Site icon Vistara News

Jasprit Bumrah | ಜಸ್​ಪ್ರಿತ್​ ಬುಮ್ರಾ ಮತ್ತೆ ಟೀಮ್ ಇಂಡಿಯಾದಿಂದ ಔಟ್​; ಗುವಾಹಟಿಗೆ ಪ್ರಯಾಣಿಸದ ವೇಗಿ

jasprit bumrah

ಗುವಾಹಟಿ : ವೇಗಿ ಜಸ್​ಪ್ರಿತ್​ ಬುಮ್ರಾ (Jasprit Bumrah) ಗಾಯದ ಸಮಸ್ಯೆಯಿಂದ ಗುಣಮುಖರಾಗಿ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯಲ್ಲಿ ಆಡುತ್ತಾರೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಅವರು ಜನವರಿ 10ರಂದು ನಡೆಯಲಿರುವ ಪಂದ್ಯದಲ್ಲಿ ಪಾಲ್ಗೊಳ್ಳಲು ಗುವಾಹಟಿಗೆ ತೆರಳಿಲ್ಲ ಎಂದು ವರದಿಯಾಗಿದೆ. ಈ ಮೂಲಕ ಅವರು ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಲಾದ ಒಂದೇ ವಾರದಲ್ಲಿ ಮತ್ತೆ ಅಲಭ್ಯತೆಯನ್ನು ಪ್ರಕಟಿಸಿದ್ದಾರೆ. ಕಳೆದ ವಾರ ಬುಮ್ರಾ ಅವರು ಆಡುತ್ತಾರೆ ಎಂಬ ಕಾರಣಕ್ಕೆ ಪರಿಷ್ಕೃತ ತಂಡವನ್ನು ಬಿಸಿಸಿಐ ಪ್ರಕಟಿಸಿತ್ತು.

ಗಾಯದ ಸಮಸ್ಯೆ ಹೆಚ್ಚಾಗಬಹುದು ಎಂಬ ಕಾಳಜಿಯಿಂದ ಅವರನ್ನು ಲಂಕಾ ವಿರುದ್ಧದ ಸರಣಿಯಲ್ಲಿ ಆಡಿಸಲಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಜಸ್​ಪ್ರಿತ್​ ಬುಮ್ರಾ ಅವರು ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಕೊನೇ ಬಾರಿಗೆ ಆಡಿದ್ದರು. ಅಲ್ಲಿಂದ ಅವರು ಬೆನ್ನು ನೋವಿನ ಕಾರಣಕ್ಕೆ ತಂಡದಿಂದ ಹೊರಕ್ಕೆ ಉಳಿದಿದ್ದರು.

ಬುಮ್ರಾ ಅವರ ಅಲಭ್ಯತೆ ಕಳೆದ ವರ್ಷ ನಡೆದ ಏಷ್ಯಾ ಕಪ್​ ಟೂರ್ನಿ ಹಾಗೂ ಟಿ20 ವಿಶ್ವ ಕಪ್​ನಲ್ಲಿ ಪ್ರತಿಫಲನಗೊಂಡಿತ್ತು. ಸ್ಲಾಗ್​ ಓವರ್​ಗಳಲ್ಲಿ ಭಾರತ ತಂಡ ರನ್​ ನಿಯಂತ್ರಣ ಮಾಡಲು ಕಷ್ಟಪಟ್ಟಿತ್ತು. ಅಲ್ಲದೆ, ಎರಡೂ ಟೂರ್ನಿಗಳಲ್ಲಿ ಭಾರತ ತಂಡ ನಿರಾಸೆ ಎದುರಿಸಿತ್ತು. ಮುಂದಿನ ಹತ್ತು ತಿಂಗಳಲ್ಲಿ ಭಾರತದ ಆತಿಥ್ಯದಲ್ಲಿ ಏಕ ದಿನ ವಿಶ್ವ ಕಪ್​ ನಡೆಯಲಿದೆ. ಹೀಗಾಗಿ ಬುಮ್ರಾ ಬೌಲಿಂಗ್​ ವಿಭಾಗ ಸೇರಿಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗಾಗಿ ಲಂಕಾ ವಿರುದ್ಧದ ಸರಣಿಗೆ ಅವರು ಲಭ್ಯರಾಗುತ್ತಿದ್ದಾರೆ ಎಂಬ ಸುದ್ದಿ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಪುಳಕ ತಂದಿತ್ತು.

ಲಂಕಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದ ಗುವಾಹಟಿಯಲ್ಲಿ ಬಾರಸ್ಪಾರ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಜನವರಿ 10ರಂದು ನಡೆಯಲಿದ್ದರೆ, ಎರಡನೇ ಪಂದ್ಯ ಜನವರಿ 12ರಂದು ಐತಿಹಾಸಿಕ ಕೋಲ್ಕತಾದ ಈಡನ್​ ಗಾರ್ಡನ್ಸ್​ ಸ್ಟೇಡಿಯಮ್​ನಲ್ಲಿ ಜನವರಿ 12ರಂದು ನಡೆಯಲಿದೆ. ಕೊನೇ ಪಂದ್ಯ ತಿರುವನಂತಪುರದ ಗ್ರೀನ್​ಫೀಲ್ಡ್​ ಸ್ಟೇಡಿಯಮ್​ನಲ್ಲಿ ಜನವರಿ 15ರಂದು ಆಯೋಜನೆಗೊಂಡಿದೆ.

ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ 2-1 ಅಂತರದ ವಿಜಯ ಸಾಧಿಸಿತ್ತು.

ಇದನ್ನೂ ಓದಿ | Jasprit Bumrah | ಜಸ್​ಪ್ರಿತ್​ ಬುಮ್ರಾ ಫುಲ್​ ಫಿಟ್​; ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಗೆ ಎಂಟ್ರಿ, ಪರಿಷ್ಕೃತ ತಂಡ ಪ್ರಕಟ

Exit mobile version