ರಾಂಚಿ: ಇಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ (IND vs ENG) ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ನ ಮಾಜಿ ನಾಯಕ ಜೋ ರೂಟ್ (Joe Root) ತಮ್ಮ ಬ್ಯಾಟಿಂಗ್ ಫಾರ್ಮ್ಗೆ ಮರಳಿದ್ದಾರೆ. ಜೋ ರೂಟ್ ಪ್ರಸ್ತುತ ನಡೆಯುತ್ತಿರುವ ರೆಡ್ ಬಾಲ್ (Red Ball Cricket) ಸರಣಿಯಲ್ಲಿ ತಮ್ಮ ಮೊದಲ ಶತಕ ದಾಖಲಿಸಿದ್ದಾರೆ. ಅದಕ್ಕಿಂತ ಮೊದಲು ಅರ್ಧ ಶತಕ ಬಾರಿಸಿದ ತಕ್ಷಣ ಈ ಹಿಂದೆ ಅಲಸ್ಟೇರ್ ಕುಕ್ (Alastair Cook) ಸಾಧಿಸಿದ್ದ ಗಮನಾರ್ಹ ಮೈಲಿಗಲ್ಲನ್ನು ಮೀರಿಸಿದರು.
ಇಂಗ್ಲೆಂಡ್ನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ನಾಲ್ಕನೇ ಟೆಸ್ಟ್ಗೆ ಮುನ್ನ ರೂಟ್ ಫಾರ್ಮ್ ಕಾರಣಕ್ಕೆ ಟೀಕೆಗಳನ್ನು ಎದುರಿಸಿದ್ದರು. ಆದಾಗ್ಯೂ, ಬಲಗೈ ಬ್ಯಾಟ್ಸ್ಮನ್ ಫೆಬ್ರವರಿ 23ರ ಶುಕ್ರವಾರ ಇಂಗ್ಲೆಂಡ್ನ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಯೋಜಿತ ಶತಕ ಬಾರಿಸುವ ಮೂಲಕ ತನ್ನ ಟೀಕಾಕಾರರನ್ನು ಮೌನಗೊಳಿಸಿದರು.
ಬೆನ್ ಡಕೆಟ್ ಮತ್ತು ಒಲಿ ಪೋಪ್ ಔಟ್ ಆದ ಬಳಿಕ 33 ವರ್ಷದ ಬ್ಯಾಟರ್ 10ನೇ ಓವರ್ನ ಕ್ರೀಸ್ಗೆ ಬಂದರು. ಜೋ ರೂಟ್ ಮತ್ತು ಜಾನಿ ಬೇರ್ಸ್ಟೋವ್ ನಾಲ್ಕನೇ ವಿಕೆಟ್ಗೆ 52 ರನ್ಗಳ ಜೊತೆಯಾಟ ನೀಡಿದರು. ಆದಾಗ್ಯೂ, ರವಿಚಂದ್ರನ್ ಅಶ್ವಿನ್ ಬೇರ್ಸ್ಟೋವ್ ಅವರನ್ನು ಅನ್ನು ಔಟ್ ಮಾಡುವ ಮೂಲಕ ಜತೆಯಾಟ ಮುರಿದರು. ಬೇರ್ಸ್ವೋವ್ 35 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡ 38 ರನ್ ಗಳಿಸಿದ್ದರು.
ಅಲಸ್ಟೇರ್ ಕುಕ್ ದಾಖಲೆ ಮುರಿದ ಜೋ ರೂಟ್
ಊಟದ ವಿರಾಮದ ಮೊದಲು ರವೀಂದ್ರ ಜಡೇಜಾ ಕೇವಲ ಮೂರು ರನ್ ಗಳಿಸಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರ ವಿಕೆಟ್ ಪಡೆದರು. ಬಳಿಕ ವಿಕೆಟ್ ಕೀಪರ್-ಬ್ಯಾಟ್ ಬೆನ್ ಫೋಕ್ಸ್ ಅವರೊಂದಿಗೆ ನಿರ್ಣಾಯಕ ಪಾಲುದಾರಿಕೆಯನ್ನು ಪಡೆದ ಜೋ ರೂಟ್ ಇನ್ನಿಂಗ್ಸ್ ಇಂಗ್ಲೆಂಡ್ ಇನಿಂಗ್ಸ್ ಸ್ಥಿರಗೊಳಿಸಿದರು. ಅಲ್ಲದೆ 108 ಎಸೆತಗಳಲ್ಲಿ ಅರ್ಧಶತಕ ದಾಟಿದರು.
ಈ ಮೂಲಕ ಇಂಗ್ಲೆಂಡ್ ಪರ ಅತಿ ಹೆಚ್ಚು ಬಾರಿ ಅರ್ಧ ಶತಕ ಬಾರಿಸಿದ ಅಲೆಸ್ಟರ್ ಕುಕ್ ದಾಖಲೆಯನ್ನು ಜೋ ರೂಟ್ ಮುರಿದಿದ್ದಾರೆ. ನಾಲ್ಕನೇ ಕ್ರಮಾಂಕದ ಬ್ಯಾಟರ್ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 91 ನೇ 50 ಪ್ಲಸ್ ಸ್ಕೋರ್ ಪೂರ್ಣಗೊಳಿಸಿದರು. ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ 90 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿರುವ ಅಲೆಸ್ಟರ್ ಕುಕ್ ಎರಡನೇ ಸ್ಥಾನದಲ್ಲಿದ್ದಾರೆ.
ಜೋ ರೂಟ್ ಅತ್ಯುತ್ತಮ ಟೆಸ್ಟ್ ಬ್ಯಾಟರ್
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ಇತ್ತೀಚೆಗೆ ಮಾತನಾಡಿ, ಇಂಗ್ಲೆಡ್ ತಂಡದ “ಬಾಜ್ಬಾಲ್” ತಂತ್ರಗಳಿಂದಾಗಿ ಜೋ ರೂಟ್ ತಮ್ಮ ಸಾಂಪ್ರದಾಯಿಕ ಶೈಲಿಯಿಂದ ವಿಮುಖರಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ತಂಡದ ಇನ್ನಿಂಗ್ಸ್ ಅನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ರೂಟ್ ತಮ್ಮ ಸಹಜ ವಿಧಾನಕ್ಕೆ ಮರಳಬೇಕು ಎಂದು ಡಿವಿಲಿಯರ್ಸ್ ಒತ್ತಿ ಹೇಳಿದ್ದರು.
ಇದನ್ನೂ ಓದಿ : R Ashwin : ಕ್ರಿಕೆಟ್ ದಂತಕತೆಗಳ ಎಲೈಟ್ ಪಟ್ಟಿ ಸೇರಿದ ಆರ್ ಅಶ್ವಿನ್; ಏನಿದು ಸಾಧನೆ?
“ನಾನು ಅವರ (ರೂಟ್) ವಿರುದ್ಧ ಆಡಿದಾಗ ಅವರು ನಾನು ಆಡಿದ ಅತ್ಯುತ್ತಮ ಟೆಸ್ಟ್ ಬ್ಯಾಟರ್ಗಳಲ್ಲಿ ಒಬ್ಬರು ನಾನು ಭಾವಿಸಿದ್ದೆ. ಆದರೆ ಅದು ಬದಲಾಗಿದೆ ಮತ್ತು ಅದಕ್ಕೆ ಬಜ್ ಬಾಲ್ ಕಾರಣ. ಇದೀಗ ಅವರು ರಿವರ್ಸ್ ಸ್ವೀಪ್ ಹೊಡೆಯಲು ಹೋಗಿ ಔಟಾಗುತ್ತಿದ್ದಾರೆ. ತನ್ನ ನಿಯಮವನ್ನು ಮೀರುತ್ತಿದ್ದಾನೆ. ಅದು ನನಗೆ ಇಷ್ಟವಿಲ್ಲ, “ಎಂದು ಡಿವಿಲಿಯರ್ಸ್ ಹೇಳಿದ್ದರು.
“ಈ ರೀತಿಯ ಆಟಗಾರರಿಗೆ (ರೂಟ್) ಹೇಳಬೇಕು, ‘ ನೀವು ನಿಮ್ಮ ಸಹಜ ಆಟವನ್ನು ಆಡಿ. ನೀವು ಈ ಬ್ಯಾಟಿಂಗ್ ಲೈನ್ಅಪ್ ಮುಂದುವರಿಸಿ. ಬೆನ್ ಡಕೆಟ್ ಅಥವಾ ಬೆನ್ ಸ್ಟೋಕ್ಸ್ ಆಕ್ರಮಣಕಾರಿಯಾಗಿ ಆಡಲಿ. ರೂಟ್ ದೀರ್ಘಕಾಲ ಬ್ಯಾಟಿಂಗ್ ಮಾಡಲಿ, “ಎಂದು ಅವರು ಹೇಳಿದ್ದರು.
ಭಾರತ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ನಾಲ್ಕನೇ ಟೆಸ್ಟ್ಗೆ ಮೊದಲು ಆರು ಇನ್ನಿಂಗ್ಸ್ಗಳಲ್ಲಿ ಕೇವಲ 77 ರನ್ ಗಳಿಸಿದ್ದರು. ಅವರು ಔಟ್ ಆಗಿರುವ ರೀತಿ, ವಿಶೇಷವಾಗಿ ಹಿಂದಿನ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ರಿವರ್ಸ್ ಸ್ವೀಪ್ ಬಗ್ಗೆ ಮಾಜಿ ಆಟಗಾರರಿಂದ ಟೀಕೆಗಳನ್ನು ಎದುರಿಸಿದ್ದರು.