲೆಂಡ್ ಇನಿಂಗ್ಸ್ ಹಾಗೂ 114 ರನ್ಗಳಿಂದ ಗೆದ್ದು ಬೀಗಿತು. ಆ್ಯಂಡರ್ಸನ್ಗೂ ಗೆಲುವಿನ ವಿದಾಯ ಲಭಿಸಿತು. ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ 41 ವರ್ಷದ ಆ್ಯಂಡರ್ಸನ್, ವಿದಾಯಕ್ಕೆ ಸಚಿನ್ ತೆಂಡೂಲ್ಕರ್(Sachin Tendulkar) ಭಾವನಾತ್ಮಕ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.
‘ಹೇ ಜಿಮ್ಮಿ!.. ನಿಮ್ಮ ಆ ನಂಬಲಾಗದ 22 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದೀರಿ. ನೀಮ್ಮ ವಿದಾಯದ ಸಂದರ್ಭದಲ್ಲಿ ನನ್ನದೊಂದು ಸಣ್ಣ ಹಾರೈಕೆ ಇದೆ. ನೀವು ಬೌಲಿಂಗ್ ಮಾಡುವುದನ್ನು ವೀಕ್ಷಿಸುವುದೇ ಒಂದು ರೀತಿಯ ಸಂತೋಷ. ಆ ನಿಮ್ಮ ಶೈಲಿ, ವೇಗ, ನಿಖರತೆ, ಸ್ವಿಂಗ್ ಮತ್ತು ಫಿಟ್ನೆಸ್ ಮುಂದಿನ ಪೀಳಿಗೆಯ ಬೌಲರ್ಗಳಿಗೆ ಸ್ಫೂರ್ತಿ. ಮುಂದಿನ ಜೀವನವನ್ನು ಕುಟುಂಬದೊಂದಿಗೆ ಆನಂದಿಸಿ” ಎಂದು ಹಾರೈಸಿದ್ದಾರೆ.
ಆ್ಯಂಡರ್ಸನ್ ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್ ಪಡೆದ, ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್ ಪಡೆದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ವಿದಾಯ ಪಂದ್ಯದಲ್ಲೇ ಆ್ಯಂಡರ್ಸನ್ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದು ಕೂಡ ವಿಶೇಷ. ದ್ವಿತೀಯ ಇನಿಂಗ್ಸ್ನಲ್ಲಿ 10 ಓವರ್ ಪೂರ್ತಿಗೊಳಿಸುವ ಮೂಲಕ ಜೇಮ್ಸ್ ಆ್ಯಂಡರ್ಸನ್ 40 ಸಾವಿರ ಚೆಂಡೆಸೆದ ದಾಖಲೆ ನಿರ್ಮಿಸಿದರು. ಈ ದಾಖಲೆ ಮಾಡಿದ ವಿಶ್ವದ ಮೊದಲ ವೇಗಿ ಎನಿಸಿಕೊಂಡರು. ಅತಿ ಹೆಚ್ಚು ಎಸೆತಗಳನ್ನು ಎಸೆದ ವಿಶ್ಚ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಮುರಳೀಧರನ್ 44039 ಎಸೆತಗಳನ್ನು ಎಸೆದಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ 40850 ಎಸೆತಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ವಿದಾಯ ಪಂದ್ಯದಲ್ಲಿ ಆ್ಯಂಡರ್ಸನ್ ಒಟ್ಟು 4 ವಿಕೆಟ್ ಕಿತ್ತು ಮಿಂಚಿದರು.
3 ತಿಂಗಳ ಹಿಂದೆ ಆ್ಯಂಡರ್ಸನ್ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದ್ದರು. “ಎಲ್ಲರಿಗೂ ನಮಸ್ಕಾರ, ಈ ಬೇಸಿಗೆಯಲ್ಲಿ ಲಾರ್ಡ್ಸ್‌ನಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ, ನನ್ನ ಕೊನೆಯ ಪಂದ್ಯವಾಗಿರಲಿದೆ. ಬಾಲ್ಯದಿಂದ ಇಷ್ಟಪಟ್ಟಿದ ಆಟವನ್ನು ಆಡಲು, ನನ್ನ ದೇಶವನ್ನು ಪ್ರತಿನಿಧಿಸಿದ 20 ಅದ್ಭುತ ವರ್ಷಗಳಿವು. ಇಂಗ್ಲೆಂಡ್ ತಂಡಕ್ಕಾಗಿ ಆಡುವುದನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದರು.
2003ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್, ಈವರೆಗೂ 188 ಪಂದ್ಯಗಳಲ್ಲಿ 704 ವಿಕೆಟ್ ಗಳಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹಾಗೂ ಆಸ್ಟ್ರೇಲಿಯಾದ ಶೇನ್ ವಾರ್ನ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಸ್ಥಾನದಲ್ಲಿ ಆ್ಯಂಡರ್ಸನ್ ಇದ್ದಾರೆ. 194 ಏಕದಿನ ಪಂದ್ಯಗಳನ್ನು ಆಡಿರುವ ಅವರು, 269 ವಿಕೆಟ್‌ಗಳನ್ನು ಪಡೆದಿದ್ದಾರೆ.