ಮುಂಬಯಿ : ಜಸ್‌ಪ್ರಿತ್ ಬುಮ್ರಾ ವಿಚಾರದಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅವಸರ ಮಾಡಿತು. ಹೀಗಾಗಿ ಅವರ ಸೇವೆಯನ್ನೇ ಕಳೆದುಕೊಳ್ಳುವಂತಾಗಿದೆ ಎಂಬುದಾಗಿ ಭಾರತ ತಂಡದ ಹಿರಿಯ ಬ್ಯಾಟರ್ ವಾಸಿಮ್ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ಅವರನ್ನು ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಆಡಿಸಿದ್ದೇ ತಪ್ಪಾಯ್ತು ಎಂಬುದು ಅವರ ಮಾತಿನ ತಾತ್ಪರ್ಯ.
ಕಳೆದ ಏಷ್ಯಾ ಕಪ್ ಟೂರ್ನಿಗೆ ಜಸ್‌ಪ್ರಿತ್ ಬುಮ್ರಾ ಅವರು ಅಲಭ್ಯರಾಗಿದ್ದರು. ಅವರಿಗೆ ಆ ವೇಳೆ ಬೆನ್ನು ನೋವಿನ ಸಮಸ್ಯೆ ಉಂಟಾಗಿತ್ತು. ಟಿ೨೦ ವಿಶ್ವ ಕಪ್‌ಗೆ ಮೊದಲು ಅವರನ್ನು ಸಜ್ಜುಗೊಳಿಸುವ ಉದ್ದೇಶದಿಂದ ವಿಶ್ರಾಂತಿ ಕಲ್ಪಿಸಲಾಗಿತ್ತು. ಆದರೆ, ಆ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಗೆ ಆಯ್ಕೆಯಾಗಿದ್ದರು. ಆದಾಗ್ಯೂ ಅವರನ್ನು ಮೊದಲ ಪಂದ್ಯದಲ್ಲಿ ಆಡಿಸಿರಲಿಲ್ಲ. ಮುಂದಿನೆರಡು ಹಣಾಹಣಿಗಳಲ್ಲಿ ಕಣಕ್ಕೆ ಇಳಿದಿದ್ದರು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಪಂದ್ಯದ ಕೊನೇ ಕ್ಷಣದಲ್ಲಿ ಅವರು ಅಲಭ್ಯರಾಗುತ್ತಾರೆ ಎಂದು ನಾಯಕ ರೋಹಿತ್ ಶರ್ಮ ಹೇಳಿದ್ದರು.
ಜಾಫರ್ ಅವರ ಪ್ರಕಾರ ಬುಮ್ರಾ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡಿಸಬಾರದಿತ್ತು. ಅವರು ಸಂಪೂರ್ಣವಾಗಿ ಗುಣಮುಖರಾಗದ ಹೊರತು ಕಣಕ್ಕೆ ಇಳಿಸಲಾಗಿದೆ. ಹೀಗಾಗಿ ಸಮಸ್ಯೆ ಉಲ್ಬಣಗೊಂಡಿದೆ. ಟಿ೨೦ ವಿಶ್ವ ಕಪ್‌ಗೆ ಮೊದಲು ಯಾವುದೇ ಸರಣಿಯಲ್ಲಿ ಆಡಿಸಬಾರದಿತ್ತು ಎಂಬುದಾಗಿ ಅವರು ಹೇಳಿದ್ದಾರೆ.
“ಬುಮ್ರಾ ಅವರು ಸಂಪೂರ್ಣವಾಗಿ ಸಿದ್ಧಗೊಂಡಿರಲಿಲ್ಲ. ಒತ್ತಡದಲ್ಲೇ ಅವರನ್ನು ಕಣಕ್ಕೆ ಇಳಿಸಲಾಗಿದೆ. ಅದರ ಪರಿಣಾಮ ಬೆನ್ನು ನೋವು ಹೆಚ್ಚಾಗಿದೆ. ಅವರಿಗೆ ಸಾಕಷ್ಟು ಕಾಲಾವಕಾಶ ನೀಡಿದ ಬಳಿಕ ಟಿ೨೦ ವಿಶ್ವ ಕಪ್‌ನಲ್ಲಿ ಆಡಿಸಬೇಕಾಗಿತ್ತು,” ಎಂಬುದಾಗಿ ಅವರು ಹೇಳಿದ್ದಾರೆ.
ಬುಮ್ರಾ ಅವರು ವಿಶ್ವಕಪ್‌ಗೆ ಅಲಭ್ಯರಾಗಿದ್ದಾರೆ ಎಂಬುದಾಗಿ ಗುರುವಾರ ಪ್ರಕಟಿಸಲಾಗಿತ್ತು. ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಶಸ್ತ್ರಚಿಕಿತ್ಸೆ ಇಲ್ಲದೇ ೩ರಿಂದ ೪ ತಿಂಗಳು ವಿಶ್ರಾಂತಿ ಬೇಕಾಗಬಹುದು ಎಂಬುದಾಗಿ ಹೇಳಲಾಗಿದೆ.
ಇದನ್ನೂ ಓದಿ | Jasprit Bumrah | ಮೂಳೆ ಮುರಿತ, ಟಿ-20 ವಿಶ್ವಕಪ್‌ನಿಂದಲೇ ಜಸ್‌ಪ್ರಿತ್ ಬುಮ್ರಾ ಔಟ್