ಡಬ್ಲಿನ್: ಐರ್ಲೆಂಡ್(Ireland vs India, 1st T20) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಘಾತಕ ಬೌಲಿಂಗ್ನೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಾಯಕ ಜಸ್ಪ್ರೀತ್ ಬುಮ್ರಾ(Jasprit Bumrah) ಅವರು ಆರ್.ಅಶ್ವಿನ್(Ravichandran Ashwin) ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಭಾರತ ಪರ ಅತಿ ಹೆಚ್ಚು ಟಿ20 ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ ಆರ್. ಅಶ್ವಿನ್ ಅವರೊಂದಿಗೆ ಜಂಟಿಯಾಗಿ ನಾಲ್ಕನೇ ಸ್ಥಾನ ಪಡೆದರು.
ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 65 ಟಿ20 ಪಂದ್ಯಗಳನ್ನು ಆಡಿ 72 ವಿಕೆಟ್‌ಗಳನ್ನು ಕೆಡವಿದ್ದಾರೆ. ಜಸ್ಪ್ರೀತ್ ಬುಮ್ರಾ ಸದ್ಯ 61 ಪಂದ್ಯಗಳನ್ನು ಆಡಿ ಈ ಮೈಲುಗಲ್ಲು ತಲುಪಿದ್ದಾರೆ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ಆಡಿದ ಬಳಿಕ ಅಶ್ವಿನ್ ಭಾರತ ತಂಡದ ಪರ ಟಿ20 ಪಂದ್ಯವನ್ನಾಡಿಲ್ಲ. ಕೇವಲ ಟೆಸ್ಟ್ ಸರಣಿಯಲ್ಲಿ ಮಾತ್ರ ಅವರು ಭಾರತ ಪರ ಆಡುತ್ತಿದ್ದಾರೆ.
ಚಹಲ್ಗೆ ಅಗ್ರಸ್ಥಾನ
ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಕಿತ್ತವರ ಪಟ್ಟಿಯಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal) ಮೊದಲ ಸ್ಥಾನ ಪಡೆದಿದ್ದಾರೆ. ಅವರು 80 ಟಿ20 ಪಂದ್ಯಗಳನ್ನು ಆಡಿ 96 ವಿಕೆಟ್ ಪಡೆದಿದ್ದಾರೆ. 25ಕ್ಕೆ 6 ವಿಕೆಟ್ ಪಡೆದದ್ದು ಅವರ ವೈಯಕ್ತಿಕ ಉತ್ತಮ ಬೌಲಿಂಗ್ ದಾಖಲೆಯಾಗಿದೆ. ಭುವನೇಶ್ವರ್ ಕುಮಾರ್ 90 ವಿಕೆಟ್ ಪಡೆದು ದ್ವಿತೀತ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನ ಹಾರ್ದಿಕ್ ಪಾಂಡ್ಯ ಪಾಲಾಗಿದೆ. 73 ವಿಕೆಟ್ ಕಿತ್ತಿದ್ದಾರೆ.
2 ವಿಕೆಟ್ ಪಡೆದರೆ ಪಾಂಡ್ಯ ದಾಖಲೆ ಪತನ
ಜಸ್ಪ್ರೀತ್ ಬುಮ್ರಾ ಅವರು ದ್ವಿತೀಯ ಪಂದ್ಯದಲ್ಲಿ ಎರಡು ವಿಕೆಟ್ ಪಡೆದರೆ ಹಾರ್ದಿಕ್ ಪಾಂಡ್ಯರ(hardik pandya) 73 ವಿಕೆಟ್ಗಳ ಸಾಧನೆಯನ್ನು ಮೀರಿ ನಿಲ್ಲಲಿದ್ದಾರೆ. ಜತೆಗೆ ಮೂರನೇ ಸ್ಥಾನಕ್ಕೂ ಏರಲಿದ್ದಾರೆ. ಮೊದಲ ಪಂದ್ಯದಲ್ಲಿ ಬುಮ್ರಾ 4 ಓವರ್ ಎಸೆದು 24ರನ್ ವೆಚ್ಚದಲ್ಲಿ 2 ವಿಕೆಟ್ ಪಡೆದು ಗ್ರೇಟ್ ಕಮ್ಬ್ಯಾಕ್ ಮಾಡಿದರು. ಈ ಎರಡು ವಿಕೆಟ್ಗಳು ಮೊದಲ ಓವರ್ನಲ್ಲಿ ಪತನಗೊಂಡಿತು.
ಇದನ್ನೂ ಓದಿ Jasprit Bumrah: 11 ತಿಂಗಳ ಬಳಿಕ ಮೈದಾನಕ್ಕಿಳಿದ ಬುಮ್ರಾ; ಜಿಗಿಯಲು ಹೋಗಿ ಸ್ವಲ್ಪದರಲ್ಲೇ ಪಾರು
ಬುಮ್ರಾ ದಾಖಲೆ ಮುರಿಯಲು ಸಜ್ಜಾದ ಅರ್ಶ್ದೀಪ್
ಎಡಗೈ ವೇಗಿ ಅರ್ಶ್ದೀಪ್ ಸಿಂಗ್(arshdeep singh) ಅವರು ಬುಮ್ರಾ ದಾಖಲೆಯನ್ನು ಮುರಿಯುವತ್ತ ಚಿತ್ತ ನೆಟ್ಟಿದ್ದಾರೆ. ಇನ್ನೊಂದು ವಿಕೆಟ್ ಕೆಡವಿದರೆ ಟಿ20 ಕ್ರಿಕೆಟ್ನಲ್ಲಿ ಅತ್ತಿ ವೇಗವಾಗಿ 50 ವಿಕೆಟ್ ಪೂರ್ತಿಗೊಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಬುಮ್ರಾ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಮೊದಲ ಪಂದ್ಯದಲ್ಲಿಯೇ 2 ವಿಕೆಟ್ ಈ ದಾಖಲೆ ನಿರ್ಮಿಸುವ ಈ ಅವಕಾಶವಿತ್ತು. ಆದರೆ ಈ ಪಂದದಲ್ಲಿ ಒಂದು ವಿಕೆಟ್ ಮಾತ್ರ ಕೀಳಲು ಸಾಧ್ಯವಾಗಿತ್ತು. ಭಾನುವಾರ ನಡೆಯುವ ದ್ವಿತೀಯ ಪಂದ್ಯದಲ್ಲಿ ಒಂದು ವಿಕೆಟ್ ಪಡೆದರೆ ಈ ಮೈಲುಗಲ್ಲು ತಲುಪಲಿದ್ದಾರೆ. ಜತೆಗೆ 50 ವಿಕೆಟ್‌ಗಳನ್ನು ಪೂರ್ತಿಗೊಳಿಸಿದ 5ನೇ ಭಾರತೀಯ ಆಟಗಾರ(Team India Cricket Player) ಎನಿಸಿಕೊಳ್ಳಲಿದ್ದಾರೆ. ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಜೂಲನ್ ಗೋಸ್ವಾಮಿ ಉಳಿದ ನಾಲ್ವರು ಈ ಸಾಧನೆ ಮಾಡಿದ ಭಾರತೀಯ ಆಟಗಾರರಾಗಿದ್ದಾರೆ.