ಮುಂಬಯಿ: ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ (Jasprit Bumrah) ಅವರು ಬೆನ್ನು ನೋವಿನ ಸಮಸ್ಯೆಯಿಂದ ಸಂಪೂರ್ಣಗುಣಮುಖರಾಗಿದ್ದು, ಟೀಮ್ ಇಂಡಿಯಾ ಸೇರಿಕೊಳ್ಳುವುದಕ್ಕೆ ಫಿಟ್ ಎನಿಸಿಕೊಂಡಿದ್ದಾರೆ. ಅವರನ್ನು ಮುಂಬರುವ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ಸೇರ್ಪಡೆ ಮಾಡಲಾಗಿದ್ದು, ಪರಿಷ್ಕೃತ ತಂಡವನ್ನು ಬಿಸಿಸಿಐ ಮಂಗಳವಾರ ಬಿಡುಗಡೆ ಮಾಡಿದೆ.
ಕಳೆದ ಏಷ್ಯಾ ಕಪ್ಗೆ ಮೊದಲು ಜಸ್‌ಪ್ರಿತ್ ಬುಮ್ರಾ ಅವರು ಬೆನ್ನಿನ ಒತ್ತಡ ಗಾಯಕ್ಕೆ ಒಳಗಾಗಿದ್ದರು. ಬಳಿಕ ಅವರನ್ನು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡಿಸಲಾಗಿತ್ತು. ಈ ವೇಳೆ ಅವರ ಗಾಯದ ಸಮಸ್ಯೆ ಉಲ್ಬಣಗೊಂಡು ಮತ್ತಷ್ಟು ಸಮಸ್ಯೆ ಉಂಟಾಯಿತು. ನೋವು ಹೆಚ್ಚಾದ ಕಾರಣ ಅವರನ್ನು ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವ ಕಪ್ ತಂಡದಲ್ಲಿ ಆಡಿಸಿರಲಿಲ್ಲ. ಹೀಗಾಗಿ ಕಳೆದ ಸೆಪ್ಟೆಂಬರ್ನಿಂದ ಅವರು ಸಂಪೂರ್ಣ ವಿಶ್ರಾಂತಿಯಲ್ಲಿದ್ದರು.
ಇದೀಗ ಅವರು ಸಂಪೂರ್ಣವಾಗಿ ಸುಧಾರಿಸಿಕೊಂಡಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಬೆಂಗಳೂರಿನ ಎನ್ಸಿಎನಲ್ಲಿ ಸಂಪೂರ್ಣ ಪುನಶ್ಚೇತನಕ್ಕೆ ಒಳಗಾಗಿದ್ದರು. ಆದಾಗ್ಯೂ ಅವರನ್ನು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿದ್ದ ಶ್ರೀಲಂಕಾ ವಿರುದ್ಧದ ಸರಣಿಯ ತಂಡಕ್ಕೆ ಸೇರ್ಪಡೆಗೊಳಿಸಿರಲಿಲ್ಲ. ಅವರ ಫಿಟ್ನೆಸ್ ಸಂಪೂರ್ಣವಾಗಿ ಸಾಬೀತಾಗುವ ತನಕ ತಂಡಕ್ಕೆ ಸೇರ್ಪಡೆ ಮಾಡುವ ಆತುರವಿಲ್ಲ. ಅವರನ್ನು ಮುಂದಿನ ಏಕ ದಿನ ವಿಶ್ವ ಕಪ್ನಲ್ಲಿ ಆಡಿಸುವುದೇ ತಂಡದ ಗುರಿ ಎಂಬುದಾಗಿ ಬಿಸಿಸಿಐ ಮೂಲಗಳು ಹೇಳಿದ್ದವು. ಇದೀಗ ಅವರ ಸಂಪೂರ್ಣ ಫಿಚ್ ಎನಿಸಿಕೊಂಡಿರುವ ಕಾರಣ ಲಂಕಾ ವಿರುದ್ಧವೇ ಆಡುವ ಅವಕಾಶ ಪಡೆದುಕೊಂಡಿದ್ದಾರೆ.
ಬುಮ್ರಾ ಅವರ ಸೇರ್ಪಡೆಯಿಂದ ಭಾರತ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಲಿದೆ. ಪ್ರಮುಖವಾಗಿ ಸ್ಲಾಗ್ ಓವರ್ಗಳಲ್ಲಿ ರನ್ ಬಿಟ್ಟುಕೊಡುವ ತಂಡದ ಅಭ್ಯಾಸ ಕೊನೆಗೊಳ್ಳಬಹುದು ಎಂದು ಹೇಳಲಾಗಿದೆ.
ಲಂಕಾ ಸರಣಿಗೆ ಪರಿಷ್ಕೃತ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ಕೀಪರ್), ಇಶಾನ್ ಕಿಶನ್ (ವಿಕೆಟ್ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್.
ಇದನ್ನೂ ಓದಿ | Jasprit Bumrah | ವೇಗಿ ಜಸ್‌ಪ್ರಿತ್ ಬುಮ್ರಾ ಚೇತರಿಕೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಲಭ್ಯ?