ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ನಿಯೋಗದ ಪದಕದ ಬೇಟೆ ಮುಂದುವರಿದೆ. ಶನಿವಾರ ಒಂದು ಬಂಗಾರ ಸೇರಿ ನಾಲ್ಕು ಪದಕಗಳನ್ನು ಗೆದ್ದಿದ್ದ ಭಾರತದ ಪದಕದ ಖಾತೆಗೆ ಭಾನುವಾರ ಇನ್ನೊಂದು ಪದಕ ಜಮೆಯಾಗಿದೆ. ಇಂದೂ ಬಂದಿರುವುದು ಸ್ವರ್ಣ ಪದಕ. ಪದಕ ತಂದು ಕೊಟ್ಟವರೂ ವೇಟ್‌ಲಿಫ್ಟರ್. ಪುರುಷರ ೬೭ ಕೆ.ಜಿ ವಿಭಾಗದಲ್ಲಿ ಭಾರತದ ಯುವ ಪ್ರತಿಭೆ ಜೆರೆಮಿ ಲಾಲ್‌ರಿನುಂಗಾ ಬಂಗಾರದ ಪದಕ ಗೆದ್ದಿದ್ದಾರೆ. ಒಟ್ಟಾರೆ ೩೦೦ ಕೆ.ಜಿ ಭಾರ ಎತ್ತಿದ ಅವರು ಈ ವಿಭಾಗದಲ್ಲಿ ಕಾಮನ್ವೆಲ್ತ್ ಮಟ್ಟದ ನೂತನ ದಾಖಲೆ ಸೃಷ್ಟಿಸುವುದರೊಂದಿಗೆ ಸ್ವರ್ಣ ಪದಕದ ಮಾಲೆಗೆ ಕೊರಳೊಡ್ಡಿದರು.
ಜೆರೆಮಿ ಅವರ ಬಂಗಾರದ ಪದಕದೊಂದಿಗೆ ಭಾರತದ ಪ್ರಸಕ್ತ ಆವೃತ್ತಿಯ ಭಾರತದ ಪದಕಗಳ ಸಂಖ್ಯೆ ಐದಕ್ಕೆ ಏರಿದೆ. ಇದರಲ್ಲಿ ಎರಡು ಬಂಗಾರದ ಪದಕವಾದರೆ, ಇನ್ನೆರಡು ಬೆಳ್ಳಿ ಹಾಗೂ ಮತ್ತೊಂದು ಕಂಚಿನ ಪದಕವಾಗಿದೆ. ಇಷ್ಟೂ ಪದಕಗಳು ಭಾರತೀಯ ವೇಟ್‌ಲಿಫ್ಟರ್‌ಗಳ ಕೊಡುಗೆ. ಇನ್ನೊಂದು ಬಂಗಾರದ ಪದಕವನ್ನು ಶನಿವಾರ ರಾತ್ರಿ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಗೆದ್ದಿದ್ದರು. ಅವರೂ ಕಾಮನ್ವೆಲ್ತ್ ದಾಖಲೆಯೊಂದಿಗೆ ಬಂಗಾರದ ಪದಕ ಗೆದ್ದಿರುವುದು ವಿಶೇಷ. ಪುರುಷರ ವಿಭಾಗದಲ್ಲಿ ಸಂಕೇತ್ ಸರ್ಗರ್ ಬೆಳ್ಳಿ ಗೆದ್ದಿದ್ದರೆ, ಬಿಂದ್ಯಾರಾಣಿ ದೇವಿಯೂ ರಜತ ಪದಕ ತಮ್ಮದಾಗಿಸಿಕೊಂಡಿದ್ದರು. ಅಂತೆಯೇ ಕನ್ನಡಿಗ ಗುರುರಾಜ ಪೂಜಾರಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.
ಜೆರೆಮಿ ಸ್ನ್ಯಾಚ್ ವಿಭಾಗದಲ್ಲಿ ನೂತನ ದಾಖಲೆಯೊಂದಿಗೆ ೧೪೦ ಕೆ.ಜಿ ಭಾರ ಎತ್ತಿದರೆ, ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ ಅವರು ೧೬೦ ಕೆ.ಜಿ ಭಾರವನ್ನು ಎತ್ತಿದರು. ಒಟ್ಟಾರೆಯಾಗಿ ೩೦೦ ಕೆ.ಜಿ ಭಾರವನ್ನು ಎತ್ತುವ ಮೂಲಕವೂ ಅವರು ಕಾಮನ್ವೆಲ್ತ್ ಗೇಮ್ಸ್ ದಾಖಲೆ ಸೃಷ್ಟಿಸಿದರು.
ಸ್ನ್ಯಾಚ್ ವಿಭಾಗದ ಮೊದಲ ಪ್ರಯತ್ನದಲ್ಲಿ ಅವರು ೧೩೬ ಕೆ.ಜಿ ಭಾರ ಎತ್ತಿ ಪದಕದ ವಿಶ್ವಾಸ ಮೂಡಿಸಿದರು. ಅದು ಅವರ ಸಮೀಪದ ಪ್ರತಿಸ್ಪರ್ಧಿಗಳಿಗಿಂತ ೬ ಕೆ.ಜಿ ಹೆಚ್ಚು ಭಾರವಾಗಿದೆ. ಅಂತೆಯೇ ಎರಡನೇ ಪ್ರಯತ್ನದಲ್ಲಿ ಅವರು ದಾಖಲೆಯ ೧೪೦ ಕೆ.ಜಿ ಭಾರ ಎತ್ತಿದರು. ಮೂರನೇ ಪ್ರಯತ್ನದಲ್ಲಿ ೧೪೩ ಕೆ.ಜಿ ಭಾರ ಎತ್ತುವ ಪ್ರಯತ್ನ ಮಾಡಿದರೂ ಅದರಲ್ಲಿ ಸಾಫಲ್ಯ ಕಾಣಲಿಲ್ಲ.
ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ ಮೊದಲ ಯತ್ನದಲ್ಲೇ ೧೬೦ ಕೆ.ಜಿ ಭಾರ ಎತ್ತಿದ ಜೆರೆಮಿ ಲಾಲ್‌ರಿನುಂಗಾ, ಕಾಮನ್ವೆಲ್ತ್ ಮಟ್ಟದ ಈ ಹಿಂದಿನ ಒಟ್ಟಾರೆ ೨೯೪ ಕೆ.ಜಿಗಳ ದಾಖಲೆಯನ್ನು ಮುರಿದರು. ಅಂತೆಯೇ ಮುಂದಿನ ಪ್ರಯತ್ನದಲ್ಲಿ ಐದು ಕೆ.ಜಿ ಹೆಚ್ಚಳ ಮಾಡಿ ೧೬೫ ಕೆ.ಜಿಗೆ ಪ್ರಯತ್ನಿಸಿದರೂ ಅದರಲ್ಲಿ ಅವರು ವಿಫಲಗೊಂಡರು. ಜೆರೆಮಿ ಲಾಲ್‌ರಿನುಂಗಾ ಯೂತ್ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದಿದ್ದ ಅಥ್ಲೀಟ್.
ಇದನ್ನೂ ಓದಿ | CWG-2022 | ಚಾನು ಚಿನ್ನದ ಬಳಿಕ ಬಿಂದ್ಯಾರಾಣಿ ಬೆಳ್ಳಿ, ನಾಲ್ಕನೇ ಪದಕ ʻಎತ್ತಿತುʼ ಭಾರತ