Site icon Vistara News

Javed Miandad: ಪಾತಕಿ ದಾವೂದ್ ಇಬ್ರಾಹಿಂ ಮಗಳ ಜತೆ ತನ್ನ ಮಗನ ಮದುವೆ ಅಭಿಮಾನದ ಸಂಗತಿ ಎಂದ ಮಿಯಾಂದಾದ್‌!

Javed Miandad (L) has family ties with Dawood Ibrahim

ಕರಾಚಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌(Javed Miandad) ಅವರು ಭೂಗತ ಪಾತಕಿ, ಭಾರತಕ್ಕೆ ಬೇಕಾಗಿರುವ ಮೋಸ್ಟ್‌ ವಾಂಟೆಡ್‌ ಉಗ್ರ(underworld don) ದಾವೂದ್‌ ಇಬ್ರಾಹಿಂ (Dawood Ibrahim) ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ದಾವೂದ್​ ಮುಸ್ಲಿಮರಿಗಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೊಗಳಿದ್ದಾರೆ. ಪಾಕಿಸ್ತಾನಿ ಪತ್ರಕರ್ತ ಹಸನ್ ನಿಸಾರ್(Pakistani journalist Hassan Nisar) ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಿಯಾಂದಾದ್ ಈ ಹೇಳಿಕೆ ನೀಡಿದ್ದಾರೆ.

ಜಾವೇದ್‌ ಮಿಯಾಂದಾದ್‌ ಅವರು ದಾವೂದ್ ಇಬ್ರಾಹಿಂ ಅವರ ಸಂಬಂಧಿಯೂ ಆಗಿದ್ದಾರೆ. ದಾವೂದ್ ಮಗಳನ್ನು ಮದುವೆಯಾಗಿದ್ದು ಮಿಯಾಂದಾದ್‌ ಮಗ. ಹೀಗಾಗಿ ಇವರಿಬ್ಬರು ಸಂಬಂಧಿಗಳು. ಈ ವಿಚಾರವಾಗಿಯೂ ಮಾತನಾಡಿದ ಮಿಯಾಂದಾದ್‌, “ನನಗೆ ದಾವೂದ್​ ಬಹಳ ಸಮಯದಿಂದ ಪರಿಚಿತರು. ಅವರ ಮಗಳು ನನ್ನ ಮಗನನ್ನು ಮದುವೆಯಾದದ್ದು ನನಗೆ ಗೌರವವಾಗಿದೆ” ಎಂದು ಹೇಳಿದರು. ಮಿಯಾಂದಾದ್‌ನ ಮಗ ಜುನೈದ್ ದಾವೂದ್‌ನ ಮಗಳು ಮಹ್ರುಖ್‌ಳನ್ನು 2005 ರಲ್ಲಿ ದುಬೈನಲ್ಲಿ ಮದುವೆಯಾಗಿದ್ದರು.

1993ರ ಮುಂಬೈ ಸ್ಫೋಟದಿಂದ ಹಿಡಿದು 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಸೇರಿದಂತೆ ಹಲವು ಘೋರ ಅಪರಾಧಗಳ ಮಾಸ್ಟರ್ ಮೈಂಡ್ ಈತ. ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳ ಸಾಗಣೆ, ನಕಲಿ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲೂ ಭಾಗಿಯಾಗಿದ್ದ. ದಾವೂದ್ ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದು, ಭಾರತ ಮತ್ತು ಅಮೆರಿಕ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿವೆ. ಇಂಟರ್‌ಪೋಲ್‌ನ ರೆಡ್ ನೋಟಿಸ್ ಪಟ್ಟಿಯಲ್ಲಿಯೂ ಆತನ ಹೆಸರಿದ್ದು, ದಾವೂದ್‌ ತಲೆಗೆ 25 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಲಾಗಿದೆ.

ಇದನ್ನೂ ಓದಿ IPL 2024: ಕೊಹ್ಲಿಯನ್ನು ಐಪಿಎಲ್​ನಿಂದ ಬ್ಯಾನ್​ ಮಾಡಿ; ಕೆ.ಎಲ್​ ರಾಹುಲ್ ​ಆಗ್ರಹ

ದಾವೂದ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ (ISI) ಮತ್ತು ಭಯೋತ್ಪಾದಕ ಗುಂಪು ಲಷ್ಕರ್-ಎ-ತಯ್ಬಾ (Lashkar-e-Taiba)ದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ ಅನೇಕ ನಕಲಿ ಪಾಸ್‌ಪೋರ್ಟ್‌ ಹೊಂದಿದ್ದಾನೆ ಮತ್ತು ಪದೇಪದೆ ತನ್ನ ವಾಸಸ್ಥಳವನ್ನು ಬದಲಾಯಿಸುತ್ತಾನೆ ಎಂದು ಊಹಿಸಲಾಗಿದೆ. ಈತ ಪಾಕಿಸ್ತಾನದ ಕರಾಚಿಯಲ್ಲಿ ಶೇಖ್ ದಾವೂದ್ ಹಸನ್ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಕೆಲ ತಿಂಗಳ ಹಿಂದಷ್ಟೇ ದಾವೂದ್‌ ಇಬ್ರಾಹಿಂಗೆ ವಿಷಪ್ರಾಶನ ಮಾಡಿಸಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿತ್ತು.

ಮಂಗನಂತೆ ಕುಣಿದಿದ್ದ ಮಿಯಾಂದಾದ್

ಅದು 1992ರ ವಿಶ್ವಕಪ್​ ಕೂಡದ ಸಿಡ್ನಿಯಲ್ಲಿ ನಡೆದ ಲೀಗ್‌ ಪಂದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳ ಮೊದಲ ವಿಶ್ವಕಪ್​ ಮುಖಾಮುಖಿ ಇದಾಗಿತ್ತು. ಇದಕ್ಕೂ ಮುನ್ನ ನಡೆದ ಮೂರು ವಿಶ್ವಕಪ್​ ಪಂದ್ಯಗಳಲ್ಲಿ ಇತ್ತಂಡಗಳು ಒಮ್ಮೇಯೂ ಮುಖಾಮುಖಿಯಾಗಿರಲಿಲ್ಲ. ಈ ಪಂದ್ಯದಲ್ಲಿ ಜಾವೇದ್‌ ಮಿಯಾಂದಾದ್‌ ಕೀಪರ್‌ ಕಿರಣ್‌ ಮೋರೆ ಅವರನ್ನು ಅಣಕಿಸಲು ಮಂಗನಂತೆ ಕುಣಿದಿದ್ದರು.

ಈ ಪಂದ್ಯದಲ್ಲಿ ಭಾರತದ ಕೀಪರ್‌ ಕಿರಣ್‌ ಮೋರೆ ಅವರು ವಿಪರೀತ ಅಪೀಲು ಮಾಡುತ್ತಿದ್ದರು. ಇದನ್ನು ಸಹಿಸಲಾಗದೇ ಕ್ರೀಸ್‌ನಲ್ಲಿದ್ದ ಮಿಯಾಂದಾದ್‌ ಅಂಪೈರ್​ಗೆ ದೂರು ಸಲ್ಲಿಸಿ ಬ್ಯಾಟಿಂಗಿಗೆ ಸಜ್ಜಾಗಿದ್ದರು. 25ನೇ ಓವರ್​ ಎಸೆಯಲು ಬಂದ ಸಚಿನ್‌ ತೆಂಡೂಲ್ಕರ್​ ಅವರ ಎಸೆತವೊಂದನ್ನು ಮಿಯಾಂದಾದ್‌ ಕವರ್‌ ವಿಭಾಗದತ್ತ ಬಾರಿಸಿದರು. ರನ್​ಗಾಗಿ ಓಡಿದರೂ ಚೆಂಡು ಕ್ಷೇತ್ರರಕ್ಷಕನ ಕೈ ಸೇರಿದ್ದರಿಂದ ಮತ್ತೆ ಕ್ರೀಸ್​ನತ್ತ ಮರಳಿದರು. ಆಗ ಚೆಂಡನ್ನು ಪಡೆದ ಮೋರೆ ಮತ್ತೆ ಸ್ಟಂಪ್ಸ್‌ ಎಗರಿಸಿ ರನೌಟ್‌ಗೆ ಅಪೀಲು ಮಾಡಿದರು. ರನೌಟ್‌ ಅಲ್ಲದಿದ್ದರೂ ಅಪೀಲು ಮಾಡಿದ್ದು ಮಿಯಾಂದಾದ್​ಗೆ ಪಿತ್ತ ನೆತ್ತಿಗೇರುವಂತೆ ಮಾಡಿತು. ಬ್ಯಾಟನ್ನು ಎರಡೂ ಕೈಗಳಿಂದ ಅಡ್ಡವಾಗಿ ಹಿಡಿದ ಮಿಯಾಂದಾದ್‌ ಮೋರೆಯತ್ತ ತಿರುಗಿ ಮಂಗನಂತೆ ಮೂರು ಸಲ ಕುಪ್ಪಳಿಸಿದರು. ಈ ಮೂಲಕ ಮೋರೆಯನ್ನು ಅಣಕಿದರು. ಮೈದಾನದಲ್ಲಿದ್ದ ಎಲ್ಲರಿಗೂ ಮಿಯಾಂದಾದ್‌ ಅವರ ಈ ಮಂಗನಾಟ ವಿಚಿತ್ರವಾಗಿ ಮತ್ತು ತಮಾಷೆಯಾಗಿ ಕಂಡಿತು. ಈಗಲೂ ಕೂಡ ಭಾರತ-ಪಾಕ್​​ ಪಂದ್ಯ ಎಂದರೆ ಈ ಘಟನೆ ಮತ್ತೊಮ್ಮೆ ಕಣ್ಣಮುಂದೆ ಬರುತ್ತದೆ

Exit mobile version