ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah) ಅವರು ತಂದೆಯಾದ ಸಂಭ್ರದಲ್ಲಿದ್ದಾರೆ. ಪತ್ನಿ ಸಂಜನಾ ಗಣೇಶನ್(Sanjana Ganesan) ಅವರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯಾದ ಈ ವಿಚಾರವನ್ನು ಬುಮ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಏಷ್ಯಾಕಪ್ನಲ್ಲಿ (Asia Cup 2023) ಭಾರತ ಪರ ಆಡುತ್ತಿದ್ದ ಬುಮ್ರಾ ಮೊದಲ ಮಗುವಿನ ನಿರೀಕ್ಷೆಯಲ್ಲಿ ನೇಪಾಳ ವಿರುದ್ಧ ಇಂದು ನಡೆಯಬೇಕಿದ್ದ ಪಂದ್ಯಕ್ಕೆ ಒಂದು ದಿನ ಮುನ್ನ ಅಂದರೆ, ಭಾನುವಾರ ಟೂರ್ನಿಯನ್ನು ಮೊಟಕುಗೊಳಿಸಿ ಭಾರತಕ್ಕೆ ವಾಪಸ್ ಆಗಿದ್ದರು. ಇದೀಗ ಭಾರತಕ್ಕೆ ಬಂದು ಶುಭ ಸುದ್ದಿಯನ್ನು ನೀಡಿದ್ದಾರೆ.
ಮಗುವಿನ ಹೆಸರು ಅಂಗದ್
ಮಗುವಿನ ಹೆಸರನ್ನು ಕೂಡ ಬುಮ್ರಾ ಅವರು ಬಹಿರಂಗಪಡಿಸಿದ್ದಾರೆ. ಮಗುವಿಗೆ ‘ಅಂಗದ್(Angad) ಜಸ್ಪ್ರೀತ್ ಬುಮ್ರಾ’ ಎಂದು ಹೆಸರಿಟ್ಟಿರುವುದಾಗಿ ಅವರು ತಿಳಿಸಿದ್ದಾರೆ. “ಇಂದು ಮುಂಜಾನೆ ನಮ್ಮ ಮನೆಗೆ ಪುಟ್ಟ ಅತಿಥಿಯ ಆಗಮನವಾಗಿದೆ. ನಾವೀಗ ಚಂದ್ರನ ಮೇಲೆ ತೇಲುತ್ತಿದ್ದೇವೆ. ಹೊಸ ಸದಸ್ಯರೊಂದಿಗೆ ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸಲು ಕಾತುರರಾಗಿದ್ದೇವೆ” ಎಂದು ಬುಮ್ರಾ ಬರೆದುಕೊಂಡಿದ್ದಾರೆ.
ಅಂಗದ್ ಹೆಸರಿನ ಅರ್ಥ
ಅಂಗದ್ ಎಂದರೆ ಯೋಧ ಎಂದರ್ಥ. ರಾಮಾಯಣದಲ್ಲಿ ಬರುವ ವಾಲಿಯ ಪುತ್ರನ ಹೆಸರು ಕೂಡ ಅಂಗದ್. ಇದೇ ಹೆಸರನ್ನು ಬುಮ್ರಾ ಅವರು ತಮ್ಮ ಮಗನಿಗೆ ಇಟ್ಟಿದ್ದಾರೆ.
ಇದನ್ನೂ ಓದಿ Asia Cup 2023 : ಏಕಾಏಕಿ ಲಂಕಾದಿಂದ ವಾಪಸ್ ಬಂದ ವೇಗಿ ಜಸ್ಪ್ರಿತ್ ಬುಮ್ರಾ; ಮತ್ತೆ ಗಾಯಗೊಂಡರೇ?
ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಮತ್ತು ಬುಮ್ರಾ ಅವರು 2021 ಮಾರ್ಚ್ 15ರಂದು ಗೋವಾದಲ್ಲಿ ಮದುವೆಯಾಗಿದ್ದರು. ಮಹಾರಾಷ್ಟ್ರದವರಾದ ಸಂಜನಾ 2014ರ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್ ತಲುಪಿದ್ದರು.
ತೀವ್ರ ಸ್ವರೂಪದ ಬೆನ್ನು ನೋವಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿ 11 ತಿಂಗಳ ಬಳಿಕ ಬುಮ್ರಾ ಅವರು ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದರು. ಬುಮ್ರಾ ಅವರು ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡ್ನ ಕ್ರೈಸ್ಟ್‌ಚರ್ಚ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯದ ಭಾರತ ಪ್ರವಾಸದಲ್ಲಿ 29 ರ ಹರೆಯದ ವೇಗಿ ಎರಡು ಟಿ20 ಪಂದ್ಯಗಳನ್ನು ಆಡಿದ ನಂತರ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು. ಏಷ್ಯಾ ಕಪ್, ಟಿ20 ವಿಶ್ವಕಪ್ ಐಪಿಎಲ್ ಸೇರಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕೂಡ ಆಡಲು ಸಾಧ್ಯವಾಗಿರಲಿಲ್ಲ.