Site icon Vistara News

Asia Cup 2023 | ಏಷ್ಯಾ ಕಪ್‌ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂದ ಜಯ್‌ ಶಾ

ಮುಂಬಯಿ : ಪಾಕಿಸ್ತಾನದ ಅತಿಥ್ಯದಲ್ಲಿ ೨೦೨೩ರಲ್ಲಿ ನಡೆಯಲಿರುವ ಏಷ್ಯಾ ಕಪ್‌ನಲ್ಲಿ ಪಾಲ್ಗೊಳ್ಳಲು ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಹೇಳಿದ್ದಾರೆ. ಮಂಗಳವಾರ ಮುಂಬಯಿಯಲ್ಲಿ ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯ ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು ಭಾರತ ತಂಡ ಪಾಕ್‌ಗೆ ಪ್ರಯಾಣ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಮುಂದಿನ ವರ್ಷದ ಏಷ್ಯಾ ಕಪ್‌ ಹಾಗೂ ೨೦೨೫ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ನಡೆಸುವ ಆತಿಥ್ಯ ಲಭಿಸಿತ್ತು. ಹೀಗಾಗಿ ರಾಜಕೀಯ ವೈರತ್ವ ಹೊಂದಿರುವ ಪಾಕಿಸ್ತಾನದ ನೆಲಕ್ಕೆ ಭಾರತ ತಂಡ ಕಾಲಿಡುವುದೇ ಎಂಬ ಪ್ರಶ್ನೆ ಎದ್ದಿತ್ತು. ಕೆಲವು ದಿನಗಳ ಹಿಂದೆ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಸಿದ್ಧವಿದೆ ಎಂಬುದಾಗಿ ವರದಿಯಾಗಿತ್ತು.ಆ ಎಲ್ಲ ಕೌತುಕಗಳಿಗೆ ಜಯ್‌ ಶಾ ತೆರೆ ಎಳೆದಿದ್ದಾರೆ.

“ಮುಂದಿನ ವರ್ಷದ ಏಷ್ಯಾ ಕಪ್‌ ತಟಸ್ಥ ತಾಣದಲ್ಲಿ ನಡೆಯಲಿದೆ. ಅಂತೆಯೇ ಪಾಕಿಸ್ತಾನಕ್ಕೆ ಭಾರತ ತಂಡ ಪ್ರವಾಸ ಮಾಡುವುದೇ, ಇಲ್ಲವೇ ಎಂಬುದನ್ನು ಸರಕಾರ ನಿರ್ಧರಿಸಲಿದೆ. ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ತಟಸ್ಥ ಸ್ಥಳದಲ್ಲಿ ನಡೆಯುವ ಕಾರಣ ಪ್ರವಾಸ ಮಾಡುವ ಪ್ರಮೇಯ ಬರುವುದಿಲ್ಲ,” ಎಂಬುದಾಗಿ ಜಯ್‌ ಶಾ ಹೇಳಿದ್ದಾರೆ.

“೨೦೨೫ರ ಚಾಂಪಿಯನ್ಸ್‌ ಟ್ರೋಫಿಗೆ ಇನ್ನಷ್ಟು ವರ್ಷಗಳು ಬಾಕಿ ಇವೆ. ಅದರ ಬಗ್ಗೆ ತಕ್ಷಣವೇ ಪ್ರತಿಕ್ರಿಯೆ ನೀಡುವುದಿಲ್ಲ,” ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ | Team India | ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ ಬಿಸಿಸಿಐ

Exit mobile version