ಮುಂಬಯಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ(Jay Shah) ಅವರು ತಮ್ಮ ಈ ಹುದ್ದೆಯನ್ನು ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಐಸಿಸಿಯ(ICC) ಹೊಸ ಅಧ್ಯಕ್ಷರ ಚುನಾವಣೆಗೆ ಜಯ್ ಶಾ ಸ್ಪರ್ಧಿಸಲಿರುವ ಕಾರಣದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಐಸಿಸಿ ಚುನಾವಣೆ ಇದೇ ವರ್ಷ ನವೆಂಬರ್ನಲ್ಲಿ ನಡೆಯಲಿದೆ.
ಈಗಾಗಲೇ ಜಯ್ ಶಾ ಬಿಸಿಸಿಐ ಜತೆಗೆ ಐಸಿಸಿ ಸಮಿತಿಯಲ್ಲಿ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಮಾತ್ರವಲ್ಲದೆ ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿದ್ದಾರೆ. ಇದೀಗ ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈ ಹಿಂದೆಯೂ ಹಲವು ಬಾರಿ ಜಯ್ ಶಾ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ಸ್ಪಧಿಸಿರಲಿಲ್ಲ. ಈ ಬಾರಿ ಖಚಿತ ಎಂದು ಜಯ್ ಶಾ ಆಪ್ತ ಮೂಲಗಳು ಮಾಹಿತಿ ನೀಡಿದೆ. ಜಯ್ ಶಾ 2019 ರಲ್ಲಿ ಬಿಸಿಸಿಐ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಂಡಿದ್ದರು.
ಇದನ್ನೂ ಓದಿ Jay Shah: ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತಾ ನಿಂತ ಜಯ್ ಶಾ; ವಿಡಿಯೊ ವೈರಲ್
35 ವರ್ಷದ ಜಯ್ ಶಾ ಒಂದೊಮ್ಮೆ ಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷರಾದ ಗೌರವಕ್ಕೆ ಪಾತ್ರರಾಗಲಿದ್ದಾರೆ. ಪ್ರಸ್ತುತ ಐಸಿಸಿ ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಅಧಿಕಾರದಲ್ಲಿದ್ದಾರೆ. 2020ರಲ್ಲಿ ಈ ಸ್ಥಾನಕ್ಕೆ ಇವರು ಆಯ್ಕೆ ಆಗಿದ್ದರು. ಈ ವರ್ಷ ಅವರ ಅಧಿಕಾರಾವಧಿ ಕೊನೆಯಾಗಲಿದೆ.
ಜಯ್ ಶಾ ನಾಯಕತ್ವವು ವಿಶ್ವಾದ್ಯಂತ ಕ್ರಿಕೆಟ್‌ನಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದೆ. ಐಸಿಸಿ ಪುರುಷರ ವಿಶ್ವಕಪನ್ನು ಅವರು ಹೊಸ ಎತ್ತರಕ್ಕೆ ಮುನ್ನಡೆಸಿದ್ದಾರೆ. ಲಿಂಗ ಸಮಾನತೆಯನ್ನು ತರುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ಆಟಗಾರ್ತಿಯರಿಗೆ ಸಮಾನ ವೇತನ ಪದ್ಧತಿಯನ್ನು ಕೂಡ ಇವರ ಕಾರ್ಯವಧಿಯಲ್ಲಿ ಜಾರಿಗೆ ತರಲಾಗಿತ್ತು. ಮತ್ತು ಮಹಿಳಾ ಪ್ರೀಮಿಯರ್ ಲೀಗ್‌ನ ರಚನೆ, ಒಲಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ, ಹೀಗೆ ಅನೇಕ ಕಾರ್ಯಗಳ ಮೂಲಕ ಕ್ರಿಕೆಟ್ ಕ್ಷೇತ್ರದಲ್ಲಿ ಬದಲಾವಣೆಯನ್ನು ಮಾಡಿದ್ದಾರೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರಾದ ಅತ್ಯಂತ ಕಿರಿಯ ಎನ್ನುವ ಹೆಗ್ಗಳಿಕೆಯೂ ಜಯ್ ಶಾ ಅವರದ್ದಾಗಿದೆ. ಭಾರತದ ದೇಶೀಯ ಕ್ರಿಕೆಟ್ ಭವಿಷ್ಯವನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಜಯ್ ಶಾ ಹಲವು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಪಾಕ್‌ಗೆ ಭಾರತ ಹೋಗಲ್ಲ; ಜಯ್ ಶಾ
2025ರಲ್ಲಿ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಜಯ್ ಶಾ ಹೇಳಿದ್ದಾರೆ. ಕೆಲದಿನಗಳ ಹಿಂದಷ್ಟೇ ಚಾಂಪಿಯನ್ಸ್ ಟ್ರೋಫಿಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಮಾ.1ಕ್ಕೆ ಲಾಹೋರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ನಿಗದಿ ಮಾಡಿತ್ತು. ಆದರೆ, ಭದ್ರತೆಯ ಕಾರಣವನ್ನು ನೀಡಿರುವ ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದೆ ಎಂದು ವರದಿಗಳು ತಿಳಿಸಿವೆ.