ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರುದ್ಧ ಕೋಲ್ಕೊತಾ ನೈಟ್ ರೈಡರ್ಸ್ ತಂಡ 21 ರನ್ಗಳ ವಿಜಯ ದಾಖಲಿಸಿದ ಹೊರತಾಗಿಯೂ ಆ ತಂಡದ ಆರಂಭಿಕ ಬ್ಯಾಟರ್ ಜೇಸನ್ ರಾಯ್ಗೆ ಐಪಿಎಲ್ ಆಡಳಿತ ಮಂಡಳಿ ದಂಡ ವಿಧಿಸಿದೆ. ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ ಕಾರಣ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ. 10 ರಷ್ಟು ದಂಡವನ್ನು ವಿಧಿಸಲಾಗಿದೆ. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಜೇಸನ್ ರಾಯ್ ವಿಕೆಟ್ ಒಪ್ಪಿಸಿದ ಬಳಿಕ ಆವೇಶದಲ್ಲಿ ಸ್ಟಂಪ್ಸ್ ಬೇಲ್ಸ್‌ಗೆ ಬ್ಯಾಟ್‌ನಿಂದ ಹೊಡೆದಿದ್ದರು. ಆ ಮೂಲಕ ಐಪಿಎಲ್ ನಿಯಮ ಉಲ್ಲಂಘನೆ ಮಾಡಿದ್ದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಕೆಕೆಆರ್ ತಂಡದ ಪರ ಆರಂಭಿಕ ಬ್ಯಾಟರ್ ಜೇಸನ್ ರಾಯ್, ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅವರು 29 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 56 ರನ್ ಬಾರಿಸಿದ್ರು. . ಆ ಮೂಲಕ ಕೆಕೆಆರ್‌ಗೆ ಭರ್ಜರಿ ಆರಂಭ ತಂದುಕೊಟ್ಟಿದ್ದರು. ಅವರ ಉತ್ತಮ ಆರಂಭದಿಂದ ಕೆಕೆಆರ್ ತಂಡ 200 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.
ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಜೇಸನ್ ವೈಶಾಕ್ ವಿಜಯ್ ಕುಮಾರ್ ಎಸೆತ ಇನಿಂಗ್ಸ್ನ 10ನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿದ್ದರು. ಹತಾಶೆಗೆ ಒಳಗಾದ ಜೇಸನ್ ಬ್ಯಾಟ್‌ನಿಂದ ಬೇಲ್ಸ್‌ಗೆ ಹೊಡೆದಿದ್ದರು. ಪಂದ್ಯದ ನಡುವೆ ಬ್ಯಾಟ್‌ನಿಂದ ಬೇಲ್ಸ್‌ಗೆ ಹೊಡೆಯುವುದು ಐಪಿಎಲ್ ನಿಯಮದ ಉಲ್ಲಂಘಟನೆಯಾಗಿದೆ. ಹೀಗಾಗಿ ಅವರಿಗೆ ದಂಡ ವಿಧಿಸಲಾಗಿದೆ.
“ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 2023ರ ಐಪಿಎಲ್ ಟೂರ್ನಿಯ ನಿಯಮ ಉಲ್ಲಂಘಿಸಿದ ಕಾರಣ ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್‌ಮನ್ ಜೇಸನ್ ರಾಯ್ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ. 10 ರಷ್ಟು ದಂಡವನ್ನು ವಿಧಿಸಲಾಗಿದೆ,” ಎಂದು ಐಪಿಎಲ್ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
ಐಪಿಎಲ್ ನಿಯಮದ 2.2 ಕಲಂ ಅಡಿ ಮೊದಲ ಹಂತದ ಅಪರಾಧ ಎಸೆಗಿರುವುದನ್ನು ಜೇಸನ್ ರಾಯ್ ಅವರು ಒಪ್ಪಿಕೊಂಡಿದ್ದಾರೆ. ಅಪರಾಧಕ್ಕಾಗಿ ದಂಡ ವಿಧಿಸುವ ಪಂದ್ಯದ ರೆಫರಿಗಳ ನಿರ್ಧಾರ ಅಂತಿಮ,” ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: IPL 2023 : ಕೆಕೆಆರ್ ವಿರುದ್ಧ ಸೋಲಿನ ಸಿಟ್ಟಿಗೆ ವಿರಾಟ್ ಕೊಹ್ಲಿ ಬೈದಿದ್ದು ಯಾರಿಗೆ?
ಕ್ರಿಕೆಟ್ ಪಂದ್ಯ ನಡೆಯುವ ವೇಳೆ ತಮ್ಮ ಹತಾಶೆ ಮತ್ತು ನೋವನ್ನು ಕ್ರಿಕೆಟ್‌ಗೆ ಸಂಬಂಧಿಸಿದ ಸಾಮಗ್ರಿಗಳು ಅಥವಾ ಮೈದಾನದ ಮೇಳೆ ತೋರಿಸುವಂತಿಲ್ಲ. ಒಂದು ವೇಳೆ ಆಟಗಾರ ತಪ್ಪು ಮಾಡಿದರೆ ಕೋಡ್ ಆಫ್ ಕಂಡಕ್ಟ್
2.2ರ ಪ್ರಕಾರ ಮ್ಯಾಚ್ ರೆಫರಿಗಳು ದಂಡ ವಿಧಿಸುತ್ತಾರೆ.
ಐದನೇ ಪಂದ್ಯದಲ್ಲಿ ಗೆದ್ದ ಕೆಕೆಆರ್
ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಮೊದಲು ಕೋಲ್ಕೊತಾ ತಂಡ ನಿರಾಸೆಯಲ್ಲಿತ್ತು. ಸತತವಾಗಿ 4 ಹಣಾಹಣಿಗಳಲ್ಲಿ ಮಣಿದು ಬೇಸರಕ್ಕೆ ಒಳಗಾಗಿತ್ತು. ಇದೀಗ ಆರ್‌ಸಿಬಿ ವಿರುದ್ಧದ ಗೆಲುವಿನಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ನಿತೀಶ್ ರಾಣಾ ನಾಯಕತ್ವದ ಕೆಕೆಆರ್ ಇಲ್ಲಿಯವರೆಗೂ ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಜಯ ಕಂಡಿದೆ. ಇನ್ನುಳಿದ 5ರಲ್ಲಿ ಸೋಲು ಅನುಭವಿಸಿದೆ. ಒಟ್ಟು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ.