ನವದೆಹಲಿ: ಬಿಸಿಸಿಐ(BCCI Secretary Jay) ಕಾರ್ಯದರ್ಶಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ(ACC President Jay Shah) ಆಗಿರುವ ಜಯ್ ಶಾ(Jay Shah) ಅವರು ಇನ್ನೊಂದು ವರ್ಷ ಅಧಿಕಾರಾವಧಿ ಇದ್ದರೂ ಕೂಡ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಸ್ಥಾನವನ್ನು ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಅವರು ಐಸಿಸಿ(ICC) ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಾಳೆ (ಜನವರಿ 31) ಹಾಗೂ ನಾಳಿದ್ದು (ಫೆಬ್ರವರಿ 1) ಇಂಡೋನೇಷ್ಯಾದ ಬಾಲಿಯಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಏಷ್ಯಾಕಪ್ ಕ್ರಿಕೆಟ್ ಮಾದರಿ, ಆತಿಥ್ಯದ ಬಗ್ಗೆ ಮಹತ್ವದ ಚರ್ಚೆಯಾಗಲಿದೆ. ಜತೆಗೆ ಎಸಿಸಿ ಅಧ್ಯಕ್ಷರಾಗಿರುವ ಜಯ್ ಶಾ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಎಸಿಸಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರತಿ 2 ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಜಯ್ ಶಾ ಅಧಿಕಾರಾವಧಿ ಇನ್ನೂ ಒಂದು ವರ್ಷ ಬಾಕಿ ಇದೆ. ಇದೇ ವರ್ಷ ಐಸಿಸಿ ಅಧ್ಯಕ್ಷೀಯ ಚುನಾವಣೆ ಕೂಡ ನಡೆಯಲಿದೆ. ಈ ಹುದ್ದೆ ಮೇಲೆ ಕಣ್ಣಿಟ್ಟಿರುವ ಕಾರಣದಿಂದ ಅವರು ಒಂದು ವರ್ಷ ಮುಂಚಿತವಾಗಿ ಎಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಜಯ್ ಶಾ ಎಲ್ಲಿಯೂ ಇದುವರೆಗೆ ತುಟಿ ಬಿಚ್ಚಿಲ್ಲ. ಈ ವರ್ಷದ ನವೆಂಬರ್‌ನಲ್ಲಿ ಐಸಿಸಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ ಜಯ್ ಶಾ ಬ್ಲ್ಯಾಕ್ ಮ್ಯಾಜಿಕ್ನಿಂದ ಪಾಕ್ಗೆ ಸೋಲು; ಟಿವಿ ನಿರೂಪಕಿ ಗಂಭೀರ ಆರೋಪ
ಎಲ್ಲ ಅನುಮಾನಗಳಿಗೆ ಇನ್ನೆರಡು ದಿನಗಳ ಕಾಲ ನಡೆಯುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ವಾರ್ಷಿಕ ಸಭೆಯಲ್ಲಿ ಉತ್ತರ ಸಿಗಲಿದೆ. ಒಂದೊಮ್ಮೆ ಜಯ್ ಶಾ ಅವರು ರಾಜೀನಾಮೆ ನೀಡಿದ್ದೇ ಆದಲ್ಲಿ ಅವರು ಐಸಿಸಿಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎನ್ನಬಹುದು. ಅಥವಾ ನುನಾವಣೆಗೆ ಒಂದೆರಡು ತಿಂಗಳುಗಳು ಬಾಕಿ ಇರುವಾಗ ಹಠಾತ್ ಆಗಿ ಈ ಎಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬಹುದು.
ಸುಳಿವು ನೀಡಿದ ಬಿಸಿಸಿಐ ಟ್ವಿಟರ್ ಎಕ್ಸ್ ಫೋಸ್ಟ್
ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ “ಜಯ್ ಶಾ ನಾಯಕತ್ವವು ವಿಶ್ವಾದ್ಯಂತ ಕ್ರಿಕೆಟ್‌ನಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದೆ. ಐಸಿಸಿ ಪುರುಷರ ವಿಶ್ವಕಪನ್ನು ಅವರು ಹೊಸ ಎತ್ತರಕ್ಕೆ ಮುನ್ನಡೆಸಿದ್ದಾರೆ. ವೇತನ ಸಮಾನತೆಯಲ್ಲಿ ಗಮನಾರ್ಹ ಪ್ರಗತಿಯನ್ನು ಮಾಡಿದ್ದಾರೆ. ಮತ್ತು ಮಹಿಳಾ ಪ್ರೀಮಿಯರ್ ಲೀಗ್‌ನ ರಚನೆ, ಒಲಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ, ಹೀಗೆ ಅನೇಕ ಕಾರ್ಯಗಳ ಮೂಲಕ ಕ್ರಿಕೆಟ್ ಕ್ಷೇತ್ರದಲ್ಲಿ ಬದಲಾವಣೆಯನ್ನು ಮಾಡಿದ್ದಾರೆ” ಎಂದು ಬರೆದುಕೊಂಡಿತ್ತು. ಇದೀಗ ಈ ಪೋಸ್ಟ್ ನೋಡುವಾಗ ಜಯ್ ಶಾ ಅವರು ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಳೆದ ವರ್ಚದಿಂದಲೇ ಕಣ್ಣಿಟ್ಟಿದ್ದರು ಮತ್ತು ಈ ವಿಚಾರ ಬಿಸಿಸಿಐಗೂ ತಿಳಿದಿತ್ತು ಎನ್ನುವ ಅನುಮಾನ ಮೂಡಿಸಿದೆ.