ನವದೆಹಲಿ: ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ಸರಣಿಯಲ್ಲಿ ಪುನರಾಗಮನ ಮಾಡಲು ಸಜ್ಜಾಗಿರುವುದರಿಂದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ 2023ರ ಐಸಿಸಿ ವಿಶ್ವ ಕಪ್ ಸಿದ್ಧತೆಗಳಿಗೆ ಭಾರಿ ಉತ್ತೇಜನ ನೀಡಿದಂತಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಐರ್ಲೆಂಡ್ (ಯುಕೆ) ಪ್ರವಾಸಕ್ಕಾಗಿ ಭಾರತ ತಂಡವನ್ನು ಪ್ರಕಟಿಸಿದೆ. ಅದರಲ್ಲಿ ಬುಮ್ರಾ ಆಯ್ಕೆಯಾಗುವ ಜತೆಗೆ ತಂಡದ ನಾಯಕತ್ವವನ್ನು ಪಡೆದುಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023, ಏಷ್ಯಾ ಕಪ್ 2022 ಮತ್ತು ಟಿ 20 ವಿಶ್ವಕಪ್ನ ಸಂಪೂರ್ಣ ಆವೃತ್ತಿಗಳಿಂದ ಹೊರಗುಳಿದಿದ್ದ ಬುಮ್ರಾ ಚೇತರಿಸಿಕೊಳ್ಳುವ ಅಂತಿಮ ಹಂತದಲ್ಲಿದ್ದಾರೆ ಎಂದು ನಂಬಲಾಗಿತ್ತು . ಭಾರತೀಯ ವೇಗಿ ಕಳೆದ ವರ್ಷ ಬೆನ್ನು ನೋವಿನ ಸಮಸ್ಯೆ ಒಳಗಾಗಿದ್ದರು. ಕೆಲವು ತಿಂಗಳ ಹಿಂದೆ ನ್ಯೂಜಿಲ್ಯಾಂಡ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವರ್ಷದ ಮಾರ್ಚ್ನಲ್ಲಿ ಬೆನ್ನು ಶಸ್ತ್ರಚಿಕಿತ್ಸೆಯ ನಂತರ ಬುಮ್ರಾ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಪುನಶ್ಚೇತನಗೊಳಿಸಲಾಯಿತು. ಐರ್ಲೆಂಡ್ ಸರಣಿಗೆ ಬುಮ್ರಾ ಭಾರತ ತಂಡದ ಭಾಗವಾಗಲಿದ್ದಾರೆ ಎಂದು ಮಂಡಳಿಯ ಕಾರ್ಯದರ್ಶಿ ಜಯ್ ಶಾ ಸುಳಿವು ನೀಡಿದ ನಂತರ ಇದೀಗ ಅವರ ಪ್ರವೇಶ ಖಚಿತವಾಗಿದೆ.
ವಿಶ್ವಕಪ್ಗೆ ಇನ್ನೇನು ಕೆಲವು ದಿನಗಳು ಬಾಕಿ ಇರುವಂತೆಯೇ ಬುಮ್ರಾ ಎನ್ಸಿಎನ್ನಲ್ಲಿ ತಮ್ಮ ಫಿಟ್ನೆಸ್ ಅನ್ನು ಪ್ರದರ್ಶಿಸಿದ್ದರು. ಸ್ಟಾರ್ ವೇಗಿ ಕೊನೆಯ ಬಾರಿಗೆ ಜುಲೈ 2022ರಲ್ಲಿ ಏಕದಿನ ಪಂದ್ಯವನ್ನು ಆಡಿದ್ದರು. ಕಳೆದ ಸೆಪ್ಟೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಆಡಿದ್ದರು. ಬಳಿಕ ಯುಎಇಯಲ್ಲಿ ನಡೆದ ಏಷ್ಯಾ ಕಪ್ ಮತ್ತು ಕಳೆದ ವರ್ಷ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸಂಪೂರ್ಣ ಟಿ20 ವಿಶ್ವ ಕಪ್ನಿಂದ ಹೊರಗುಳಿದಿದ್ದರು.
ಸ್ಟಾರ್ ವೇಗಿ ಬುಮ್ರಾ 10 ತಿಂಗಳ ಕಾಲ ಹೊರಗುಳಿದಿದ್ದರಿಂದ ಈ ವರ್ಷ ಭಾರತದ ಸಂಪೂರ್ಣ ತವರಿನ ಋತುವನ್ನು ಕಳೆದುಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 29 ವರ್ಷದ ವೇಗದ ಬೌಲರ್ ಇಲ್ಲದೆ ಭಾರತ ಕಾರ್ಯನಿರ್ವಹಿಸಿತ್ತು. ಶ್ರೀಲಂಕಾ ಸರಣಿಗೆ ಬುಮ್ರಾ ಅವರನ್ನು ಭಾರತ ತಂಡದಲ್ಲಿ ಹೆಸರಿಸಲಾಗಿದ್ದರೂ, ಬೆನ್ನು ನೋವು ಪುನರಾವರ್ತನೆಯಾದ ಕಾರಣ ಪುನರಾಗಮನ ಸಾಧ್ಯವಾಗಲಿಲ್ಲ. ವೇಗಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಅಲಭ್ಯರಾಗಿದ್ದರು. ಬಳಿಕ ಕೆರಿಬಿಯನ್ ಪ್ರವಾಸವನ್ನು ತಪ್ಪಿಸಿಕೊಂಡರು.
ಋತುರಾಜ್ ಉಪನಾಯಕ
ನಾಯಕನಾಗಿ ಮರಳಿರುವ ಬುಮ್ರಾಗೆ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಸಹಾಯ ಮಾಡಲಿದ್ದು, ಅವರನ್ನು ಐರ್ಲೆಂಡ್ ಸರಣಿಗೆ ಉಪನಾಯಕನನ್ನಾಗಿ ಹೆಸರಿಸಲಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವು ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಅವರನ್ನು ಐರ್ಲೆಂಡ್ ಸರಣಿಯ ಎರಡನೇ ಮಾದರಿಯ ತಂಡದಲ್ಲಿ ಹೆಸರಿಸಿದೆ. ಮುಂದಿನ ತಿಂಗಳು ಆಗಸ್ಟ್ 18, 20 ಮತ್ತು 23 ರಂದು ಬುಮ್ರಾ ನೇತೃತ್ವದ ಟೀಮ್ ಇಂಡಿಯಾ ಆತಿಥೇಯ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ 20 ಐ ಸರಣಿಯನ್ನು ಆಡಲಿದೆ.
ಐರ್ಲೆಂಡ್ ಸರಣಿಗೆ ಭಾರತ ತಂಡ
ಜಸ್ಪ್ರೀತ್ ಬುಮ್ರಾ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.